ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ರೋಹಿತ್ ಶರ್ಮಾ ನಾಯಕತ್ವ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೋಹಿತ್ ಮುನ್ನಡೆಸುವ ಸಾಧ್ಯತೆಗಳಿವೆ. ರೋಹಿತ್ ಶರ್ಮಾ ನಿವೃತ್ತಿಯಾಗಲು ಕಾರಣಗಳೇ ಇಲ್ಲ ಎಂದು ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದಾಗಿ ರೋಹಿತ್ ಶರ್ಮಾ ಅವರ ನಾಯಕತ್ವವೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಜೂ.20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಭಾರತ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ವೇಳೆ ಈ ಬಗ್ಗೆ ಬಿಸಿಸಿಐ ನಿರ್ಧಾರ ಮಾಡಲಿದೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ರೋಹಿತ್ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಸಿಡ್ನಿ ಟೆಸ್ಟ್‌ನಲ್ಲಿ ತಾವು ಹೊರಗುಳಿದಿದ್ದರು. ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಸಹ ಹರಿದಾಡಿತ್ತು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ವೈಟ್‌ವಾಷ್ ಅನುಭವಿಸಿತ್ತು. ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಸೋಲು ಅನುಭವಿಸುವ ಮೂಲಕ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಸ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ರೋಹಿತ್ ಶರ್ಮಾ ಪಡೆ ಕೈಚೆಲ್ಲಿತ್ತು.
ಇದನ್ನೂ ಓದಿ: ಭಾರತ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡ್ತಾರಾ ಕೊಹ್ಲಿ? ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಆಸೆ ವ್ಯಕ್ತಪಡಿಸಿದ ವಿರಾಟ್!
ರೋಹಿತ್ ಶ್ರೇಷ್ಠ ನಾಯಕ, ನಿವೃತ್ತಿಗೆ ಕಾರಣಗಳೇ ಇಲ್ಲ: ಎಬಿ ಡಿ ವಿಲಿಯರ್ಸ್
ನವದೆಹಲಿ: ಭಾರತದ ನಾಯಕ ರೋಹಿತ್ ಶರ್ಮಾ ನಿವೃತ್ತಿಯಾಗಲು ಕಾರಣಗಳೇ ಇಲ್ಲ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ‘ಅವರು ತಮ್ಮ ಪ್ರದರ್ಶನ ಮುಂದುವರಿಸಿದರೆ, ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗುತ್ತಾರೆ. ಬೇರೆ ನಾಯಕರಿಗೆ ಹೋಲಿಕೆ ಮಾಡಿದರೆ ರೋಹಿತ್‌ರ ದಾಖಲೆ ಅತ್ಯುತ್ತಮ. ಅವರ ಗೆಲುವಿನ ದಾಖಲೆ 74ರಷ್ಟಿದೆ. ಇದು ಹಿಂದಿನ ನಾಯಕರಿಗಿಂತ ಉತ್ತಮ’ ಎಂದು ಕೊಂಡಾಡಿದ್ದಾರೆ.
ಅಲ್ಲದೆ, ‘ರೋಹಿತ್ ಏಕೆ ನಿವೃತ್ತಿಯಾಗಬೇಕು. ನಾಯಕತ್ವದ ಜೊತೆ ಬ್ಯಾಟಿಂಗ್‌ನಲ್ಲೂ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಅವರು ನಿವೃತ್ತಿಯಾಗಲು ಸದ್ಯಕ್ಕೆ ಯಾವ ಕಾರಣವೂ ಇಲ್ಲ’ ಎಂದು ವಿಲಿಯರ್ಸ್ ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಐಪಿಎಲ್ 973 ರನ್ ದಾಖಲೆ ಈ ಐವರಲ್ಲಿ ಯಾರು ಮುರಿಯಬಹುದು?
ಏಕದಿನ ರ್‍ಯಾಂಕಿಂಗ್: 3ನೇ ಸ್ಥಾನಕ್ಕೆ ರೋಹಿತ್
ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆಕರ್ಷಕ ಆಟವಾಡಿದ ರೋಹಿತ್ ಶರ್ಮಾಗೆ ಐಸಿಸಿ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಬಡ್ತಿ ಸಿಕ್ಕಿದೆ. 2 ಸ್ಥಾನ ಮೇಲೇರಿರುವ ರೋಹಿತ್, ಸದ್ಯ 3ನೇ ಸ್ಥಾನ ಪಡೆದಿದ್ದಾರೆ. ಯುವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಲ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು, ವಿರಾಟ್ ಕೊಹ್ಲಿ 1 ಸ್ಥಾನ ಕೆಳಗಿಳಿದು 5ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಶ್ರೇಯಸ್ ಅಯ್ಯರ್ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-10ರೊಳಗೆ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ.
ಇನ್ನು, ಬೌಲರ್‌ಗಳ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ತಲಾ 3 ಸ್ಥಾನಗಳ ಏರಿಕೆ ಕಂಡಿದ್ದಾರೆ. 6ನೇ ಸ್ಥಾನದಲ್ಲಿದ್ದ ಕುಲ್ದೀಪ್ 3ನೇ ಸ್ಥಾನ ತಲುಪಿದರೆ, 13ನೇ ಸ್ಥಾನದಲ್ಲಿದ್ದ ಜಡೇಜಾ 10ನೇ ಸ್ಥಾನ ಪಡೆದಿದ್ದಾರೆ. ವರುಣ್ ಚಕ್ರವರ್ತಿ 16 ಸ್ಥಾನ ಜಿಗಿತ ಕಂಡು 80ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಏಕಕಾಲದಲ್ಲಿ 3 ಮಾದರಿಯ ತಂಡ ಆಡಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದ ಆಸೀಸ್ ಮಾರಕ ವೇಗಿ!
ಬಿಸಿಸಿಐ ಸ್ಪೋರ್ಟ್ಸ್ ಸೈನ್ಸ್ ಮುಖ್ಯಸ್ಥ ನಿತಿನ್ ಬದಲಾವಣೆ?
ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ಸ್ಪೋರ್ಟ್ಸ್ ಸೈನ್ಸ್‌ನ ಮುಖ್ಯಸ್ಥ ನಿತಿನ್ ಪಟೇಲ್‌ರ ಅವಧಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಬೇರೊಬ್ಬರನ್ನು ನೇಮಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ನಿತಿನ್ 2022ರಿಂದಲೂ ಎನ್‌ಸಿಎನಲ್ಲಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಮೊಹಮದ್ ಶಮಿ ಸೇರಿದಂತೆ ಪ್ರಮುಖ ಆಟಗಾರರು ಗಾಯಗೊಂಡು ಎನ್‌ಸಿಎನಲ್ಲಿದ್ದಾಗ ಅವರ ಮೇಲುಸ್ತುವಾರಿಯನ್ನು ನಿತಿನ್ ನೋಡಿಕೊಂಡಿದ್ದರು.