ಪಾಕಿಸ್ತಾನ ನೀಡಿದ ಬೃಹತ್ ಮೊತ್ತ ಚೇಸಿಂಗ್ ಮಾಡಲು ವಿಫಲವಾದ ಭಾರತ ಎ ತಂಡ ಪ್ರಶಸ್ತಿ ಕೈಚೆಲ್ಲಿದೆ. ಎಮರ್ಜಿಂಗ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ದ 128 ರನ್ ಹೀನಾಯ ಸೋಲು ಕಂಡಿದೆ.
ಕೊಲೊಂಬೊ(ಜು.23) ಎಮರ್ಜಿಂಗ್ ಏಷ್ಯಾಕಪ್ ಟೂರ್ನಿ ಗೆಲ್ಲುವ ಸುವರ್ಣ ಅವಕಾಶವನ್ನು ಭಾರತ ಎ ತಂಡ ಕೈಚೆಲ್ಲಿದೆ. ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಿಲ್ಲ. ಕೊಲೊಂಬೊದಲ್ಲಿ ನಡೆದ ಅಂಡರ್ 23 ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ ಬೃಹತ್ ಮೊತ್ತ ಚೇಸ್ ಮಾಡದೇ ಭಾರತ ಎ ಸೋಲಿಗೆ ಶರಣವಾಗಿದೆ. ಭಾರತ 224 ರನ್‌ಗೆ ಆಲೌಟ್ ಆಗುವ ಮೂಲಕ 128 ರನ್ ಸೋಲು ಕಂಡಿದೆ.
353 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಭಾರತ ಎ ತಂಡ ಡೀಸೆಂಟ್ ಆರಂಭ ಪಡೆಯಿತು. ಆದರೆ ಸಾಯಿ ಸುದರ್ಶನ್ 28 ರನ್ ಸಿಡಿಸಿ ಮುಗ್ಗರಿಸಿದರು. ಸುದರ್ಶನ್ ವಿಕೆಟ್ ಪತನದ ಬೆನ್ನಲ್ಲೇ ಭಾರತ ಎ ತಂಡದ ಕುಸಿತ ಆರಂಭಗೊಂಡಿತು. ನಿಕಿನ್ ಜೋಸ್ 11 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ್ ಶರ್ಮಾ ಅರ್ಧಶಕ ಸಿಡಿಸಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಅಭಿಷೇಕ್ 61 ರನ್ ಸಿಡಿಸಿ ಔಟಾದರು.
ನಾಯಕ ಯಶ್ ಧೂಲ್ 39 ರನ್ ಕಾಣಿಕೆ ನೀಡಿದರು. ಧೂಲ್ ವಿಕೆಟ್ ಪತನದ ಬಳಿಕ ಭಾರತ ಎ ತಂಡದ ಬ್ಯಾಟ್ಸ್‌ಮನ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ನಿಶಾಂತ್ ಸಿಂಧು 10, ಧ್ರುವ್ ಜುರೆಲ್ 9, ರಿಯಾನ್ ಪರಾಗ್ 14, ಹರ್ಶಿತ ರಾಣಾ 13, ಮುನಾವ್ ಸುತಾರ್ 7, ಆರ್‌ಎಸ್ ಹಂಗಾರ್ಕರ್ 11 ಹಾಗೂ ಯುವರಾಜ್‌ಸಿನ್ಹ ದೋದಿಯಾ 5 ರನ್ ಸಿಡಿಸಿ ಔಟಾದರು. ಈ ಮೂಲಕ ಭಾರತ ಎ ತಂಡ 40 ಓವರ್‌ಗಳಲ್ಲಿ ಆಲೌಟ್ ಆಯಿತು. ಪಾಕಿಸ್ತಾನ 128 ರನ್ ಗೆಲುವು ದಾಖಳಿಸಿ ಟ್ರೋಫಿ ಗೆದ್ದು ಸಂಭ್ರಮಿಸಿತು.
2013ರ ಚೊಚ್ಚಲ ಆವೃತ್ತಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿ ಭಾರತ ಎ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ ಭಾರತ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಾಕ್ 2019ರಲ್ಲಿ ಪಾಕಿಸ್ತಾನ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೆ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ.