ಮೈದಾನದಲ್ಲೇ ಶಾರ್ದೂಲ್ ಠಾಕೂರ್‌ ಮೇಲೆ ತಾಳ್ಮೆ ಕಳೆದುಕೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ..!

Published : Jan 25, 2023, 12:09 PM IST
ಮೈದಾನದಲ್ಲೇ ಶಾರ್ದೂಲ್ ಠಾಕೂರ್‌ ಮೇಲೆ ತಾಳ್ಮೆ ಕಳೆದುಕೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ..!

ಸಾರಾಂಶ

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತ 3 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಶಾರ್ದೂಲ್ ಠಾಕೂರ್ ಪಂದ್ಯದ ವೇಳೆ ಶಾರ್ದೂಲ್ ಮೇಲೆ ಗರಂ ಆದ ನಾಯಕ ರೋಹಿತ್ ಶರ್ಮಾ

ಇಂದೋರ್‌(ಜ.25): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್ ಮಾಡಿದೆ. ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್‌ ಬಾರಿಸಿದ ಆಕರ್ಷಕ ಶತಕ ಹಾಗೂ ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ಶಿಸ್ತುಬದ್ದ ದಾಳಿಯ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಕಿವೀಸ್‌ ಎದುರು 90 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕ್ಲೀನ್‌ ಸ್ವೀಪ್ ಮಾಡಿ ಬೀಗಿದೆ. ಕೇವಲ 45 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಗೌರವ ಪ್ರಶಸ್ತಿಗೆ ಪಾತ್ರರಾದರು. ಇನ್ನು ಇದರ ಹೊರತಾಗಿಯೂ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್ ಮೇಲೆ ತಾಳ್ಮೆ ಕಳೆದುಕೊಂಡ ಘಟನೆಗೆ ಇಂದೋರ್‌ನ ಹೋಳ್ಕರ್ ಸ್ಟೇಡಿಯಂ ಸಾಕ್ಷಿಯಾಯಿತು.

ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್, ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟರ್‌ಗಳಾದ ಡೇರಲ್ ಮಿಚೆಲ್, ಟಾಮ್ ಲೇಥಮ್ ಹಾಗೂ ಗ್ಲೆನ್‌ ಫಿಲಿಫ್ಸ್‌ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂರು ವಿಕೆಟ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟಿತು. ಆದರೆ ಪಂದ್ಯದ ಒಂದು ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ ಬಗ್ಗೆ ನಾಯಕ ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದ ಘಟನೆಯೂ ನಡೆಯಿತು.

ಇನಿಂಗ್ಸ್‌ನ 27ನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್ ಬಳಿ ಹೋಗಿ, ಅವರು ಎಸೆಯುತ್ತಿದ್ದ ಲೆಂಗ್ತ್‌ ಬೌಲಿಂಗ್‌ ಬಗ್ಗೆ ತಮ್ಮ ಬೇಸರವನ್ನು ಹೊರಹಾಕಿದ್ದರು. ಇನ್ನೂ ಚೆನ್ನಾಗಿ ಬೌಲಿಂಗ್ ಮಾಡುವಂತೆಯೂ ರೋಹಿತ್ ಶರ್ಮಾ, ವೇಗಿ ಶಾರ್ದೂಲ್ ಠಾಕೂರ್‌ಗೆ ಸಲಹೆ ನೀಡಿದ್ದರು.

ಇಂದೋರ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ, ಟಿ20, ಏಕದಿನದಲ್ಲಿ ಟೀಂ ಇಂಡಿಯಾ ನಂ.1!

ಶಾರ್ದೂಲ್ ಠಾಕೂರ್, ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಭದ್ರ ಸ್ಥಾನ ಕಂಡುಕೊಳ್ಳಲು ವಿಫಲವಾಗಿದ್ದಾರೆ. ಆದರೆ, ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಶಾರ್ದೂಲ್‌ ಠಾಕೂರ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ಪಂದ್ಯ ಮುಕ್ತಾಯದ ಬಳಿಕ ಶಾರ್ದೂಲ್ ಠಾಕೂರ್ ಅವರ ಪ್ರದರ್ಶನವನ್ನು ನಾಯಕ ರೋಹಿತ್ ಶರ್ಮಾ ಗುಣಗಾನ ಮಾಡಿದ್ದಾರೆ. "ನಾವು ಚೆನ್ನಾಗಿಯೇ ಬೌಲಿಂಗ್ ಮಾಡಿದೆವು. ನಾವು ನಮ್ಮ ತಂತ್ರಗಾರಿಕೆಯಂತೆಯೇ ಯಾವುದೇ ಒತ್ತಡಕ್ಕೆ ಒಳಗಾಗದೇ ಬೌಲಿಂಗ್ ನಡೆಸಿದೆವು. ಶಾರ್ದೂಲ್ ನಮ್ಮ ತಂಡದ ಪರ ಚೆನ್ನಾಗಿಯೇ ಪ್ರದರ್ಶನ ತೋರುತ್ತಿದ್ದಾರೆ. ನಮ್ಮ ತಂಡದವರು ಆತನನ್ನು ಮಾಂತ್ರಿಕ ಎಂದೇ ಕರೆಯುತ್ತಾರೆ. ಇಂದು ಕೂಡಾ ಅಂತಹದ್ದೇ ಪ್ರದರ್ಶನವನ್ನು ತೋರಿದರು. ಅವರು ಮತ್ತಷ್ಟು ಪಂದ್ಯವನ್ನಾಡಬೇಕಿದೆ ಎಂದು ರೋಹಿತ್ ಶರ್ಮಾ, ಮುಂಬೈ ಮೂಲದ ಆಲ್ರೌಂಡರ್ ಗುಣಗಾನ ಮಾಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?