ಆಟವಲ್ಲ, ಆರ್‌ಸಿಬಿಯ ಇಡ್ಲಿ-ದೋಸೆ-ಚಟ್ನಿ ಹಾಡು ಕೇಳಿ ಕಿವಿಯಲ್ಲಿ ರಕ್ತ ತಂದುಕೊಂಡ ಚೆನ್ನೈ, ಬಿಸಿಸಿಐಗೆ ಪತ್ರ ಬರೆದು ದೂರು!

Published : Apr 16, 2026, 04:36 PM IST
RCB Song

ಸಾರಾಂಶ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ವೇಳೆ "ದೋಸೆ, ಇಡ್ಲಿ" ಹಾಡನ್ನು ಹಾಕಿದ್ದಕ್ಕೆ ಹೊಸ ವಿವಾದ ಭುಗಿಲೆದ್ದಿದೆ. ಇದು ತಮ್ಮ ತಂಡಕ್ಕೆ ಮಾಡಿದ ಅವಮಾನ ಎಂದು ಪರಿಗಣಿಸಿರುವ ಸಿಎಸ್‌ಕೆ ಮಂಡಳಿ, ಈ ಕುರಿತು ಬಿಸಿಸಿಐಗೆ ಅಧಿಕೃತ ದೂರು ನೀಡಿದೆ.

ಬೆಂಗಳೂರು (ಏ.16): ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಹೊಸ ವಿವಾದವೊಂದು ಭುಗಿಲೆದ್ದಿದೆ. ಪಂದ್ಯದ ವೇಳೆ ಮೈದಾನದಲ್ಲಿ ಹಾಕಲಾದ "ದೋಸೆ, ಇಡ್ಲಿ, ಸಾಂಬಾರ್, ಚಟ್ನಿ" ಹಾಡು ನಮ್ಮ ಆಟಗಾರರನ್ನು ಮತ್ತು ತಂಡವನ್ನು ಅವಮಾನಿಸಿದೆ ಎಂದು ಆರೋಪಿಸಿ ಸಿಎಸ್‌ಕೆ ಮಂಡಳಿಯು ಬಿಸಿಸಿಐಗೆ (BCCI) ಅಧಿಕೃತ ದೂರು ನೀಡಿದೆ. ಏಪ್ರಿಲ್ 5ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಎರಡು ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಕ್ರೀಡಾಂಗಣದಲ್ಲಿ ಡಿಜೆ (DJ) ಪ್ಲೇ ಮಾಡಿದ ಹಾಡಿನಲ್ಲಿ ಇಡ್ಲಿ, ದೋಸೆ, ಸಾಂಬಾರ್ ಮತ್ತು ಚಟ್ನಿಯಂತಹ ಪದಗಳಿದ್ದವು. ಇದು ಕೇವಲ ಹಾಡಲ್ಲ, ಬದಲಾಗಿ ತಮ್ಮ ತಂಡದ ಆಟಗಾರರನ್ನು ಹೀಯಾಳಿಸಲು ಬಳಸಲಾದ ತಂತ್ರ ಎಂದು ಚೆನ್ನೈ ತಂಡ ಗಂಭೀರವಾಗಿ ಪರಿಗಣಿಸಿದೆ.

ಬಿಸಿಸಿಐಗೆ ಪತ್ರ ಬರೆದ ಸಿಎಸ್‌ಕೆ

'ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಸಿ ವಿಶ್ವನಾಥನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸಾಮಾನ್ಯವಾಗಿ ಡಿಜೆಗಳು ಆತಿಥೇಯ ತಂಡವನ್ನು ಬೆಂಬಲಿಸಲು ಇರುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ನಮ್ಮ ಆಟಗಾರರ ವಿರುದ್ಧ ಕೆಲವು ನಿರ್ದಿಷ್ಟ ಕಾಮೆಂಟ್‌ಗಳನ್ನು ಮಾಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಬಿಸಿಸಿಐಗೆ ಪತ್ರ ಬರೆದಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ವಿನಂತಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಜಿತೇಶ್ ಶರ್ಮಾ ಹಾಡಿದ್ದ ಹಾಡು!

ಈ ವಿವಾದಕ್ಕೆ ಹಳೆಯ ಕೊಂಡಿಯೂ ಇದೆ. ಕಳೆದ ವರ್ಷ ಚೆನ್ನೈ ವಿರುದ್ಧದ ಪಂದ್ಯಕ್ಕೂ ಮೊದಲು ಆರ್‌ಸಿಬಿ ತನ್ನ ವಿಕೆಟ್ ಕೀಪರ್ ಜಿತೇಶ್ ಶರ್ಮಾ "ಇಡ್ಲಿ-ದೋಸೆ" ಹಾಡನ್ನು ಹಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ಆಗ ಸಿಎಸ್‌ಕೆ ಅಭಿಮಾನಿಗಳು ಜಿತೇಶ್ ಅವರನ್ನು ಟ್ರೋಲ್ ಮಾಡಿದ್ದರು. ಆದರೆ ಆಗ ಅದು ಅಷ್ಟೊಂದು ದೊಡ್ಡ ವಿವಾದವಾಗಿರಲಿಲ್ಲ. ಅಂದಹಾಗೆ, ಈ ಹಾಡನ್ನು ಸಂಗೀತಗಾರ 'ಗಾನ ಅಪ್ಪು' ಸಂಯೋಜಿಸಿದ್ದಾರೆ.

ಸದರ್ನ್ ಡರ್ಬಿಯಲ್ಲಿ ಆರ್‌ಸಿಬಿ ಮೇಲುಗೈ

ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹಣಾಹಣಿಯನ್ನು ಐಪಿಎಲ್‌ನ 'ಸದರ್ನ್ ಡರ್ಬಿ' (Southern Derby) ಎಂದು ಕರೆಯಲಾಗುತ್ತದೆ. ಮುಖಾಮುಖಿ ಪಂದ್ಯಗಳಲ್ಲಿ ಸಿಎಸ್‌ಕೆ ಹೆಚ್ಚು ಜಯ ಸಾಧಿಸಿದ್ದರೂ, ಇತ್ತೀಚಿನ ಸೀಸನ್‌ಗಳಲ್ಲಿ ಬೆಂಗಳೂರು ತಂಡ ಚೆನ್ನೈ ಮೇಲೆ ಪ್ರಾಬಲ್ಯ ಸಾಧಿಸುತ್ತಿದೆ.

ಏಪ್ರಿಲ್ 5ರ ಪಂದ್ಯದಲ್ಲಿ ಆರ್‌ಸಿಬಿ ತಂಡವು ಚೆನ್ನೈ ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಈ ಸೀಸನ್‌ನ ತನ್ನ ಅತ್ಯುತ್ತಮ ಮೊತ್ತವಾದ 250 ರನ್ ಸಿಡಿಸಿತು. ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 8 ಸಿಕ್ಸರ್ ಸಹಿತ 70 ರನ್ ಚಚ್ಚಿದರು. ದೇವದತ್ ಪಡಿಕ್ಕಲ್ 50, ರಜತ್ ಪಾಟಿದಾರ್ 48, ಫಿಲ್ ಸಾಲ್ಟ್ 46 ಮತ್ತು ವಿರಾಟ್ ಕೊಹ್ಲಿ 28 ರನ್ ಕಾಣಿಕೆ ನೀಡಿದರು. ಬೃಹತ್ ಗುರಿ ಬೆನ್ನಟ್ಟಿದ ಸಿಎಸ್‌ಕೆ ಕೇವಲ 207 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಅಭಿನಂದನ್ ಸಿಂಗ್, ಜಾಕೋಬ್ ಡಫಿ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಕಸಿದುಕೊಂಡರು. ಈ ಪಂದ್ಯದ ಮೂಲಕ ಭುವಿ ಐಪಿಎಲ್‌ನಲ್ಲಿ 200 ವಿಕೆಟ್ ಪೂರೈಸಿದ ಸಾಧನೆ ಮಾಡಿದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈ ಇಂಡಿಯನ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್..! ಇಂದು ಪಾಂಡ್ಯ ಪಡೆ ಸೋತರೇ, ಮುಂದೇನು?
ಆರ್‌ಸಿಬಿ ಈಗಿನ ಸಕ್ಸಸ್‌ಗೆ ಮುಂಬೈ ಇಂಡಿಯನ್ಸ್ ನೇರ ಕಾರಣ! 4 ಮಹಾ ಎಡವಟ್ಟು ಮಾಡಿದ 5 ಬಾರಿಯ ಚಾಂಪಿಯನ್