
"
ನವದೆಹಲಿ[ನ.18]: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶತಕ ಕೈತಪ್ಪಲು ಎಂ.ಎಸ್.ಧೋನಿಯೇ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್‌ನಲ್ಲಿ ಗಂಭೀರ್ 122 ಎಸೆತಗಳಲ್ಲಿ 97 ರನ್ ಗಳಿಸಿ ಔಟಾಗಿದ್ದರು. ಈ ಹಿಂದೆಯೂ ಗಂಭೀರ್ ವಿರುದ್ಧ ಹಲವಾರು ಬಾರಿ ಹರಿಹಾಯ್ದಿದ್ದಾರೆ.
ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!
ಭಾರತ ವಿಶ್ವಕಪ್ ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರವಹಿಸಿದ್ದರು. ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡುಲ್ಕರ್ ಔಟಾದ ಬಳಿಕ, ಗಂಭೀರ್ ನಾಯಕ ಧೋನಿ ಜತೆ ಸೇರಿ 109 ರನ್‌ಗಳ ಜೊತೆಯಾಟವಾಡಿದ್ದರು. ತಿಸಾರ ಪೆರೇರಾ ಎಸೆದ 42ನೇ ಓವರ್‌ನಲ್ಲಿ ಗಂಭೀರ್ ವಿಕೆಟ್ ಕಳೆದುಕೊಂಡಿದ್ದರು.
ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್!
ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ವಿಡಿಯೋ ಸಂದರ್ಶನದಲ್ಲಿ ಗಂಭೀರ್, ಧೋನಿ ವಿರುದ್ಧ ಹರಿಹಾಯ್ದಿದ್ದಾರೆ. ‘ನಾನೇಕೆ 97 ರನ್‌ಗಳಿಗೆ ಔಟಾದೆ, ಆಗ ಏನಾಯಿತು ಎನ್ನುವ ಪ್ರಶ್ನೆಯನ್ನು ಹಲವು ಬಾರಿ ಕೇಳಲಾಗಿದೆ. ನಾನು ಪ್ರತಿಯೊಬ್ಬರಿಗೂ ಹೇಳಲು ಇಚ್ಛಿಸುತ್ತೇನೆ, 97 ರನ್ ತಲುಪುವ ವರೆಗೂ ನಾನು ನನ್ನ ವೈಯಕ್ತಿಕ ಮೊತ್ತದ ಕಡೆ ಗಮನ ಹರಿಸಿರಲಿಲ್ಲ. ಶ್ರೀಲಂಕಾ ನೀಡಿದ್ದ ಗುರಿ ತಲುಪುವುದೊಂದೇ ನನ್ನ ತಲೆಯಲ್ಲಿತ್ತು’ ಎಂದು ಗಂಭೀರ್ ಹೇಳಿದ್ದಾರೆ.
ಗಂಭೀರ್ ಪ್ರಕಾರ ಅವರು ಶತಕದ ಸನಿಹದಲ್ಲಿದ್ದಾಗ ಧೋನಿ ವೈಯಕ್ತಿಕ ಮೈಲಿಗಲ್ಲಿನ ಬಗ್ಗೆ ನೆನಪಿಸಿದ್ದೇ ಔಟಾಗಲು ಕಾರಣ. ‘ನನಗೆ ನೆನಪಿದೆ. ನಾನು, ಧೋನಿ ಕ್ರೀಸ್ನಲ್ಲಿದ್ದೆವು. ಓವರ್ ಮುಗಿಯುತ್ತಿದ್ದಂತೆ ಧೋನಿ ನನ್ನ ಬಳಿ ಬಂದು ಕೇವಲ 3 ರನ್ ಬಾಕಿ ಇದೆ. 3 ರನ್ ಗಳಿಸಿದರೆ ನಿನ್ನ ಶತಕ ಪೂರ್ಣಗೊಳ್ಳಲಿದೆ ಎಂದರು. ತಕ್ಷಣ ನನ್ನ ಗಮನ ವೈಯಕ್ತಿಕ ಸಾಧನೆಯತ್ತ ಹೊರಳಿತು. ವೈಯಕ್ತಿಕ ಮೊತ್ತದ ಬಗ್ಗೆ ಯೋಚಿಸುವಾಗ ಏಕಾಗ್ರತೆ ಹಾಳಾಗುತ್ತದೆ. ನಾನು ಲಂಕಾ ನೀಡಿದ್ದ ಗುರಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಆಟ ಮುಂದುವರಿಸಿದ್ದರೆ ಸುಲಭವಾಗಿ ಶತಕ ಪೂರೈಸುತ್ತಿದ್ದೆ’ ಎಂದು ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.
Be Practical ಧೋನಿ ನಿವೃತ್ತಿಗೆ ’ಗಂಭೀರ’ ಸಲಹೆ
ಎಂ.ಎಸ್.ಧೋನಿ ಅಜೇಯ 91 ರನ್ ಗಳಿಸಿ, 28 ವರ್ಷಗಳ ಬಳಿಕ ಭಾರತ ತಂಡ ಏಕದಿನ ವಿಶ್ವ ಚಾಂಪಿಯನ್ ಆಗಲು ನೆರವಾಗಿದ್ದರು. 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಗಂಭೀರ್ 75 ರನ್ ಗಳಿಸಿ, ತಂಡಕ್ಕೆ ಆಸರೆಯಾಗಿದ್ದರು. ಎರಡೂ ಫೈನಲ್‌ಗಳಲ್ಲಿ ಗಂಭೀರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿರಲಿಲ್ಲ.
ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.