
ಹರಾರೆ(ಆ.18): ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಮೊದಲು ಬೌಲಿಂಗ್ ಮಾಡುವ ಮೂಲಕ ಉತ್ತಮ ಆರಂಭ ಪಡೆಯಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಸಾಕಷ್ಟು ಬಿಡುವಿನ ಬಳಿಕ ತಂಡ ಕೂಡಿಕೊಳ್ಳುವಲ್ಲಿ ದೀಪಕ್ ಚಹಾರ್ ಯಶಸ್ವಿಯಾಗಿದ್ದಾರೆ.
ಭಾರತ ಪರ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಸ್ಪೋಟಕ ಎಡಗೈ ಬ್ಯಾಟರ್ ಇಶಾನ್ ಕಿಶನ್, ಕೆ ಎಲ್ ರಾಹುಲ್, ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಭಾರತ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಲಿದ್ದಾರೆ. ಇನ್ನು ಆಲ್ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್ ಪಟೇಲ್ ಹಾಗೂ ದೀಪಕ್ ಚಹಾರ್ ಕಣಕ್ಕಿಳಿದರೇ, ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್ ಯಾದವ್, ಪ್ರಸಿದ್ದ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್, ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
Ind vs Zim: ಇಂದಿನಿಂದ ಭಾರತ-ಜಿಂಬಾಬ್ವೆ ಏಕದಿನ ಕದನ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 63 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪ್ರವಾಸಿ ಟೀಂ ಇಂಡಿಯಾ ಸಹಜವಾಗಿಯೇ ಸ್ಪಷ್ಟ ಮೇಲುಗೈ ಸಾಧಿಸಿದೆ. 63 ಪಂದ್ಯಗಳ ಪೈಕಿ ಭಾರತ ಕ್ರಿಕೆಟ್ ತಂಡವು 51 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ಜಿಂಬಾಬ್ವೆ ತಂಡವು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 2 ಪಂದ್ಯಗಳು ಟೈ ಆಗಿದ್ದವು.
ಭಾರತ ಕ್ರಿಕೆಟ್ ತಂಡವು ಕಳೆದ 12 ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಎದುರು ಗೆಲುವು ಸಾಧಿಸಿದ್ದು, ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ಇದುವರೆಗೆ ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಒಮ್ಮೆಯೂ ಸರಣಿಯನ್ನು ಸೋತಿಲ್ಲ. ಇನ್ನೊಂದೆಡೆ ತವರಿನಲ್ಲಿ ಜಿಂಬಾಬ್ವೆ ತಂಡ ಇತ್ತೀಚೆಗಷ್ಟೇ ಬಾಂಗ್ಲಾದೇಶವನ್ನು ಮಣಿಸಿದ್ದು, ತುಂಬು ಆತ್ಮವಿಶ್ವಾಸದಲ್ಲಿದೆ. 3 ಪಂದ್ಯಗಳಲ್ಲಿ ಎರಡು ಬಾರಿ 290+ ರನ್ ಗುರಿ ಬೆನ್ನತ್ತಿ ಗೆದ್ದಿರುವ ಜಿಂಬಾಬ್ವೆ ತಂಡವು ಬಲಿಷ್ಠ ಭಾರತ ಕ್ರಿಕೆಟ್ ತಂಡಕ್ಕೆ ತಿರುಗೇಟು ನೀಡಲು ತುದಿಗಾಲಿನಲ್ಲಿ ನಿಂತಿದೆ.
ಮೊದಲ ಏಕದಿನ ಪಂದ್ಯಕ್ಕೆ ತಂಡಗಳು ಹೀಗಿವೆ ನೋಡಿ
ಭಾರತ ಕ್ರಿಕೆಟ್ ತಂಡ;
ಶಿಖರ್ ಧವನ್, ಶುಭ್‌ಮನ್ ಗಿಲ್, ಇಶಾನ್ ಕಿಶನ್, ಕೆ ಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಹರ್, ಕುಲ್ದೀಪ್ ಯಾದವ್, ಪ್ರಸಿದ್ದ್ ಕೃಷ್ಣ, ಮೊಹಮ್ಮದ್ ಸಿರಾಜ್
ಜಿಂಬಾಬ್ವೆ ಕ್ರಿಕೆಟ್ ತಂಡ:
ತಡಿವಾನ್ಸೆ ಮರುಮನಿ, ಇನೋಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲೆ ಮಡೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ(ನಾಯಕ& ವಿಕೆಟ್ ಕೀಪರ್), ರಯಾನ್ ಬುರ್ಲ್, ಲೂಕ್ ಜೋಗ್ವೆ, ಬ್ರಾಡ್ಲೆ ಎವಾನ್ಸ್, ವಿಕ್ಟರ್ ನ್ಯುವಾಚಿ, ರಿಚರ್ಡ್ ನಗರವ.
ಸ್ಥಳ: ಹರಾರೆ
ಸಮಯ: ಮಧ್ಯಾಹ್ನ 12.45ಕ್ಕೆ
ನೇರಪ್ರಸಾರ: ಸೋನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.