ಲಂಕಾ ಪ್ರವಾಸ: ಧವನ್‌ ಇಲ್ಲವೇ ಹಾರ್ದಿಕ್‌ ಟೀಂ ಇಂಡಿಯಾ ನಾಯಕ?

By Suvarna NewsFirst Published May 12, 2021, 12:24 PM IST
Highlights

* ಜುಲೈ ತಿಂಗಳಿನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡ

* ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಧವನ್ ಇಲ್ಲವೇ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಮುನ್ನಡೆಸುವ ಸಾಧ್ಯತೆ

* ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿ ಆಡಲಿರುವ ಭಾರತ ತಂಡ

ನವದೆಹಲಿ(ಮೆ.12): ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ತಂಡಕ್ಕೆ ಹೊಸ ನಾಯಕನನ್ನು ನೇಮಿಸಬೇಕಾದ ಅನಿವಾರ್ಯತೆ ಬಿಸಿಸಿಐಗಿದೆ. ಬಿಸಿಸಿಐ ಮೂಲಗಳ ಪ್ರಕಾರ ಶಿಖರ್‌ ಧವನ್‌ ಹಾಗೂ ಹಾರ್ದಿಕ್‌ ಪಾಂಡ್ಯ ನಡುವೆ ನಾಯಕತ್ವಕ್ಕೆ ಪೈಪೋಟಿ ಇದೆ ಎನ್ನಲಾಗಿದೆ.

ಕಾಯಂ ನಾಯಕ ವಿರಾಟ್‌ ಕೊಹ್ಲಿ, ಉಪನಾಯಕ ರೋಹಿತ್‌ ಶರ್ಮಾ ಜೂನ್‌ನಲ್ಲೇ ಇಂಗ್ಲೆಂಡ್‌ಗೆ ತೆರಳಲಿದ್ದು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದ್ದಾರೆ. ಈ ಹಿಂದೆ ನಾಯಕರಾಗಿದ್ದ ಅಜಿಂಕ್ಯ ರಹಾನೆ ಸಹ ಇಂಗ್ಲೆಂಡ್‌ ಟೆಸ್ಟ್‌ ತಂಡದಲ್ಲಿದ್ದಾರೆ. ಹೀಗಾಗಿ, ಹೊಸ ನಾಯಕನನ್ನು ನೇಮಿಸಬೇಕಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಶ್ರೀಲಂಕಾ ಸರಣಿಗೆ ಶ್ರೇಯಸ್ ಅಯ್ಯರ್, ಕೆ.ಎಲ್‌ ರಾಹುಲ್ ಇಲ್ಲವೇ ಶಿಖರ್ ಧವನ್ ಭಾರತ ತಂಡದ ನಾಯಕರಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವದ ಬಗ್ಗೆ ಬಿಸಿಸಿಐ ಗಮನ ಹರಿಸಬೇಕು ಎಂದು ಓಜಾ ತಿಳಿಸಿದ್ದಾರೆ.

ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಕೋಚ್‌ ರಾಹುಲ್ ದ್ರಾವಿಡ್..?

ನೀವು ಹೊಸ ತಂಡವನ್ನು ಲಂಕಾ ಪ್ರವಾಸಕ್ಕೆ ಕಳಿಸುವಾಗ ಅನುಭವವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಇಲ್ಲವೇ ಕೆ.ಎಲ್. ರಾಹುಲ್ ಲಂಕಾ ಪ್ರವಾಸಕ್ಕೆ ಆಯ್ಕೆಗೆ ಲಭ್ಯವಿದ್ದರೆ ಈ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ನಾಯಕರನ್ನಾಗಿ ಆಯ್ಕೆಮಾಡಬಹುದು. ಇಲ್ಲವೇ ಶಿಖರ್‌ ಧವನ್‌ಗೆ ಅನುಭವದ ಆಧಾರದಲ್ಲಿ ನಾಯಕತ್ವ ನೀಡಬಹುದು ಎಂದು ಓಜಾ ಹೇಳಿದ್ದಾರೆ

ಇನ್ನು ಲಂಕಾ ಪ್ರವಾಸಕ್ಕೆ 'ದ ವಾಲ್‌' ಖ್ಯಾತಿಯ ರಾಹುಲ್ ದ್ರಾವಿಡ್‌ ಭಾರತ ತಂಡದ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ನಾಯಕ ಹಾಗೂ ಕೋಚ್ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ.

click me!