ಕೊರೋನಾ ವೈರಸ್, ಲಾಕ್‌ಡೌನ್, ಸರ್ಕಾರದ ಮಾರ್ಗಸೂಚಿ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿ ಸೇರಿದಂತೆ ಹಲವು ಅಡೆತಡೆ ನಿವಾಸಿದ BCCI ಇದೀಗ IPL2020 ಆಯೋಜನೆಗೆ ಸಜ್ಜಾಗಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ತಯಾರಿಗಳು ಭರದಿಂದ ಸಾಗಿದೆ. ಇದರ ನಡುವೆ ಅಭಿಮಾನಿಗಳೇ ಐಪಿಎಲ್ ಟೂರ್ನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.
ಮುಂಬೈ(ಆ.03): ಸಾವಿರಾರು ಕೋಟಿ ರೂಪಾಯಿ ನಷ್ಟ ಕೊಂಚ ಮಟ್ಟಿಗೆ ಸರಿದೂಗಿಸಲು ಬಿಸಿಸಿಐ ಹೆಣಗಾಡುತ್ತಿದೆ. ಹೀಗಾಗಿ ಶತಾಯಗತಾಯ IPL 2020 ಟೂರ್ನಿ ಆಯೋಜನೆಗೆ ಮುಂದಾಗಿತ್ತು. ಆದರೆ ನಿಲ್ಲದ ಕೊರೋನಾ ವೈರಸ್, ಲಾಕ್‌ಡೌನ್, ಅನ್‌ಲಾಕ್ ಮಾರ್ಗಸೂಚಿಗಳಿಂದ ಭಾರತದಲ್ಲಿ ಐಪಿಎಲ್ ಆಯೋಜನೆ ಅಸಾಧ್ಯವಾಯಿತು. ಇಷ್ಟೇ ಅಲ್ಲ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳು ಬಿಸಿಸಿಐ ಆತಂಕ ಹೆಚ್ಚಿಸಿತ್ತು. ಈ ಎಲ್ಲಾ ಸಮಸ್ಯೆ ನಿವಾರಿಸಿ ಐಪಿಎಲ್ ಟೂರ್ನಿ ತಯಾರಿ ಆರಂಭಿಸಿದ ಬೆನ್ನಲ್ಲೇ ಇದೀಗ ಅಭಿಮಾನಿಗಳೇ ಐಪಿಎಲ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!.
ಐಪಿಎಲ್ ಗರ್ವನಿಂಗ್ ಕೌನ್ಸಿಲ್ ನಡೆಸಿದ ಮಹತ್ವದ ಸಭೆಯಲ್ಲಿ ಪ್ರಾಯೋಜಕತ್ವ ಉಳಿಸಿಕೊಳ್ಳಲು ನಿರ್ಧರಿಸಿದೆ. ಇದೇ ಅಭಿಮಾನಿಗಳ ವಿರೋಧಕ್ಕೆ ಕಾರಣವಾಗಿದೆ. ಭಾರತ ಹಾಗೂ ಚೀನಾ ನಡುವಿನ ಲಡಾಖ್ ಗಡಿ ಸಂಘರ್ಷದ ಬಳಿಕ ಚೀನಾ ವಸ್ತುಗಳಿಗೆ ಬಹಿಷ್ಕಾರ, ಆ್ಯಪ್‌ಗಳಿಗೆ ನಿರ್ಬಂಧ ಹಾಕಲಾಗಿದೆ. ಆದರೆ ಐಪಿಎಲ್ ಟೈಟಲ್ ಪ್ರಾಯೋಜಕತ್ವ ವಿವೋ ಮೊಬೈಲ್ ಹಾಗೂ ಇತರ ಚೀನಾ ಕಂಪನಿಗಳ ಪ್ರಾಯೋಜಕತ್ವ ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಐಪಿಎಲ್ 2020: ಫ್ರಾಂಚೈಸಿಗಳ ಮುಂದೆ ಎದುರಾಗಿವೆ ಹಲವು ಸವಾಲು..!...
ಚೀನಾ ಪ್ರಾಯೋಜಕತ್ವ ತೆಗೆದುಹಾಕಲು ಸಾಧ್ಯವಾಗದಿದ್ದರೆ ನಾವು ಐಪಿಎಲ್ ಟೂರ್ನಿಯನ್ನೇ ಬಹಿಷ್ಕರಿಸುತ್ತಿದ್ದೇವೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ #boycottipl (ಬಾಯ್‌ಕಾಟ್ ಐಪಿಎಲ್) ಎಂದು ಅಭಿಯಾನ ಆರಂಭಿಸಿದ್ದಾರೆ.
ಚೀನಾ ಪ್ರಾಯೋಜಕತ್ವವಿರುವ ಐಪಿಎಲ್ ಟೂರ್ನಿಯನ್ನು ವೀಕ್ಷಿಸುವುದಿಲ್ಲ ಎಂದು ಅಭಿಮಾನಿಗಳ ಗುಂಪೊಂದು ಅಭಿಯಾನ ಆರಂಭಿಸಿದೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಪ್ರಾಯೋಜಕತ್ವದಿಂದ ಎಲ್ಲರಿಗೂ ಲಾಭವಾಗಲಿದೆ. ಚೀನಾ ವಸ್ತುಗಳ ಖರೀದಿ ಬೇಕೋ ಬೇಡವೋ ಎಂದು ಭಾರತೀಯರು ನಿರ್ಧರಿಸಬೇಕು. ಪ್ರಾಯೋಜಕತ್ವ ಸೇರಿದಂತೆ ಹಲವು ಮೂಲಗಳ ಹಣದಿಂದ ಭಾರತೀಯ ಕ್ರಿಕೆಟ್ ಶ್ರೀಮಂತವಾಗಿರುವುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
2020ರ ಐಪಿಎಲ್ ಟೂರ್ನಿ ದುಬೈ, ಶಾರ್ಜಾ ಹಾಗೂ ಅಬುದಾಬಿಯಲ್ಲಿ ಆಯೋಜಿಲಾಗಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10ರ ವರೆಗೆ ಟೂರ್ನಿ ನಡೆಯಲಿದೆ.