ಭಾರತ ತಂಡದ ಕೋಚ್‌ ಹುದ್ದೆಗೆ ಅರ್ಜಿ ಹಾಕಲು ಗಡುವು ಮುಕ್ತಾಯ..! ಯಾರಾಗ್ತಾರೆ ಹೊಸ ಕೋಚ್?

By Naveen Kodase  |  First Published May 28, 2024, 9:32 AM IST

ಸಾಮಾನ್ಯವಾಗಿ ಬಿಸಿಸಿಐ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಲಿದ್ದು, ಬಳಿಕ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿದೆ. ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಸೂಕ್ತ ವ್ಯಕ್ತಿಯ ಹೆಸರನ್ನು ಕ್ರಿಕೆಟ್‌ ಮಂಡಳಿಗೆ ಶಿಫಾರಸು ಮಾಡಲಿದೆ.


ನವದೆಹಲಿ: ಭಾರತ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಗಡುವು ಸೋಮವಾರ ಸಂಜೆಗೆ ಮುಕ್ತಾಯಗೊಂಡಿದ್ದು, ಎಷ್ಟು ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ ಎನ್ನುವ ಮಾಹಿತಿಯನ್ನು ಇನ್ನೂ ಬಿಸಿಸಿಐ ಬಹಿರಂಗಪಡಿಸಿಲ್ಲ. 

ವಿದೇಶಿ ಕೋಚ್‌ಗಳನ್ನು ನೇಮಿಸುವ ಬಗ್ಗೆ ಬಿಸಿಸಿಐಗೆ ಆಸಕ್ತಿ ಇಲ್ಲ ಎನ್ನುವ ಸುಳಿವನ್ನು ಇತ್ತೀಚೆಗೆ ಕಾರ್ಯದರ್ಶಿ ಜಯ್‌ ಶಾ ನೀಡಿದ್ದರು. ಅಲ್ಲದೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ನಿರ್ದೇಶಕ ವಿವಿಎಸ್‌ ಲಕ್ಷ್ಮಣ್‌ ಸಹ ನಿರಾಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೀಗ ಎಲ್ಲರ ಕಣ್ಣು ಮಾಜಿ ಕ್ರಿಕೆಟಿಗ, ಹಾಲಿ ಐಪಿಎಲ್‌ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ಮಾರ್ಗದರ್ಶಕ ಗೌತಮ್‌ ಗಂಭೀರ್‌ ಮೇಲಿದ್ದು, ನೂತನ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

Latest Videos

undefined

IPL 2024: ಆರೆಂಜ್ ಕ್ಯಾಪ್,ಗೆದ್ದ ಕೊಹ್ಲಿಗೆ ₹10 ಲಕ್ಷ ನಗದು, ಮತ್ತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?

ಸಾಮಾನ್ಯವಾಗಿ ಬಿಸಿಸಿಐ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಲಿದ್ದು, ಬಳಿಕ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿದೆ. ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಸೂಕ್ತ ವ್ಯಕ್ತಿಯ ಹೆಸರನ್ನು ಕ್ರಿಕೆಟ್‌ ಮಂಡಳಿಗೆ ಶಿಫಾರಸು ಮಾಡಲಿದೆ.

ಟಿ20 ವಿಶ್ವಕಪ್‌ ಮುಗಿಯುವ ವರೆಗೂ ರಾಹುಲ್‌ ದ್ರಾವಿಡ್‌ ತಂಡದ ಕೋಚ್‌ ಆಗಿ ಇರಲಿದ್ದು, ಆ ನಂತರ ಹೊಸ ಕೋಚ್‌ನ ನೇಮಕವಾಗಲಿದೆ.

ನ್ಯೂಯಾರ್ಕ್ ತಲುಪಿದ ಭಾರತದ ಮೊದಲ ಬ್ಯಾಚ್‌

ನ್ಯೂಯಾರ್ಕ್‌: ಐಸಿಸಿ ಟಿ20 ವಿಶ್ವಕಪ್‌ ಆಡಲು ಭಾರತ ತಂಡದ ಮೊದಲ ಬ್ಯಾಚ್‌ ಭಾನುವಾರ ಅಮೆರಿಕದ ನ್ಯೂಯಾರ್ಕ್‌ಗೆ ಬಂದಿಳಿದಿದೆ. ನಾಯಕ ರೋಹಿತ್‌ ಶರ್ಮಾ ಸೇರಿ 10 ಆಟಗಾರರು ಮೊದಲ ಬ್ಯಾಚ್‌ನಲ್ಲಿ ತೆರಳಿದ್ದರು. ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಸೇರಿ ಉಳಿದ ಕೋಚಿಂಗ್‌, ಸಹಾಯಕ ಸಿಬ್ಬಂದಿಯೂ ಮೊದಲ ಬ್ಯಾಚ್‌ ಜೊತೆಗೆ ಪ್ರಯಾಣಿಸಿದ್ದರು. 

ಟೀಂ ಇಂಡಿಯಾ ಕೋಚ್ ಆಗಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ಗೌತಮ್ ಗಂಭೀರ್..!

ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಯಜುವೇಂದ್ರ ಚಹಲ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಹಾಗೂ ಮೀಸಲು ಆಟಗಾರರಾದ ಶುಭ್‌ಮನ್‌ ಗಿಲ್‌, ರಿಂಕು ಸಿಂಗ್‌, ಆವೇಶ್‌ ಖಾನ್‌, ಖಲೀಲ್ ಅಹ್ಮದ್‌ ಸೋಮವಾರ ನ್ಯೂಯಾರ್ಕ್‌ಗೆ ವಿಮಾನ ಹತ್ತಲಿದ್ದಾರೆ. ಜೂ.1ರಂದು ಭಾರತ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಜೂ.5ರಂದು ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಆಡಲಿದೆ.

ಐಪಿಎಲ್‌: ಎಲ್ಲಾ 13 ಕ್ರೀಡಾಂಗಣ ಸಿಬ್ಬಂದಿಗೆ ಬಿಸಿಸಿಐ ಬಹುಮಾನ

ನವದೆಹಲಿ: ಐಪಿಎಲ್ 17ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ತೆರೆಮರೆಯಲ್ಲಿ ಶ್ರಮಿಸಿದ ಕ್ಯುರೇಟರ್‌ಗಳು ಹಾಗೂ ಮೈದಾನ ಸಿಬ್ಬಂದಿಗೆ ಬಿಸಿಸಿಐ ಬಹುಮಾನ ಘೋಷಿಸಿದೆ. ಪ್ರತಿ ಬಾರಿ ಆತಿಥ್ಯ ವಹಿಸುವ 10 ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ 25 ಲಕ್ಷ ರು., ಈ ಬಾರಿ ಕೆಲ ಪಂದ್ಯಗಳಿಗೆ ಹೆಚ್ಚುವರಿಯಾಗಿ ಆತಿಥ್ಯ ನೀಡಿದ್ದ 3 ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ 10 ಲಕ್ಷ ರು. ಬಹುಮಾನ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸಾಮಾಜಿಕ ತಾಣ ‘ಎಕ್ಸ್‌’ ಖಾತೆಯ ಮೂಲಕ ತಿಳಿಸಿದ್ದಾರೆ. 

ಬೆಂಗಳೂರು, ಮುಂಬೈ, ಡೆಲ್ಲಿ, ಚೆನ್ನೈ, ಕೋಲ್ಕತಾ, ಮೊಹಲಿ, ಹೈದರಾಬಾದ್‌, ಲಖನೌ, ಅಹಮದಾಬಾದ್‌ ಹಾಗೂ ಜೈಪುರ ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ 25 ಲಕ್ಷ ರು., ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಕ್ರೀಡಾಂಗಣದ ಸಿಬ್ಬಂದಿಗೆ ತಲಾ 10 ಲಕ್ಷ ರು. ಬಹುಮಾನ ದೊರೆಯಲಿದೆ. ಉದಾಹರಣೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 30 ಸಿಬ್ಬಂದಿ ಇದ್ದರೆ, 25 ಲಕ್ಷ ರು. ಆ 30 ಜನರಿಗೆ ಹಂಚಿಕೆಯಾಗಲಿದೆ.

click me!