
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲೂ ತನ್ನ ಚಾಂಪಿಯನ್ ಆಟವನ್ನು ಮುಂದುವರೆಸಿದ್ದು, ತಾನಾಡಿದ ಮೊದಲ 5 ಪಂದ್ಯಗಳ ಬಳಿಕ 4 ಭರ್ಜರಿ ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇಂದು ಆರ್‌ಸಿಬಿ ತಂಡ ಈ ಮಟ್ಟಿಗೆ ಡಾಮಿನೇಟ್ ಪ್ರದರ್ಶನ ನೀಡಲು, ಬಲವಾದ ತಂಡವಾಗಿ ರೂಪುಗೊಳ್ಳಲು ಮುಂಬೈ ಇಂಡಿಯನ್ಸ್ ತಂಡ ಮಾಡಿದ 4 ಮಹಾ ಎಡವಟ್ಟುಗಳು ಕಾರಣ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದು ಸತ್ಯ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಐಪಿಎಲ್ ಹರಾಜಿನಲ್ಲಿ ಬಿಗ್ ಹಿಟ್ಟರ್ ಟಿಮ್ ಡೇವಿಡ್ ಅವರನ್ನು ಕೇವಲ 3 ಕೋಟಿಗೆ ಆರ್‌ಸಿಬಿಗೆ ಬಿಟ್ಟುಕೊಟ್ಟು ವಿಲ್ ಜ್ಯಾಕ್ಸ್ ಅವರನ್ನು 5.25 ಕೋಟಿ ರುಪಾಯಿ ನೀಡಿ ಖರೀದಿಸಿದ್ದು ಮುಂಬೈ ಮಾಡಿದ ಮಹಾ ತಪ್ಪು. ಕೀರನ್ ಪೊಲ್ಲಾರ್ಡ್ ಬಳಿಕ ಒಳ್ಳೆಯ ಮ್ಯಾಚ್ ಫಿನಿಶರ್ ಆಗಿ ಟಿಮ್ ಡೇವಿಡ್ ರೆಡಿಯಾಗುತ್ತಿದ್ದರು. ಆದರೆ ಮೂರ್ನಾಲ್ಕು ಕೆಟ್ಟ ಇನ್ನಿಂಗ್ಸ್ ಗಮನದಲ್ಲಿಟ್ಟುಕೊಂಡು ಟಿಮ್ ಡೇವಿಡ್ ಅವರನ್ನು 3 ಕೋಟಿಗೆ ಖರೀದಿಸಲು ಮನಸ್ಸು ಮಾಡಲಿಲ್ಲ. ಈಗ ಅದೇ ಟಿಮ್ ಡೇವಿಡ್ ಕಳೆದೆರಡು ಸೀಸನ್ ಐಪಿಎಲ್‌ನಲ್ಲಿ ಎದುರಾಳಿ ಬೌಲರ್‌ಗಳನ್ನು ಚೆಂಡಾಡುವ ಮೂಲಕ ಬೆಸ್ಟ್ ಮ್ಯಾಚ್ ಫಿನಿಶರ್ ಎನಿಸಿಕೊಂಡಿದ್ದಾರೆ.
ಟಿಮ್ ಡೇವಿಡ್ ಅವರಂತೆ ಮುಂಬೈ ಫ್ರಾಂಚೈಸಿಯು ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ರೊಮ್ಯಾರಿಯೋ ಶೆಫರ್ಡ್ ಅವರನ್ನು ಕೈಬಿಟ್ಟಿದ್ದು ಕೂಡಾ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2024ರ ಐಪಿಎಲ್‌ನಲ್ಲಿ 50 ಲಕ್ಷಕ್ಕೆ ಶೆಫರ್ಡ್ ಮುಂಬೈ ತಂಡದಲ್ಲಿದ್ರು. ಆ ಸೀಸನ್‌ನಲ್ಲಿ 291.67ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಹೀಗಿದ್ದೂ 2025ರ ಐಪಿಎಲ್ ಹರಾಜಿಗೂ ಮುನ್ನ 1.5 ಕೋಟಿಗೂ ಖರೀದಿಸಲು ಮುಂಬೈ ಒಲವು ತೋರಲಿಲ್ಲ. ಆದರೆ ಆರ್‌ಸಿಬಿ ಫ್ರಾಂಚೈಸಿ ಶೆಫರ್ಡ್ ಅವರನ್ನು 1.5 ಕೋಟಿ ಮೂಲ ಬೆಲೆಗೆ ಖರೀದಿಸಿತು. ಆಮೇಲೆ ಶೆಫರ್ಡ್ ಕೈಬಿಟ್ಟು ಎಂತ ತಪ್ಪು ಮಾಡಿದೆವು ಎನ್ನುವುದು ಐದು ಬಾರಿಯ ಚಾಂಪಿಯನ್ನರಿಗೆ ಈಗಲೂ ಕಾಡುತ್ತಿದೆ.
2025ರ ಐಪಿಎಲ್ ಹರಾಜಿಗೂ ಮುನ್ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹರಾಜಿನಲ್ಲಿ ಇದ್ದರು. ಆರಂಭದಿಂದಲೂ ಭುವಿ ಖರೀದಿಸಲು ಮುಂಬೈ ಹಾಗೂ ಆರ್‌ಸಿಬಿ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಆದರೆ 10.50 ಕೋಟಿ ಮೇಲೆ ಬಿಡ್ ಮಾಡಲು ಮುಂಬೈ ಮನಸ್ಸು ಮಾಡಲಿಲ್ಲ. ಬಳಿಕ ಆರ್‌ಸಿಬಿ 10.75 ಕೋಟಿಗೆ ಭುವಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಇನ್ನು ಗಾಯಾಳು ದೀಪಕ್ ಚಹರ್‌ಗೆ ಮುಂಬೈ 9.25 ಕೋಟಿ ರುಪಾಯಿ ಖರ್ಚು ಮಾಡಿತು. ಕಳೆದ ಸೀಸನ್‌ನಲ್ಲಿ ಭುವಿ 17 ವಿಕೆಟ್ ಕಬಳಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ದೀಪಕ್ ಚಹರ್ ಟಾಪ್ 15 ವಿಕೆಟ್ ಟೇಕರ್ ಪಟ್ಟಿಯಲ್ಲೂ ಸ್ಥಾನ ಪಡೆಯಲಿಲ್ಲ.
ಆಸೀಸ್ ನೀಳಕಾಯದ ವೇಗಿ ಜೋಶ್ ಹೇಜಲ್‌ವುಡ್ ಹಾಗೂ ನ್ಯೂಜಿಲೆಂಡ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಇಬ್ಬರೂ ಇದ್ದರು. ಆದರೆ ಆರ್‌ಸಿಬಿ ಫ್ರಾಂಚೈಸಿ 12.50 ಕೋಟಿಗೆ ಖರೀದಿಸಿತು. ಮುಂಬೈ ಫ್ರಾಂಚೈಸಿ 12.75 ಕೋಟಿಗೆ ಬೌಲ್ಟ್‌ರನ್ನು ಖರೀಸಿದಿತು. ಕಳೆದ ಸೀಸನ್‌ನಲ್ಲಿ ಇಬ್ಬರು ವೇಗಿಗಳು 22 ವಿಕೆಟ್ ಕಬಳಿಸಿದ್ದರು. ಆದರೆ ಈ ಸೀಸನ್‌ನಲ್ಲಿ ಆರ್‌ಸಿಬಿ ವೇಗಿ ಹೇಜಲ್‌ವುಡ್ ಕರಾರುವಕ್ಕಾದ ದಾಳಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ಬೌಲ್ಟ್ ಸಾಕಷ್ಟು ದುಬಾರಿಯಾಗುತ್ತಿದ್ದು, ವಿಕೆಟ್ ಕಬಳಿಸಲು ಪರದಾಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಮಾಡಿದ ಈ ನಾಲ್ಕು ಮಹಾ ಎಡವಟ್ಟುಗಳು ಆರ್‌ಸಿಬಿ ತಂಡದ ಪಾಲಿಗೆ ಅದೃಷ್ಟದ ಬಾಗಿಲನ್ನೇ ತೆರೆದಿದೆ. ಸದ್ಯ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 4 ಪಂದ್ಯಗಳಲ್ಲಿ ಮೂರು ಸೋಲು ಹಾಗೂ ಒಂದು ಗೆಲುವು ಸಹಿತ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.