ಕೊರೋನಾ ಕಾರಣದಿಂದಾಗಿ ಸ್ತಬ್ಧವಾಗಿದ್ದ ಕ್ರಿಕೆಟ್ ಚಟುವಟಿಕೆಗಳು ನಿಧಾನವಾಗಿ ಗರಿಗೆದರಲಾರಂಭಿಸಿದೆ. ಇದರ ಭಾಗವಾಗಿ 8 ತಿಂಗಗಳ ಬಳಿಕ ಕ್ರಿಕೆಟ್ ಸ್ಟೇಡಿಯಂಗಳು ಅನ್‌ಲಾಕ್ ಆಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ನ.17): ಕೊರೋನಾ ಸಂಕಷ್ಟದ ನಡುವೆ ಒಂದೊಂದಾಗಿ ಕ್ರೀಡಾ ಚಟುವಟಿಕೆಗಳು ಆರಂಭವಾಗುತ್ತಿದ್ದು, ದೇಶ ಸಹಜ ಸ್ಥಿತಿಯತ್ತ ವಾಲುತ್ತಿದೆ. ಇದೀಗ ರಾಜ್ಯದಲ್ಲೂ ಕ್ರೀಡಾ ಚಟುವಟಿಕೆಗಳು ಗರಿಗೆದರುತ್ತಿವೆ.
ಕೊರೋನಾ ಲಾಕ್‌ಡೌನ್ ಆರಂಭದಲ್ಲಿ ನಿಗದಿಯಾಗಿದ್ದ 2019-20ನೇ ಸಾಲಿನ ಫೈನಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮುಂದಾಗಿದೆ. ನ. 17 ಹಾಗೂ 18 ರಂದು ಕ್ರಮವಾಗಿ ಏಕದಿನ ಮತ್ತು ಟಿ20 ಕ್ರಿಕೆಟ್ ಫೈನಲ್ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ನಿರ್ಧರಿಸಿದೆ.
undefined
ಒಲಿಂಪಿಕ್ಸ್‌ಲ್ಲಿ ಟಿ20 ಕ್ರಿಕೆಟ್ ಸೇರಿಸಬೇಕು: ರಾಹುಲ್ ದ್ರಾವಿಡ್
ಕೊರೋನಾ ನಡುವೆ ಪಂದ್ಯಗಳನ್ನು ನಡೆಸುತ್ತಿರುವ ಕಾರಣದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಂದ್ಯಗಳನ್ನು ಆಯೋಜಿಸಲಾಗಿದೆ. ನ.17ರಂದು ವೈ.ಎಸ್. ರಾಮಸ್ವಾಮಿ ಮೆಮೋರಿಯಲ್ ಏಕದಿನ ಫೈನಲ್ ಪಂದ್ಯದಲ್ಲಿ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (1) ಮತ್ತು ವೆಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೆ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದೆ. ಡಿವಿಜನ್ 1ರ 2ನೇ ಗುಂಪಿನ ಅಂತರ ಕ್ಲಬ್ ಟಿ20 ಫೈನಲ್ ಪಂದ್ಯದಲ್ಲಿ ಡಿಟಿಡಿಸಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಕೆನರಾ ಬ್ಯಾಂಕ್ ತಂಡಗಳು ಸೆಣಸಲಿವೆ. ಈ ಪಂದ್ಯ ನ.18 ರಂದು ಬೆಳಗ್ಗೆ 9.30ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಗಳಲ್ಲಿ ಬೆಂಗಳೂರಿನ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊರ ಜಿಲ್ಲೆಗಳ ಆಟಗಾರರು ಈ ತಂಡಗಳಲ್ಲಿ ಸೇರಿಕೊಂಡು ಆಡುವಂತಿಲ್ಲ. ಪಂದ್ಯಗಳಲ್ಲಿ ಆಡುವ ಎಲ್ಲಾ ಆಟಗಾರರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ. ಬೇರೆ ಜಿಲ್ಲೆಗಳ ಆಟಗಾರರು ಈ ಪಂದ್ಯಗಳಲ್ಲಿ ಆಡಬೇಕಾದರೆ ಮುಂಚಿತವಾಗಿಯೇ ಬಂದು ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು. ಹೀಗಾಗಿ ನಗರದಲ್ಲಿರುವ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ದೇಶೀಯ ಡಿವಿಜನ್ ಲೀಗ್‌ನ ಬಾಕಿಯಿದ್ದ 2 ಫೈನಲ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಈ ಪಂದ್ಯಗಳಿಗೆ ಬಿಸಿಸಿಐ ನೀಡಿರುವ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.- - ವಿನಯ್ ಮೃತ್ಯುಂಜಯ, ಕೆಎಸ್‌ಸಿಎ ಖಜಾಂಚಿ