
ದುಬೈ: ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ನೋಡಲು ಸ್ಟೇಡಿಯಂಗೆ ಬರುವ ಅಭಿಮಾನಿಗಳಿಗೆ ದುಬೈ ಪೊಲೀಸರು ಕಠಿಣ ಭದ್ರತಾ ಸೂಚನೆಗಳನ್ನು ನೀಡಿದ್ದಾರೆ. ಪಂದ್ಯ ನೋಡಲು ಬರುವ ಅಭಿಮಾನಿಗಳು ಸ್ಟೇಡಿಯಂನಲ್ಲಿ ಏನು ಮಾಡಬಾರದು ಎಂಬುದನ್ನು ದುಬೈ ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಫೈನಲ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಸೋಲ್ಡೌಟ್ ಆಗಿವೆ.
ಪಂದ್ಯ ನೋಡಲು ಸ್ಟೇಡಿಯಂಗೆ ಬರುವ ಅಭಿಮಾನಿಗಳು ಪಂದ್ಯ ಆರಂಭವಾಗುವ ಮೂರು ಗಂಟೆಗಳ ಮುಂಚೆಯೇ ಸ್ಟೇಡಿಯಂ ತಲುಪಬೇಕು ಎಂದು ದುಬೈ ಪೊಲೀಸರು ಸೂಚಿಸಿದ್ದಾರೆ. ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಮಾತ್ರ ಸ್ಟೇಡಿಯಂಗೆ ಪ್ರವೇಶ ನೀಡಲಾಗುವುದು. ಒಮ್ಮೆ ಸ್ಟೇಡಿಯಂ ಒಳಗೆ ಪ್ರವೇಶಿಸಿದರೆ, ಪಂದ್ಯ ಮುಗಿದ ನಂತರವೇ ಹೊರಗೆ ಬರಲು ಸಾಧ್ಯ. ಪಂದ್ಯದ ಮಧ್ಯದಲ್ಲಿ ಹೊರಗೆ ಹೋದರೆ, ಮತ್ತೆ ಸ್ಟೇಡಿಯಂ ಪ್ರವೇಶಿಸಲು ಸಾಧ್ಯವಿಲ್ಲ. ಪಾರ್ಕಿಂಗ್‌ಗಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕು. ಭಾರತ-ಪಾಕಿಸ್ತಾನ ಅಭಿಮಾನಿಗಳಿಗೆ ಧ್ವಜ, ಬ್ಯಾನರ್ ಅಥವಾ ಪಟಾಕಿಗಳನ್ನು ಸ್ಟೇಡಿಯಂ ಒಳಗೆ ತರಲು ಅನುಮತಿ ಇರುವುದಿಲ್ಲ.
ಸ್ಟೇಡಿಯಂ ಒಳಗೆ ಅಸಭ್ಯ ಪದಗಳನ್ನು ಬಳಸಬಾರದು. ನಿಷೇಧಿತ ವಸ್ತುಗಳನ್ನು ಸ್ಟೇಡಿಯಂ ಒಳಗೆ ತಂದರೆ 1.2 ಲಕ್ಷದಿಂದ 7.24 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಮೂರು ತಿಂಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಮಾಡುವ ಅಭಿಮಾನಿಗಳನ್ನು ಸಹ ಹಿಡಿಯಲಾಗುತ್ತದೆ. ಇಂತಹವರನ್ನು ಹಿಡಿಯಲು ಸ್ಟೇಡಿಯಂನ ವಿವಿಧ ಭಾಗಗಳಲ್ಲಿ ವಿಶೇಷ ಪೊಲೀಸರನ್ನು ನಿಯೋಜಿಸಲಾಗುವುದು.
ಪಟಾಕಿ, ಲೇಸರ್ ಲೈಟ್‌ಗಳು, ಸುಡುವ ಅಥವಾ ಅಪಾಯಕಾರಿ ವಸ್ತುಗಳು, ಚೂಪಾದ ವಸ್ತುಗಳು, ಆಯುಧಗಳು, ಮಾದಕ ವಸ್ತುಗಳು, ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಬಹುದಾದ ಉಪಕರಣಗಳು, ದೊಡ್ಡ ಛತ್ರಿಗಳು, ಕ್ಯಾಮೆರಾ ಟ್ರೈಪಾಡ್, ರಿಗ್ಸ್, ಸೆಲ್ಫಿ ಸ್ಟಿಕ್, ಅನಧಿಕೃತ ವೃತ್ತಿಪರ ಛಾಯಾಗ್ರಹಣ, ಬ್ಯಾನರ್‌ಗಳು, ಧ್ವಜಗಳು, ಸಾಕುಪ್ರಾಣಿಗಳು, ಸೈಕಲ್, ಸ್ಕೂಟರ್, ಸ್ಕೇಟ್‌ಬೋರ್ಡ್, ಗಾಜಿನ ವಸ್ತುಗಳು.
ಏಷ್ಯಾಕಪ್ ಟೂರ್ನಿಯಲ್ಲಿ ಈ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡು ಬಾರಿಯೂ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಇದೀಗ ಪಾಕ್ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ 9ನೇ ಏಷ್ಯಾಕಪ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ಎರಡು ಬಾರಿ ಏಷ್ಯಾಕಪ್ ಜಯಿಸಿದ್ದು ಮೂರನೇ ಟ್ರೋಫಿ ಜಯಿಸುವ ಕನಸು ಕಾಣುತ್ತಿದೆ. ಇದರ ಜತೆಗೆ ಕಳೆದೆರಡು ಪಂದ್ಯಗಳ ಸೋಲಿಗೆ ಭಾರತ ಎದುರು ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಅಂದಹಾಗೆ ಇದೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿಗೆ ದುಬೈ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ.
ಸಂಭಾವ್ಯ ತಂಡ ಇಲ್ಲಿದೆ ನೋಡಿ
ಭಾರತ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ/ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ: ಶಾಹಿಬ್‌ಝಾದ್ ಫರ್ಹಾನ್, ಫಖರ್ ಜಮಾನ್, ಸೈಮ್ ಆಯೂಬ್, ಸಲ್ಮಾನ್ ಅಘಾ(ನಾಯಕ), ಹುಸೈನ್ ತಲತ್, ಮೊಹಮ್ಮದ್ ಹ್ಯಾರಿಸ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಫಾಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹಮದ್.
ಪಂದ್ಯ ಆರಂಭ: ರಾತ್ರಿ 8ಕ್ಕೆ,
ಪ್ರಸಾರ: ಸೋನಿ ಸ್ಪೋರ್ಟ್ಸ್/ಸೋನಿ ಲಿವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.