
ಅಭಿಷೇಕ್‌ಗೆ ಅವಕಾಶ, ಸಂಜುಗೆ ಅನ್ಯಾಯ? ಆಯ್ಕೆ ಸಮಿತಿ ವಿರುದ್ಧ ಹನುಮ ವಿಹಾರಿ ಕಿಡಿ..!
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ನಡುವೆ ಭಾರತ ತಂಡದ ಮಾಜಿ ಬ್ಯಾಟರ್ ಹನುಮ ವಿಹಾರಿ ಆಯ್ಕೆ ಸಮಿತಿಯ ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಶರ್ಮಾ ನಿರಂತರವಾಗಿ ವಿಫಲವಾಗುತ್ತಿದ್ದರೂ ಅವರಿಗೆ ಸತತ ಅವಕಾಶ ನೀಡಲಾಗುತ್ತಿದೆ. ಕೊನೆಯ ಟಿ20 ಪಂದ್ಯದಲ್ಲೂ ಸಹ ಅಭಿಷೇಕ್ ಶರ್ಮಾ ಬ್ಯಾಟ್ ಬೀಸಲು ವಿಫಲರಾದರು.ಆದರೆ ಇದೇ ಮಾನದಂಡವನ್ನು ಸಂಜು ಸ್ಯಾಮ್ಸನ್‌ಗೆ ಅನ್ವಯಿಸಲಾಗಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಅಭಿಷೇಕ್‌ಗೆ ಸತತ ಅವಕಾಶ ಏಕೆ?
ವಿಹಾರಿ ಅಭಿಪ್ರಾಯದಂತೆ, ಇತ್ತೀಚಿನ ಹಲವು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆದ ಮೂರು ಪಂದ್ಯಗಳ t20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರು ಮೂರು ಇನ್ನಿಂಗ್ಸ್ ಗಳಿಂದ ಗಳಿಸಿದ ಒಟ್ಟು ಸ್ಕೋರ್ 11 ರನ್. ಸತತ ವೈಫಲ್ಯದ ಹೊರತಾಗಿಯೂ ಅಭಿಷೇಕ್ ಶರ್ಮಾ ಗೆ ಸಿಗುತ್ತಿರುವ ಅವಕಾಶಕಳ ಬಗ್ಗೆ ಹನುಮ ವಿಹಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭೆಗೆ ಅವಕಾಶ ನೀಡುವುದು ಒಳ್ಳೆಯದೇ ಆದರೂ, ಅದೇ ಮಾನದಂಡ ಎಲ್ಲ ಆಟಗಾರರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಅವರು ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಉದಾಹರಣೆ ನೀಡಿದ ವಿಹಾರಿ..!
ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಿದ್ದರೂ, ಕೆಲವೇ ಪಂದ್ಯಗಳ ವೈಫಲ್ಯದ ಬಳಿಕ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಲಾಯಿತು ಎಂದು ವಿಹಾರಿ ನೆನಪಿಸಿದರು. ಒತ್ತಡದ ಪಂದ್ಯಗಳಲ್ಲಿ ತಂಡಕ್ಕೆ ನೆರವಾದ ಆಟಗಾರನಿಗೆ ಕಡಿಮೆ ಅವಕಾಶ ನೀಡಲಾಗಿದ್ದು, ಮತ್ತೊಂದೆಡೆ ಅಭಿಷೇಕ್‌ಗೆ ನಿರಂತರ ಬೆಂಬಲ ಸಿಗುತ್ತಿರುವುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
'ಎಲ್ಲರಿಗೂ ಒಂದೇ ನಿಯಮ ಇರಲಿ'!
ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಆಟಗಾರನಿಗೆ ವಿಶೇಷ ಸವಲತ್ತು ಇರಬಾರದು ಎಂದು ವಿಹಾರಿ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಸಂಜು ಸ್ಯಾಮ್ಸನ್‌ಗೆ ನೀಡಿದ ಮಾನದಂಡ ಮತ್ತು ಅಭಿಷೇಕ್ ಶರ್ಮಾಗೆ ನೀಡುತ್ತಿರುವ ಬೆಂಬಲದ ನಡುವೆ ಸ್ಪಷ್ಟ ವ್ಯತ್ಯಾಸ ಕಾಣುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಆಯ್ಕೆ ನೀತಿ ಬಗ್ಗೆ ಹೊಸ ಚರ್ಚೆ..!
ವಿಹಾರಿಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಯುವ ಆಟಗಾರರಿಗೆ ಬೆಂಬಲ ನೀಡುವುದು ಅಗತ್ಯವಾದರೂ, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಮಾನತೆ ಇರಬೇಕು ಎಂಬ ಅಭಿಪ್ರಾಯವನ್ನು ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಮುಂದಿನ ಪಂದ್ಯಗಳಲ್ಲಿ ಅಭಿಷೇಕ್ ಮೇಲೆ ಹೆಚ್ಚಿದ ಒತ್ತಡ..!
ನಿರಂತರ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡ ಅವರ ಮೇಲಿದೆ. ಮತ್ತೊಂದೆಡೆ, ಆಯ್ಕೆ ಸಮಿತಿಯ ನಿರ್ಧಾರಗಳು ಪ್ರತಿಭೆ ಮತ್ತು ಪ್ರದರ್ಶನದ ಆಧಾರದ ಮೇಲೆಯೇ ಇರಬೇಕು ಎಂಬ ಅಭಿಮಾನಿಗಳ ಒತ್ತಾಯವೂ ಹೆಚ್ಚಾಗಿದೆ. ಮುಂದಿನ ಪಂದ್ಯಗಳಲ್ಲಿ ಅಭಿಷೇಕ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆಯೇ, ಅಥವಾ ಸಂಜು ಸ್ಯಾಮ್ಸನ್‌ಗೆ ಮತ್ತೆ ಅವಕಾಶ ಸಿಗುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.