ಐಪಿಎಲ್‌ ಭಾಗ-2: ಇಂಗ್ಲೆಂಡ್‌ ಕ್ರಿಕೆಟಿಗರು ಅಲಭ್ಯ?

By Suvarna NewsFirst Published May 12, 2021, 1:27 PM IST
Highlights

* ಕೋವಿಡ್ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂದೂಡಿಕೆ

* ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್‌ ಆಟಗಾರರು ಪಾಲ್ಗೊಳ್ಳುವುದು ಅನುಮಾನ

* 11 ಇಂಗ್ಲೆಂಡ್‌ ಆಟಗಾರರು ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಲಂಡನ್(ಮೇ.12)‌: ಐಪಿಎಲ್‌ 14ನೇ ಆವೃತ್ತಿ ಭಾಗ-2ರಲ್ಲಿ ಇಂಗ್ಲೆಂಡ್‌ ಆಟಗಾರರು ಆಡುವುದು ಅನುಮಾನ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ನಿರ್ದೇಶಕ ಆಶ್ಲೆ ಜೈಲ್ಸ್‌ ತಿಳಿಸಿದ್ದಾರೆ. 

ಐಪಿಎಲ್‌ ನಡೆಸಲು ಬಿಸಿಸಿಐಗೆ ಎರಡು ಆಯ್ಕೆಗಳಿವೆ. ಒಂದು ಐಸಿಸಿ ಟಿ20 ವಿಶ್ವಕಪ್‌ಗೂ ಮೊದಲು. ಅಂದರೆ ಸೆಪ್ಟೆಂಬರ್‌ನಲ್ಲಿ. ಇಲ್ಲವೇ ಟಿ20 ವಿಶ್ವಕಪ್‌ ನಂತರ. ಅಂದರೆ ನವೆಂಬರ್‌, ಡಿಸೆಂಬರ್‌ನಲ್ಲಿ. ಈ ಸಮಯದಲ್ಲಿ ಇಂಗ್ಲೆಂಡ್‌ ತಂಡ ದ್ವಿಪಕ್ಷೀಯ ಸರಣಿಗಳನ್ನು ಆಡಲಿದೆ. ಐಸಿಸಿ ಟಿ20 ವಿಶ್ವಕಪ್‌ಗೂ ಮೊದಲು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌ ತಂಡ, ವಿಶ್ವಕಪ್‌ ಬಳಿಕ ಆಸ್ಪ್ರೇಲಿಯಾ ವಿರುದ್ಧ ಆ್ಯಷಸ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ಐಪಿಎಲ್‌ನಲ್ಲಿ ಆಡುವುದು ಅನುಮಾನವೆನಿಸಿದೆ.

ಜೋಸ್ ಬಟ್ಲರ್, ಜಾನಿ ಬೇರ್‌ಸ್ಟೋವ್, ಮೋಯಿನ್ ಅಲಿ, ಇಯಾನ್‌ ಮಾರ್ಗನ್‌. ಕರ್ರನ್ ಬ್ರದರ್ಸ್‌, ಬೆನ್ ಸ್ಟೋಕ್ಸ್ ಸೇರಿದಂತೆ 11 ಆಟಗಾರರು ಐಪಿಎಲ್ ಟೂರ್ನಿಯಲ್ಲಿ ವಿವಿಧ ಫ್ರಾಂಚೈಸಿಗಳನ್ನು ಪ್ರತಿನಿಧಿಸುತ್ತಿದ್ದಾರೆ. 

ಲಂಕಾ ಪ್ರವಾಸ: ಧವನ್‌ ಇಲ್ಲವೇ ಹಾರ್ದಿಕ್‌ ಟೀಂ ಇಂಡಿಯಾ ನಾಯಕ?

ಐಪಿಎಲ್‌ ಮತ್ತೆ ಯಾವಾಗ ಆರಂಭವಾಗಲಿದೆ ಎನ್ನುವುದರ ಕುರಿತಂತೆ ಸದ್ಯಕ್ಕಂತೂ ನಮಗೆ ಯಾವುದೇ ಮಾಹಿತಿಯಿಲ್ಲ. ಎಲ್ಲಿ ಹಾಗೂ ಯಾವಾಗ ಟೂರ್ನಿ ಪುನರಾರಂಭವಾಗಲಿದೆ ಎನ್ನುವುದು ಗೊತ್ತಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಲು ಆರಂಭಿಸಿದ ಬಳಿಕ ಆಟಗಾರರಿಗೆ ಬಿಡುವೇ ಇರದಷ್ಟು ವೇಳಾಪಟ್ಟಿ ಸಿದ್ದವಾಗಿದೆ ಎಂದು ಆಶ್ಲೆ ಜೈಲ್ಸ್‌ ಹೇಳಿದ್ದಾರೆ.

ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೋವಿಡ್‌ ಕಾರಣದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಬಯೋ ಬಬಲ್‌ನೊಳಗಿದ್ದ ಕೆಕೆಆರ್‌ ಬೌಲರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್‌ಗೆ ಮೊದಲಿಗೆ ಕೋವಿಡ್ ದೃಢಪಟ್ಟಿತ್ತು. ಮರುದಿನ ಅಮಿತ್ ಮಿಶ್ರಾ ಹಾಗೂ ವೃದ್ದಿಮಾನ್‌ ಸಾಹಗೆ ಕೋವಿಡ್‌ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮೇ 04ರಂದು ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
 

click me!