ನಾನು ಜನಾಂಗೀಯ ನಿಂದನೆ ಎದುರಿಸಿದ್ದೇನೆಂದ ಇಂಗ್ಲೆಂಡ್ ಮಾರಕ ವೇಗಿ..!

By Suvarna NewsFirst Published Jul 23, 2020, 9:03 AM IST
Highlights

ಇಂಗ್ಲೆಂಡ್ ಮಾರಕ ವೇಗಿ ಜೋಫ್ರಾ ಆರ್ಚರ್ ತಾವೆದುರಿಸಿದ ಜನಾಂಗೀಯ ನಿಂದನೆಯ ಬಗ್ಗೆ ತುಟಿಬಿಚ್ಚಿದ್ದಾರೆ. ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಮುನ್ಸೂಚನೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಲಂಡನ್(ಜು.23)‌: ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಆಡದೇ ಇದ್ದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಮತ್ತು ಮಾನಸಿಕ ದೌರ್ಬಲ್ಯವನ್ನು ಅನುಭವಿಸಿದ್ದೆ ಎಂದು ಇಂಗ್ಲೆಂಡ್‌ ತಂಡದ ವೇಗಿ ಜೋಫ್ರಾ ಆರ್ಚರ್‌ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ದೂರು ನೀಡುವುದಾಗಿ ಆರ್ಚರ್‌ ತಿಳಿಸಿದ್ದಾರೆ. ಬಯೋ ಸೆಕ್ಯೂರ್‌ ನಿಯಮ ಉಲ್ಲಂಘಿಸಿ ಬ್ರೈಟನ್‌ನಲ್ಲಿರುವ ತಮ್ಮ ನಿವಾಸಕ್ಕೆ ಹೋಗಿದ್ದರಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ರನ್ನು ಕೈಬಿಡಲಾಗಿತ್ತು.

ಐಪಿ​ಎಲ್‌ನಲ್ಲಿನ ಆ 'ಕರಾಳ' ಘಟನೆಯನ್ನು ಬಿಚ್ಚಿಟ್ಟ ವಿಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ

ಬಯೋ ಸೆಕ್ಯೂರ್ ನಿಯಮ ಉಲ್ಲಂಘಿಸಿದ ಬಳಿಕ ಜೋಫ್ರಾ ಆರ್ಚರ್ ಬಹಿರಂಗವಾಗಿಯೇ ಕ್ಷಮೆ ಯಾಚಿಸಿದ್ದರು. ಬಳಿಕ ಒಂದು ವಾರಗಳ ಕಾಲ ಐಸೋಲೇಷನ್‌ಗೆ ಒಳಗಾಗಿದ್ದರು. ಬಳಿಕ ಎರಡು ಕೋವಿಡ್ ಟೆಸ್ಟ್‌ಗೂ ಒಳಪಟ್ಟಿದ್ದರು. ಕೊರೋನಾ ಟೆಸ್ಟ್‌ ವರದಿ ನೆಗೆಟಿವ್ ಬಂದಿತ್ತು. ಬಳಿಕ ತಂಡ ಕೂಡಿಕೊಂಡಿದ್ದರು. ಆದರೆ ಆರ್ಚರ್ ಇದೀಗ ವಿಂಡೀಸ್ ವಿರುದ್ಧ ಇದೇ ಶುಕ್ರವಾರ(ಜು.24)ದಿಂದ ಆರಂಭವಾಗಲಿರುವ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್‌ನಲ್ಲಿ ಆಡುವುದು ಅನುಮಾನ ಎನಿಸಿದೆ

ನಾನು ಮಾನಸಿಕವಾಗಿ ಫಿಟ್ ಇದ್ದರೆ ಮಾತ್ರ ಆಡುತ್ತೇನೆ, ಇಲ್ಲದಿದ್ದರೆ ಇದೊಂದು ವಾರ ಕ್ರಿಕೆಟ್‌ನಿಂದ ದೂರವೇ ಉಳಿಯುತ್ತೇನೆ ಎಂದು ಅರ್ಚರ್ ಹೇಳಿದ್ದಾರೆ. ನಾನು ಆಡದಿದ್ದರೂ ಇಂಗ್ಲೆಂಡ್ ಗೆಲ್ಲುವ ಸಾಮರ್ಥ್ಯ ಹೊಂದಿದೆ. ತಂಡದಲ್ಲಿ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್‌ಸನ್, ಕ್ರಿಸ್ ವೋಕ್ಸ್ ಹಾಗೂ ಸ್ಯಾಮ್ ಕರನ್ ಅವರಂತಹ ಮಾರಕ ವೇಗಿಗಳಿದ್ದಾರೆ ಎಂದು ಬಾರ್ಬೊಡೋಸ್ ಮೂಲದ ಆರ್ಚರ್ ಹೇಳಿದ್ದಾರೆ.
ಅಮೆರಿಕಾದಲ್ಲಿ ಮೇ ತಿಂಗಳಂತ್ಯದ ವೇಳೆಗೆ ಪೊಲೀಸ್‌ವೊಬ್ಬ ಕಪ್ಪುವರ್ಣೀಯ ಜಾರ್ಜ್ ಪ್ಲೋಯ್ಡ್ ಅವರನ್ನು ಉಸಿರುಗಟ್ಟಿಸಿ ಸಾಯಿಸಿದ್ದನು. ಇದಾದ ಬಳಿಕ ಈ ಘಟನೆಯ ವಿರುದ್ಧ ಜಗತ್ತಿನಾದ್ಯಂತ ಉಗ್ರ ಹೋರಾಟಗಳು ನಡೆದಿದ್ದವು. ಇದರ ಬೆನ್ನಲ್ಲೇ ಹಲವು ಕ್ರಿಕೆಟಿಗರು ತಾವೆದುರಿಸಿದ್ದ ಜನಾಂಗೀಯ ಅವಮಾನಗಳ ಬಗ್ಗೆ ತುಟಿಬಿಚ್ಚಿದ್ದರು. ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ ಈ ಸಾಲಿನಲ್ಲಿ ಮೊದಲಿಗರೆನಿಸಿದ್ದರು.

click me!