
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಸ್ತಿ ಖರೀದಿ ಮುಂದುವರೆದಿದೆ. ಈಗ ಮುಂಬೈನ ವರ್ಸೋವಾ ಪ್ರದೇಶದಲ್ಲಿ ಹೊಸ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
ವಿರುಷ್ಕಾ ಮುಂಬೈನ ವರ್ಸೋವಾದಲ್ಲಿ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದು, ವರದಿಗಳ ಪ್ರಕಾರ, ಈ ಅಪಾರ್ಟ್ಮೆಂಟ್ನ ಬೆಲೆ 18.29 ಕೋಟಿ ರೂಪಾಯಿ. ಇದು ವರ್ಸೋವಾದ ಗೋದ್ರೆಜ್ ಸ್ಕೈಶೋರ್ ಕಟ್ಟಡದ ಮೇಲಿನ ಮಹಡಿಯಲ್ಲಿದೆ. ಸುಮಾರು 2,644 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆಯಲ್ಲಿ 316 ಚದರ ಅಡಿ ವಿಶೇಷ ತೆರೆದ ಜಾಗ ಹಾಗೂ ಮೂರು ಕಾರುಗಳ ಪಾರ್ಕಿಂಗ್ ಸೌಲಭ್ಯವೂ ಇದೆ.
ಆಸ್ತಿಯ ನೋಂದಣಿ ಜುಲೈ 21, 2026ರಂದು ನಡೆದಿದೆ. ಇದಕ್ಕಾಗಿ 1.09 ಕೋಟಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕವನ್ನು ದಂಪತಿ ಪಾವತಿಸಿದ್ದಾರೆ. ಒಂದು ಚದರ ಅಡಿಗೆ ಸುಮಾರು 69,159 ದರದಲ್ಲಿ ಈ ವ್ಯವಹಾರ ನಡೆದಿರುವುದಾಗಿ ವರದಿಯಾಗಿದೆ.
ವರ್ಸೋವಾ ಈಗ ಮುಂಬೈನ ಪ್ರಮುಖ ಐಷಾರಾಮಿ ವಸತಿ ಪ್ರದೇಶಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಮನರಂಜನಾ ಕ್ಷೇತ್ರದ ಸಮೀಪದಲ್ಲಿರುವುದು ಹಾಗೂ ಪ್ರಸ್ತಾವಿತ ಮುಂಬೈ ಕೋಸ್ಟಲ್ ರೋಡ್ ನಾರ್ತ್ ಯೋಜನೆಯಿಂದ ಈ ಭಾಗದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳು ಮತ್ತು ಶ್ರೀಮಂತ ಹೂಡಿಕೆದಾರರು ಈ ಪ್ರದೇಶದಲ್ಲಿ ಮನೆ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಲಿಬಾಗ್ನ ಜಿರಾಡ್ ಗ್ರಾಮದಲ್ಲಿ 37.86 ಕೋಟಿ ಮೌಲ್ಯದ ಐದು ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದರು. 2022ರಲ್ಲೂ ಇದೇ ಪ್ರದೇಶದಲ್ಲಿ ಫಾರ್ಮ್ಹೌಸ್ ನಿರ್ಮಾಣಕ್ಕಾಗಿ ಭೂಮಿ ಖರೀದಿಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅಲಿಬಾಗ್ನಲ್ಲಿ ಇದು ಅವರ ಎರಡನೇ ದೊಡ್ಡ ಹೂಡಿಕೆಯಾಗಿದೆ.
ಅದಕ್ಕೂ ಮೊದಲು ವಿರಾಟ್ ಕೊಹ್ಲಿ ಮುಂಬೈನ ಪ್ರತಿಷ್ಠಿತ ವರ್ಲಿ ಪ್ರದೇಶದಲ್ಲಿ ಸಮುದ್ರದ ನೋಟವಿರುವ ಐಷಾರಾಮಿ ಅಪಾರ್ಟ್ಮೆಂಟ್ನ್ನು ಸುಮಾರು 34 ಕೋಟಿಗೆ ಬುಕ್ ಮಾಡಿದ್ದರು. 2016ರಲ್ಲಿ ಬುಕ್ ಮಾಡಲಾಗಿದ್ದ ಈ ನಾಲ್ಕು ಬೆಡ್ರೂಮ್ಗಳ ಮನೆ ಸುಮಾರು 7,171 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಕಟ್ಟಡದ 35ನೇ ಮಹಡಿಯಲ್ಲಿ ಇತ್ತು. ಆದರೆ ಬಳಿಕ ಆ ಫ್ಲಾಟ್ ಬುಕ್ಕಿಂಗ್ ಅನ್ನು ವಿರಾಟ್ ಕೊಹ್ಲಿ ರದ್ದುಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.