IPL 2026: ನಿನ್ನೆ ನಡೆದ ಆರ್‌ಸಿಬಿ-ಲಖನೌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 16, 2026, 09:34 AM IST
RCB vs LSG Match Result

ಸಾರಾಂಶ

ಐಪಿಎಲ್‌ 2026ರಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಪವರ್-ಪ್ಲೇನಲ್ಲಿ ತೋರಿದ ಅದ್ಭುತ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು, ವಿರಾಟ್ ಕೊಹ್ಲಿ 49 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದರು.

 ಬೆಂಗಳೂರು: ಐಪಿಎಲ್‌ 2026ರಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಸಾಧಿಸಿದ ಆರ್‌ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಜಯ ದಾಖಲಿಸಿತು.

ಎರಡೂ ಇನ್ನಿಂಗ್ಸ್‌ಗಳ ಪವರ್‌-ಪ್ಲೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ತಾನೇಕೆ ಚಾಂಪಿಯನ್‌ ತಂಡ ಎನ್ನುವುದನ್ನು ಆರ್‌ಸಿಬಿ ಪ್ರದರ್ಶಿಸಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ, ಪವರ್‌-ಪ್ಲೇನಲ್ಲೇ ಲಖನೌ ತಂಡವನ್ನು ಕಟ್ಟಿಹಾಕಿತು. 6 ಓವರಲ್ಲಿ ಕೇವಲ 35 ರನ್‌ ಗಳಿಸಿದ ಲಖನೌ, ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಆರ್‌ಸಿಬಿಯ ಐದೂ ಬೌಲರ್‌ಗಳು ಎದುರಾಳಿ ಮೇಲೆ ಸವಾರಿ ಮಾಡಿದರು. 20 ಓವರಲ್ಲಿ ಕೇವಲ 146 ರನ್‌ಗೆ ಆಲೌಟ್‌ ಆಯಿತು.

ಕೊಹ್ಲಿ ಮಿಂಚು: ಸುಲಭ ಗುರಿ ಬೆನ್ನತ್ತಲು ಇಳಿದ ಆರ್‌ಸಿಬಿ 2ನೇ ಓವರಲ್ಲೇ ಫಿಲ್‌ ಸಾಲ್ಟ್‌ ವಿಕೆಟ್‌ ಕಳೆದುಕೊಂಡರೂ, ವಿರಾಟ್‌ ಕೊಹ್ಲಿಯ ಎಚ್ಚರಿಕೆಯ ಆಟ ತಂಡಕ್ಕೆ ಪವರ್‌-ಪ್ಲೇನಲ್ಲಿ ಉತ್ತಮ ಸ್ಕೋರ್‌ ತಂದುಕೊಟ್ಟಿತು. 6 ಓವರ್‌ ಅಂತ್ಯಕ್ಕೆ ಆರ್‌ಸಿಬಿ 1 ವಿಕೆಟ್‌ಗೆ 60 ರನ್‌ ದಾಖಲಿಸಿ, ಮೇಲುಗೈ ಸಾಧಿಸಿತು. ಪಡಿಕ್ಕಲ್‌(10) ಔಟಾದ ಮೇಲೆ ಕ್ರೀಸ್‌ಗಿಳಿದ ರಜತ್‌ ಪಾಟೀದಾರ್‌ ಎಂದಿನಂತೆ ಆಕ್ರಮಣಕಾರಿ ಆಟವಾಡಿದರು. ಕೊಹ್ಲಿ 49 ರನ್‌ಗೆ ಔಟಾಗಿ ಹೊರನಡೆದ ಬಳಿಕ, ಜಿತೇಶ್‌ ಶರ್ಮಾ 9 ಎಸೆತದಲ್ಲಿ 23 ರನ್‌ ಚಚ್ಚಿದರು. ರಜತ್‌ 27 ರನ್‌ಗೆ ಔಟಾದರು. ಕೊನೆಯಲ್ಲಿ ಡೇವಿಡ್‌, ಶೆಫರ್ಡ್‌ 27 ರನ್‌ ಜೊತೆಯಾಟವಾಡಿ ತಂಡವನ್ನು 15.1 ಓವರಲ್ಲಿ ಜಯದ ದಡ ಸೇರಿಸಿದರು.

ಸ್ಕೋರ್‌: ಲಖನೌ 20 ಓವರಲ್ಲಿ 146/10 (ಮಾರ್ಷ್‌ 40, ಮುಕುಲ್‌ 39, ಆಯುಷ್‌ 38, ರಸಿಖ್‌ 4-24, ಭುವನೇಶ್ವರ್‌ 3-27), ಆರ್‌ಸಿಬಿ 15.1 ಓವರಲ್ಲಿ 149/5 (ವಿರಾಟ್‌ 49, ರಜತ್‌ 27, ಪ್ರಿನ್ಸ್‌ 3-32, ಆವೇಶ್‌ 2-23) ಪಂದ್ಯಶ್ರೇಷ್ಠ: ರಸಿಖ್‌ ಸಲಾಂ

ಟರ್ನಿಂಗ್‌ ಪಾಯಿಂಟ್‌

ಲೋ ಸ್ಕೋರಿಂಗ್‌ ಪಂದ್ಯಗಳಲ್ಲಿ ಪವರ್‌-ಪ್ಲೇ ಬಹಳ ಮುಖ್ಯ. ಆರ್‌ಸಿಬಿ ಮೊದಲ 6 ಓವರಲ್ಲಿ 60 ರನ್‌ ಕಲೆಹಾಕಿದ್ದು, ಮಧ್ಯ ಓವರ್‌ಗಳಲ್ಲಿ ವಿಕೆಟ್‌ ಬಿದ್ದರೂ ತಂಡಕ್ಕೆ ಗುರಿ ತಲುಪಲು ಕಷ್ಟವಾಗಲಿಲ್ಲ.

ಮೊದಲ ಬಾರಿಗೆ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿದ ಕೊಹ್ಲಿ!

ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್‌ ಆಟಗಾರನಾಗಿ ಆಡಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ನೋವಿಗೆ ತುತ್ತಾಗಿದ್ದ ವಿರಾಟ್‌, ಬುಧವಾರದ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡಲಿಲ್ಲ. ಬ್ಯಾಟಿಂಗ್‌ ವೇಳೆ ಸ್ಪಿನ್ನರ್‌ ಸುಯಶ್‌ ಶರ್ಮಾ ಬದಲಿಗೆ ಕೊಹ್ಲಿ ಮೈದಾನಕ್ಕಿಳಿದು, ಇನ್ನಿಂಗ್ಸ್‌ ಆರಂಭಿಸಿದರು.

ಲಖನೌ ಇನ್ನಿಂಗ್ಸ್‌ನಲ್ಲಿ 51 ಡಾಟ್‌ಬಾಲ್‌!

ಆರ್‌ಸಿಬಿ ಬೌಲರ್‌ಗಳ ವಿರುದ್ಧ ರನ್‌ ಗಳಿಸಲು ಲಖನೌ ಬ್ಯಾಟರ್‌ಗಳು ತಿಣುಕಾಡಿದರು. ತಂಡದ ಇನ್ನಿಂಗ್ಸಲ್ಲಿ ಬರೋಬ್ಬರಿ 51 ಡಾಟ್‌ಬಾಲ್‌ಗಳಿದ್ದವು. ಭುವನೇಶ್ವರ್‌ 8, ಹೇಜಲ್‌ವುಡ್‌ ಹಾಗೂ ರಸಿಖ್‌ ತಲಾ 13, ಕೃನಾಲ್‌ 10, ಸುಯಶ್‌ 7 ಡಾಟ್‌ಬಾಲ್‌ಗಳನ್ನು ಹಾಕಿದರು.

ಐಪಿಎಲ್‌ನಲ್ಲಿ 1000 ರನ್‌, 100 ವಿಕೆಟ್‌: ಕೃನಾಲ್‌ 3ನೇ ಭಾರತೀಯ ಆಟಗಾರ

ಐಪಿಎಲ್‌ನಲ್ಲಿ 1000 ರನ್‌ ಪೂರೈಸಿರುವ ಹಾಗೂ 100 ವಿಕೆಟ್‌ ಕಬಳಿಸಿರುವ ಭಾರತದ 3ನೇ ಆಟಗಾರ ಎನ್ನುವ ಹಿರಿಮೆಗೆ ಆರ್‌ಸಿಬಿಯ ಕೃನಾಲ್‌ ಪಾಂಡ್ಯ ಪಾತ್ರರಾಗಿದ್ದಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಕೃನಾಲ್‌ 100 ವಿಕೆಟ್‌ ಮೈಲುಗಲ್ಲು ತಲುಪಿದರು. ಅವರು ಐಪಿಎಲ್‌ನಲ್ಲಿ ಮುಂಬೈ ಪರ 51, ಲಖನೌ ಪರ 25 ಹಾಗೂ ಆರ್‌ಸಿಬಿ ಪರ 24 ವಿಕೆಟ್‌ ಕಿತ್ತಿದ್ದಾರೆ. 1000 ರನ್‌, 100 ವಿಕೆಟ್‌ ಸಾಧನೆ ಮಾಡಿದವರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್‌ ಪಟೇಲ್‌ ಕೂಡ ಇದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ RCB 'ರಾಜ' ದರ್ಬಾರ್: ಲಕ್ನೋ ವಿರುದ್ಧ ಬೆಂಗಳೂರಿಗೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ!
RCB ಬೌಲರ್‌ಗಳ ಅಬ್ಬರಕ್ಕೆ ಎಲ್‌ಎಸ್‌ಜಿ ಉಡೀಸ್: 150 ರನ್‌ಗಳ ಗಡಿ ದಾಟದ ಲಕ್ನೋ