
ಲಖನೌ: ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಕೊನೆಯ ಓವರ್‌ನಲ್ಲಿ ಹೈಡ್ರಾಮಾವೇ ನಡೀತು. ಒಂದೇ ಓವರ್‌ನಲ್ಲಿ ಎರಡು ಬಾರಿ ಸೊಂಟದ ಮೇಲಿನ ಫುಲ್‌ಟಾಸ್ (ಬೀಮರ್) ಎಸೆದರೂ, ಕೋಲ್ಕತಾ ಪೇಸರ್ ಕಾರ್ತಿಕ್ ತ್ಯಾಗಿಗೆ ಬೌಲಿಂಗ್ ಮುಂದುವರಿಸಲು ಅಂಪೈರ್‌ಗಳು ಅವಕಾಶ ಕೊಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕಾರ್ತಿಕ್ ತ್ಯಾಗಿ ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ ಲಖನೌ ತಂಡಕ್ಕೆ ಗೆಲ್ಲಲು 17 ರನ್‌ಗಳ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲಿ ಮೊಹಮ್ಮದ್ ಶಮಿ ಬೈ ರನ್ ಓಡಿ ಹಿಮ್ಮತ್ ಸಿಂಗ್‌ಗೆ ಸ್ಟ್ರೈಕ್ ಕೊಟ್ಟರು. ಆದರೆ, ತ್ಯಾಗಿ ಎರಡನೇ ಎಸೆತವನ್ನು ಹಿಮ್ಮತ್ ಸಿಂಗ್‌ಗೆ ಅಪಾಯಕಾರಿ ಬೀಮರ್ ಆಗಿ ಎಸೆದರು. ಅಂಪೈರ್ ತಕ್ಷಣವೇ ನೋ ಬಾಲ್ ಎಂದು ಘೋಷಿಸಿದರು. ಮುಂದಿನ ಫ್ರೀ ಹಿಟ್ ಎಸೆತದಲ್ಲಿ ತ್ಯಾಗಿ ಮತ್ತೊಮ್ಮೆ ಸೊಂಟದ ಮೇಲೆಯೇ ಬೀಮರ್ ಎಸೆದರು. ಈ ಎಸೆತದಲ್ಲಿ ಹಿಮ್ಮತ್ ಸಿಂಗ್ ಅವರನ್ನು ರೋವ್ಮನ್ ಪೊವೆಲ್ ಕ್ಯಾಚ್ ಹಿಡಿದರಾದರೂ, ಅಂಪೈರ್ ಮತ್ತೆ ನೋ ಬಾಲ್ ಎಂದು ತೀರ್ಪು ನೀಡಿದರು. ಕೋಲ್ಕತಾ ತಂಡ ಈ ನಿರ್ಧಾರದ ವಿರುದ್ಧ ರಿವ್ಯೂ ತೆಗೆದುಕೊಂಡರೂ, ಮೂರನೇ ಅಂಪೈರ್ ಕೂಡ ನೋ ಬಾಲ್ ತೀರ್ಪನ್ನೇ ಎತ್ತಿಹಿಡಿದರು.
ನಿಯಮಗಳ ಪ್ರಕಾರ, ಒಬ್ಬ ವೇಗದ ಬೌಲರ್ ಒಂದೇ ಓವರ್‌ನಲ್ಲಿ ಎರಡು ಬಾರಿ ಅಪಾಯಕಾರಿ ಎಸೆತಗಳನ್ನು ಹಾಕಿದರೆ, ಆ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡದಂತೆ ಅವರನ್ನು ತಡೆಯಬೇಕು. ಹೀಗಾಗಿ ಕಾರ್ತಿಕ್ ತ್ಯಾಗಿ ಅವರನ್ನು ಬದಲಾಯಿಸುತ್ತಾರೆ ಎಂದೇ ಕಾಮೆಂಟೇಟರ್‌ಗಳು ಮತ್ತು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅಂಪೈರ್‌ಗಳು ತ್ಯಾಗಿಗೆ ಬೌಲಿಂಗ್ ಮುಂದುವರಿಸಲು ಅವಕಾಶ ನೀಡಿದ್ದು ಎಲ್ಲರಿಗೂ ಶಾಕ್ ನೀಡಿತ್ತು.
ಎರಡನೇ ನೋ ಬಾಲ್ 'ಅಪಾಯಕಾರಿ' ಆಗಿರಲಿಲ್ಲ ಎಂದು ಅಂಪೈರ್‌ಗಳು ನಿರ್ಣಯಿಸಿ, ತ್ಯಾಗಿಗೆ ಬೌಲಿಂಗ್ ಮುಂದುವರಿಸಲು ಅನುಮತಿ ನೀಡಿದರು. ಐಸಿಸಿ ನಿಯಮ 41.7ರ ಪ್ರಕಾರ, ಸೊಂಟದ ಮೇಲಿನ ಎಲ್ಲಾ ಎಸೆತಗಳು ನೋ ಬಾಲ್‌ಗಳೇ. ಆದರೆ, ಬೌಲರ್‌ನನ್ನು ನಿಷೇಧಿಸಬೇಕಾದರೆ, ಆ ಎಸೆತವು ಬ್ಯಾಟರ್‌ನ ಸುರಕ್ಷತೆಗೆ ಅಪಾಯವನ್ನುಂಟು ಮಾಡುವಷ್ಟು "ಅಪಾಯಕಾರಿ" ಆಗಿರಬೇಕು. ತ್ಯಾಗಿ ಅವರ ಎರಡನೇ ಎಸೆತದ ವೇಗ ಮತ್ತು ದಿಕ್ಕನ್ನು ಪರಿಗಣಿಸಿ, ಅದು ಅಪಾಯಕಾರಿಯಲ್ಲ ಎಂದು ಅಂಪೈರ್‌ಗಳು ನಿರ್ಧರಿಸಿದರು. ಇದೇ ನಿರ್ಧಾರ ಗೊಂದಲಕ್ಕೆ ಕಾರಣವಾಯಿತು.
ನಂತರ ತ್ಯಾಗಿ, ಹಿಮ್ಮತ್ ಸಿಂಗ್ ಅವರನ್ನು ಔಟ್ ಮಾಡಿ ಕೋಲ್ಕತ್ತಾಗೆ ಗೆಲುವು ತಂದುಕೊಟ್ಟರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ ಮೊಹಮ್ಮದ್ ಶಮಿ ಬಾರಿಸಿದ ಭರ್ಜರಿ ಸಿಕ್ಸರ್‌ನಿಂದ ಪಂದ್ಯ ಟೈ ಆಯಿತು. ನಂತರ ನಡೆದ ಸೂಪರ್ ಓವರ್‌ನಲ್ಲಿ ಲಖನೌ ತಂಡ ಕೇವಲ ಒಂದು ರನ್‌ಗೆ ಆಲೌಟ್ ಆಯಿತು. ಇದರ ಬೆನ್ನತ್ತಿದ ಕೋಲ್ಕತಾ, ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ 8 ಪಂದ್ಯಗಳಿಂದ 5 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿತು. ಸೋಲಿನೊಂದಿಗೆ ಲಖನೌ ಸೂಪರ್ ಜೈಂಟ್ಸ್ ಪಟ್ಟಿಯಲ್ಲಿ ಕೊನೆಯ (ಹತ್ತನೇ) ಸ್ಥಾನಕ್ಕೆ ಕುಸಿಯಿತು.
ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ಮೊದಲ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಸೋತು, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿ ಕೇವಲ ಒಂದು ಅಂಕ ಹೊಂದಿತ್ತು. ಮೊದಲ ಆರು ಪಂದ್ಯಗಳ ಬಳಿಕ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದಿತ್ತು. ಆದರೆ ಇದೀಗ ಕೆಕೆಆರ್ ತಂಡವು ಕಳೆದ ಎರಡು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಐದು ಅಂಕಗಳೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನೊಂದೆಡೆ ಆಡಿದ ಎಂಟು ಪಂದ್ಯಗಳ ಪೈಕಿ ಕೇವಲ ಎರಡು ಗೆಲುವು ಹಾಗೂ ಆರು ಸೋಲುಗಳೊಂದಿಗೆ ಕೇವಲ 4 ಅಂಕ ಹೊಂದಿರುವ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಇದೀಗ ಲಖನೌ ತಂಡವು ಲೀಗ್ ಹಂತದಲ್ಲಿ ಇನ್ನುಳಿದ ಆರಕ್ಕೆ ಆರೂ ಪಂದ್ಯ ಜಯಿಸಿದರಷ್ಟೇ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ಪಂತ್ ಪಡೆಯ ಇನ್ನೊಂದು ಸೋಲು, ಲಖನೌ ತಂಡದ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.