Virat Kohli ಅಂತಾರಾಷ್ಟ್ರೀಯ ಪಾದಾರ್ಪಣೆಗೆ 14 ವರ್ಷ ಭರ್ತಿ; ವಿಡಿಯೋ ಸಂದೇಶ ರವಾನಿಸಿದ ಕಿಂಗ್ ಕೊಹ್ಲಿ..!

By Naveen KodaseFirst Published Aug 18, 2022, 1:36 PM IST
Highlights

* ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 14 ವರ್ಷ ಭರ್ತಿ
* ವಿಶೇಷ ವಿಡಿಯೋವನ್ನು ಹಂಚಿಕೊಂಡ ಕಿಂಗ್ ಕೊಹ್ಲಿ
* 2008ರಲ್ಲಿ ಲಂಕಾ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ

ನವದೆಹಲಿ(ಆ.18): ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 14 ವರ್ಷಗಳಾಗಿವೆ. ಇದರ ಬೆನ್ನಲ್ಲೇ ಮಾಜಿ ನಾಯಕ ವಿರಾಟ್ ಕೊಹ್ಲಿ, ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ 14ನೇ ವರ್ಷದ ಸಂಭ್ರಮಾಚರಣೆಯನ್ನು ಮೆಲುಕು ಹಾಕಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, 2008ರ ಆಗಸ್ಟ್ 18ರಂದು ಶ್ರೀಲಂಕಾ ಎದುರು ದಂಬುಲ್ಲಾದಲ್ಲಿ ಏಕದಿನ ಕ್ರಿಕೆಟ್ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಿರಿಯರ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ವಿರಾಟ್ ಕೊಹ್ಲಿ, ಭರ್ಜರಿಯಾಗಿಯೇ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದರು. ಡೆಲ್ಲಿ ಮೂಲದ ವಿರಾಟ್ ಕೊಹ್ಲಿ, ಮತ್ತೋರ್ವ ಡೆಲ್ಲಿ ಕ್ರಿಕೆಟಿಗ ಗೌತಮ್‌ ಗಂಭೀರ್ ಜತೆ ಲಂಕಾ ಎದುರಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ತಮ್ಮ ಪಾದಾರ್ಪಣೆ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದರು. ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ವೇಗಿ ನುವಾನ್ ಕುಲಸೇಖರಗೆ ವಿಕೆಟ್ ಒಪ್ಪಿಸಿದ್ದರು. ಆ ಪಂದ್ಯದಲ್ಲಿ ಶ್ರೀಲಂಕಾ ತಂಡವು 8 ವಿಕೆಟ್‌ಗಳ ಜಯ ದಾಖಲಿಸಿತ್ತು. ಇದಾದ  ಬಳಿಕ ವಿರಾಟ್ ಕೊಹ್ಲಿ ಹಂತ ಹಂತವಾಗಿ ಬೆಳೆದುನಿಂತು, ಈಗ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. 

ವಿರಾಟ್‌ ಕೊಹ್ಲಿ, ಕಳೆದ ಒಂದೂವರೆ ದಶಕದಿಂದ ಭಾರತ ಕ್ರಿಕೆಟ್‌ ತಂಡದ ಮೂರು ಮಾದರಿಯಲ್ಲೂ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ ಇದುವರೆಗೂ ಭಾರತ ಪರ 102 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 27 ಶತಕ ಸಹಿತ 8,072 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲೂ ಪ್ರಾಬಲ್ಯ ಮೆರೆದಿರುವ ವಿರಾಟ್ ಕೊಹ್ಲಿ, 262 ಪಂದ್ಯಗಳನ್ನಾಡಿ 43 ಶತಕ ಸಹಿತ 12,344 ರನ್‌ ಬಾರಿಸಿದ್ದಾರೆ.  ಇನ್ನು ಭಾರತ ಪರ 99 ಟಿ20 ಪಂದ್ಯಗಳನ್ನಾಡಿ 50.1ರ ಬ್ಯಾಟಿಂಗ್ ಸರಾಸರಿಯಲ್ಲಿ 3,308 ರನ್ ಬಾರಿಸಿದ್ದಾರೆ.

Ind vs Pak ಭಾರತವನ್ನು ಎದುರಿಸುವಾಗ ಯಾವಾಗಲೂ ಒತ್ತಡವಿರುತ್ತೆ: ಪಾಕ್ ನಾಯಕ ಬಾಬರ್ ಅಜಂ

ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 14 ವರ್ಷ ತುಂಬಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ, ಭಾರತ ತಂಡದೊಂದಿಗಿನ ಹಲವು ಅವಿಸ್ಮರಣೀಯ ಕ್ಷಣಗಳ ಫೋಟೋವಿರುವ ವಿಡಿಯೋದೊಂದಿಗೆ, 14 ವರ್ಷಗಳ ಹಿಂದೆ ಇದೆಲ್ಲವೂ ಆರಂಭವಾಯಿತು. ಇದು ನನ್ನ ಪಾಲಿಗೆ ಅತ್ಯಂತ ಗೌರವದ ವಿಚಾರವಾಗಿದೆ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Virat Kohli (@virat.kohli)

ಭಾರತ ಪರ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ವಿರಾಟ್ ಕೊಹ್ಲಿಯವರ ಸದ್ಯದ ಫಾರ್ಮ್‌ ಚರ್ಚೆಯ ಕೇಂದ್ರ ಬಿಂದು ಎನಿಸಿಕೊಂಡಿದೆ. ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ವಿರಾಟ್ ಕೊಹ್ಲಿಯನ್ನು ಹೊರಗಿಡಬೇಕು ಎನ್ನುವ ಆಗ್ರಹ ಕೂಡಾ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಇದೇ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಟೀಕಾಕಾರರಿಗೆ ತಮ್ಮ ಬ್ಯಾಟ್‌ನಿಂದಲೇ ಉತ್ತರಿಸಲು ಕಿಂಗ್ ಕೊಹ್ಲಿ ರೆಡಿಯಾಗಿದ್ದಾರೆ.

click me!