
ದುಬೈ: ಏಷ್ಯಾಕಪ್‌ನಲ್ಲಿ ಇಂದು ಭಾರತ-ಪಾಕಿಸ್ತಾನ ನಡುವೆ ಕಿರೀಟಕ್ಕಾಗಿ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ದುಬೈನಲ್ಲಿ ರಾತ್ರಿ 8 ಗಂಟೆಗೆ ಫೈನಲ್ ಪಂದ್ಯ ಆರಂಭವಾಗಲಿದೆ. ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಇಂದು ಕೂಡಾ ನೋ ಹ್ಯಾಂಡ್‌ಶೇಕ್ ಮುಂದುವರೆಯುವುದು ಬಹುತೇಕ ಕನ್ಫರ್ಮ್ ಆಗಿದ್ದು, ಆಟದ ಮೈದಾನವನ್ನು ಮೀರಿದ ಉತ್ಸಾಹ ಮತ್ತು ಪೈಪೋಟಿಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ. ಏಷ್ಯಾಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಜಿದ್ದಾಜಿದ್ದಿನ ಪೈಪೋಟಿಗೆ ಈ ಪಂದ್ಯ ಸಾಕ್ಷಿಯಾಗುವ ಸಾಧ್ಯತೆಯಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಒಂದೂ ಪಂದ್ಯ ಸೋಲದೆ ಏಷ್ಯಾಕಪ್ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಸೋತಿದೆ. ಎರಡೂ ಪಂದ್ಯಗಳು ಭಾರತದ ವಿರುದ್ಧವೇ ಆಗಿದ್ದವು. ಭಾರತ ಎದುರು ಪಾಕ್ ಗ್ರೂಪ್ ಹಂತದಲ್ಲಿ ಏಳು ವಿಕೆಟ್‌ಗಳಿಂದ ಮತ್ತು ಸೂಪರ್ ಫೋರ್‌ನಲ್ಲಿ ಆರು ವಿಕೆಟ್‌ಗಳಿಂದ ಸೋತಿತ್ತು. ಸಲ್ಮಾನ್ ಅಲಿ ಅಘಾ ನೇತೃತ್ವದ ತಂಡವು ಮತ್ತೊಂದು ಸೋಲನ್ನು ಸಹಿಸಲು ಸಾಧ್ಯವೇ ಇಲ್ಲ. ಇಲ್ಲಿಯವರೆಗಿನ ಪ್ರದರ್ಶನದಿಂದ ಪಾಕಿಸ್ತಾನಕ್ಕೆ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದಂತೂ ಖಚಿತ.
ಸ್ಫೋಟಕ ಆರಂಭ ನೀಡುವ ಅಭಿಷೇಕ್ ಶರ್ಮಾ ಗಾಯದಿಂದ ಚೇತರಿಸಿಕೊಂಡಿರುವುದು ಭಾರತಕ್ಕೆ ಸಮಾಧಾನದ ಸುದ್ದಿ. ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಕ್ರೀಸ್‌ನಲ್ಲಿ ನೆಲೆಯೂರಿದರೆ ಭಾರತದ ಗೆಲುವಿನ ಹಾದಿ ಸುಲಭವಾಗಲಿದೆ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ ಅವರು ಸಂದರ್ಭಕ್ಕೆ ತಕ್ಕಂತೆ ಆಡಬೇಕು. ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ಜೊತೆಗೆ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಅವರ ಸ್ಪಿನ್ ಪಂದ್ಯದ ಗತಿ ಮತ್ತು ಫಲಿತಾಂಶವನ್ನು ನಿರ್ಧರಿಸಲಿದೆ.
ಪಾಕಿಸ್ತಾನ ತಂಡದಲ್ಲಿ ಬಿಕ್ಕಟ್ಟು ತೀವ್ರವಾಗಿದೆ. ನಾಲ್ಕು ಪಂದ್ಯಗಳಲ್ಲಿ ಸೊನ್ನೆಗೆ ಔಟಾದ ಸೈಮ್ ಅಯೂಬ್ ಮತ್ತು ನಾಯಕ ಸಲ್ಮಾನ್ ಅಲಿ ಅಘಾ ಸೇರಿದಂತೆ ಹಲವರು ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಬೌಲಿಂಗ್ ವಿಭಾಗಕ್ಕೂ ಹರಿತವಿಲ್ಲ. ಶಾಹೀನ್ ಶಾ ಆಫ್ರಿದಿ ಅವರ ಬೌಲಿಂಗ್ ಕೌಶಲ್ಯ ಮಾತ್ರವಲ್ಲದೆ, ಕೊನೆಯ ಓವರ್‌ಗಳಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಕೂಡ ಪಾಕಿಸ್ತಾನಕ್ಕೆ ನಿರ್ಣಾಯಕ. ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಭಾರತ ಒಂಬತ್ತನೇ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಟಿಡಿದ್ದರೆ, ಪಾಕಿಸ್ತಾನ ಮೂರನೇ ಪ್ರಶಸ್ತಿಗಾಗಿ ಕಣಕ್ಕಿಳಿಯುತ್ತಿದೆ. ಟಿ20ಯಲ್ಲಿ ಮುಖಾಮುಖಿ ದಾಖಲೆಯಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಹೊಂದಿದೆ. ಆಡಿದ ಹದಿನೈದು ಟಿ20 ಪಂದ್ಯಗಳ ಪೈಕಿ ಭಾರತ 12 ಪಂದ್ಯಗಳಲ್ಲಿ ಜಯಿಸಿದ್ದರೇ, ಪಾಕಿಸ್ತಾನ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ಇನ್ನು ಮುಂದೆ ಭಾರತಕ್ಕೆ ಪ್ರತಿಸ್ಪರ್ಧಿಯೇ ಅಲ್ಲ ಎಂದಿದ್ದಾರೆ.
ಭಾರತ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ/ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ: ಶಾಹಿಬ್‌ಝಾದ್ ಫರ್ಹಾನ್, ಫಖರ್ ಜಮಾನ್, ಸೈಮ್ ಆಯೂಬ್, ಸಲ್ಮಾನ್ ಅಘಾ(ನಾಯಕ), ಹುಸೈನ್ ತಲತ್, ಮೊಹಮ್ಮದ್ ಹ್ಯಾರಿಸ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಫಾಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹಮದ್.
ಪಂದ್ಯ ಆರಂಭ: ರಾತ್ರಿ 8ಕ್ಕೆ,
ಪ್ರಸಾರ: ಸೋನಿ ಸ್ಪೋರ್ಟ್ಸ್/ಸೋನಿ ಲಿವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.