ಬಿಜೆಪಿ ಆಹ್ವಾನ ಧಿಕ್ಕರಿಸಿ ಚುನಾವಣೆ ಗೆದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

By Suvarna NewsFirst Published May 3, 2021, 11:28 AM IST
Highlights

ಬಿಜೆಪಿ ಆಹ್ವಾನವಿದ್ದರೂ, ವಲಸೆ ಕಾರ್ಮಿಕರನ್ನು ನಡೆಸಿಕೊಂಡ ರೀತಿಗೆ ಬೇಸತ್ತು ಟಿಎಂಸಿ ಪಕ್ಷ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮನೋಜ್ ತಿವಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೋಲ್ಕತ(ಮೆ.03): ಬಂಗಾಳ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ ರಾಜಕೀಯದ ಮೊದಲ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಮನೋಜ್ ತಿವಾರಿ ತಾವೆದುರಿಸಿದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು 6 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.

ಈ ಬಾರಿ ನಡೆದ ಪಂಚ ರಾಜ್ಯಗಳ ಚುನಾವಣೆಯ ಪೈಕಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಮನೋಜ್ ತಿವಾರಿ ಶಿಬ್‌ಪುರ್‌ದ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೇ.02ರಂದು ಪ್ರಕಟವಾದ ಫಲಿತಾಂಶದ ವೇಳೆ ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ರತಿನ್ ಚಕ್ರವರ್ತಿಯ ವಿರುದ್ದ 6 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಈ ಮೊದಲು ತಮ್ಮ ಪಕ್ಷ ಸೇರಲು ಬಿಜೆಪಿ ತಮಗೆ ಆಹ್ವಾನ ನೀಡಿತ್ತು. ಆದರೆ ಆಹ್ವಾನವನ್ನು ತಿರಸ್ಕರಿಸಿದ್ದಾಗಿ ತಿವಾರಿ ತಿಳಿಸಿದ್ದಾರೆ.

ಕಳೆದ ವರ್ಷ ದಿಢೀರ್ ಲಾಕ್‌ಡೌನ್ ಘೋಷಿಸಿದ ಬಳಿಕ ವಲಸೆ ಕಾರ್ಮಿಕರು ಪರದಾಡಿದ್ದ ರೀತಿಯನ್ನು ನೋಡಿ ನಾನು ರಾಜಕೀಯಕ್ಕೆ ಬರಲು ತೀರ್ಮಾನಿಸಿದೆ. ಬಿಜೆಪಿ ತಮ್ಮ ಪಕ್ಷ ಸೇರಲು ಆಹ್ವಾನ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಯಾವಾಗ ವಲಸೆ ಕಾರ್ಮಿಕರನ್ನು ಮಧ್ಯದಲ್ಲೇ ಕೈಬಿಟ್ಟು ಪರದಾಡುವಂತೆ ಮಾಡಿತೋ ಆಗಲೇ ನಾನು ತೀರ್ಮಾನಿಸಿದೆ ಬಿಜೆಪಿ ಸೇರಿದರೆ ನನ್ನ ತತ್ವಸಿದ್ದಾಂತಗಳಿಗೆ, ನಂಬಿಕೆಗಳಿಗೆ ಹಾಗೂ ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಂಡಂತೆ ಆಗುತ್ತದೆ ಎಂದು. ವಲಸೆ ಕಾರ್ಮಿಕರ ಪರಿಸ್ಥಿತಿ ನೋಡಿ ನಾನು ತಲ್ಲಣಿಸಿ ಹೋಗಿದ್ದೆ. ರೈಲ್ವೇ ಹಳಿಗಳ ಮೇಲೆ ವಲಸೆ ಕಾರ್ಮಿಕರ ಮೃತದೇಹ ನೋಡಿದಾಗ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮನೋಜ್ ತಿವಾರಿ ಹೇಳಿದ್ದಾರೆ. 

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ TMC ಪಕ್ಷ ಸೇರಿದ ಕ್ರಿಕೆಟಿಗ ಮನೋಜ್‌ ತಿವಾರಿ

ಹೀಗಾಗಿ ಬಿಜೆಪಿ ಆಹ್ವಾನವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. ಅವರು ಈವರೆಗೂ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕೋವಿಡ್ ಸಮಸ್ಯೆ ಸರಿಯಾದ ಎದುರಿಸದೇ ಇರುವುದು ಇದಕ್ಕೆ ಮತ್ತೊಂದು ಉದಾಹರಣೆಯಷ್ಟೇ ಎಂದು ಮನೋಜ್ ತಿವಾರಿ ದ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 294 ಸ್ಥಾನಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ 215 ಸ್ಥಾನಗಳನ್ನು ಜಯಿಸಿದರೆ, ಬಿಜೆಪಿ 75 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನು ಕಾಂಗ್ರೆಸ್ ಕೇವಲ 01 ಹಾಗೂ ಇತರರು 4 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

click me!