'ಒಂದು ವೇಳೆ ನಾನೇ ಆಯ್ಕೆಗಾರನಾಗಿದ್ದರೇ..': ವಿರಾಟ್ ಟಿ20 ಬದುಕಿನ ಬಗ್ಗೆ ತುಟಿಬಿಚ್ಚಿದ ಸನ್ನಿ..!

By Naveen KodaseFirst Published May 27, 2023, 4:57 PM IST
Highlights

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮಿಂಚಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಟಿ20 ಬದುಕಿನ ಬಗ್ಗೆ ತುಟಿಬಿಚ್ಚಿದ ಸುನಿಲ್ ಗವಾಸ್ಕರ್
ಒಂದು ವೇಳೆ ನಾನೇ ಆಯ್ಕೆದಾರನಾಗಿದ್ದರೇ...

ನವದೆಹಲಿ(ಮೇ.27): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂದಿನ ವರ್ಷ ನಡೆಯುವುದರಿಂದ ಈಗಲೇ ವಿರಾಟ್ ಕೊಹ್ಲಿಯವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಬದುಕಿನ ಬಗ್ಗೆ ಚರ್ಚೆ ಮಾಡುವುದು ಅಪಕ್ವವೆನಿಸಲಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

2023ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ವಿರಾಟ್ ಕೊಹ್ಲಿ, ಕೊನೆಯ ಎರಡು ಪಂದ್ಯಗಳಲ್ಲಿ ಸತತ ಎರಡು ಶತಕ ಸಿಡಿಸುವ ಮೂಲಕ ಭರ್ಜರಿಯಾಗಿಯೇ ತನ್ನ ಅಭಿಯಾನ ಮುಗಿಸಿದ್ದರು. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಆರ್‌ಸಿಬಿ ಪರ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ 2 ಶತಕ ಸಹಿತ 639 ರನ್‌ ಬಾರಿಸಿದ್ದರು. ಈ ಮೂಲಕ ಲೀಗ್ ಹಂತ ಮುಕ್ತಾಯದ ವೇಳೆಗೆ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು.  

ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಶರಣಾಗುವ ಮೂಲಕ ಫೈನಲ್‌ಗೇರಲು ವಿಫಲವಾಗಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರನ್ನು ಭಾರತ ಟಿ20 ತಂಡದಿಂದ ಕೈಬಿಡಬೇಕು ಎನ್ನುವ ಆಗ್ರಹ ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿಬಂದಿತ್ತು. ಇದಾದ ಬಳಿಕ ರೋಹಿತ್ ಹಾಗೂ ಕೊಹ್ಲಿಯನ್ನು ಭಾರತ ಆಡಿದ ಯಾವುದೇ ಟಿ20 ಪಂದ್ಯಗಳಲ್ಲಿ ಸ್ಥಾನ ಕಲ್ಪಿಸಿರಲಿಲ್ಲ. ಇದರ ಬೆನ್ನಲ್ಲೇ ಈ ಇಬ್ಬರ ಅಂತಾರಾಷ್ಟ್ರೀಯ ಟಿ20 ವೃತ್ತಿಬದುಕು ಕೊನೆಯಾಯಿತಾ ಎನ್ನುವಂತಹ ಚರ್ಚೆಗಳು ಆರಂಭವಾಗಿದ್ದವು. ಆದರೆ ಈ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಸ್ಥಿರ ಹಾಗೂ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಹಲವು ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

'ನಾನು ಕೊನೆಯುಸಿರೆಳೆಯುವ ಮುನ್ನ ಈ 2 ಕ್ಷಣಗಳನ್ನು ನೋಡಬೇಕು'; ಕೊನೆಯಾಸೆ ಬಿಚ್ಚಿಟ್ಟ ಸುನಿಲ್ ಗವಾಸ್ಕರ್

ಇನ್ನು ವಿರಾಟ್ ಟಿ20 ಭವಿಷ್ಯದ ಕುರಿತಂತೆ ಸ್ಪೋರ್ಟ್ಸ್ ತಕ್‌ ವಾಹಿನಿಯಲ್ಲಿ ಮಾತನಾಡಿರುವ ಸನ್ನಿ, "2024ರಲ್ಲಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಯು ನಡೆಯಲಿದೆ. ಇದಕ್ಕೂ ಮುನ್ನ ಮಾರ್ಚ್‌-ಏಪ್ರಿಲ್ ವೇಳೆಗೆ ಮತ್ತೊಂದು ಐಪಿಎಲ್ ಟೂರ್ನಿಯು ನಡೆಯಲಿದೆ. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಹೇಗಿದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಹೀಗಾಗಿ ಈಗಲೇ ಕೊಹ್ಲಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನಪಡೆಯುತ್ತಾರ ಎನ್ನುವಂತಹ ಚರ್ಚೆ ಅಸಂಬದ್ದವಾದದ್ದು. ಇನ್ನು ಭಾರತ ತಂಡವು ತನ್ನ ಮುಂದಿನ ಟಿ20 ಪಂದ್ಯವನ್ನು ಜೂನ್‌ನಲ್ಲಿ ಆಡಲಿದೆ. ಸದ್ಯ ಕೊಹ್ಲಿ ಇರುವ ಫಾರ್ಮ್ ಗಮನಿಸಿದರೆ, ಖಂಡಿತವಾಗಿಯೂ ಅವರು ಭಾರತ ತಂಡದೊಳಗೆ ಸ್ಥಾನ ಪಡೆಯಲು ಅರ್ಹರಿದ್ದಾರೆ" ಎಂದಿದ್ದಾರೆ.

"ಇನ್ನು ವೆಸ್ಟ್ ಇಂಡೀಸ್ & ಅಮೆರಿಕದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ಹೇಳುವುದಾದರೇ, 2024ರ ಐಪಿಎಲ್ ಟೂರ್ನಿಯಲ್ಲಿ ಹಿರಿಯ ಆಟಗಾರರು ತೋರುವ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು, ಚುಟುಕು ಕ್ರಿಕೆಟ್ ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಬೇಕು" ಎಂದು ಸಲಹೆ ನೀಡಿದ್ದಾರೆ

"ಸದ್ಯದ ಫಾರ್ಮ್‌ ಗಮನಿಸಿದರೆ, ಮುಂಬರುವ ಭಾರತದ ಟಿ20 ಸರಣಿಗೆ ವಿರಾಟ್ ಕೊಹ್ಲಿಯವರನ್ನು ಖಂಡಿತವಾಗಿಯೂ ಆಯ್ಕೆ ಮಾಡಬೇಕು. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅವರು ಎರಡು ಶತಕ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದಿರಲಿ, ಅರ್ಧಶತಕ ಬಾರಿಸುವುದು ಸುಲಭವಲ್ಲ. ಆದರೆ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಎರಡು ಶತಕ ಬಾರಿಸಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಭಾರತವು ಆಡಲಿರುವ ಟಿ20 ಸರಣಿಗೆ ಒಂದು ವೇಳೆ ನಾನೇ ಆಯ್ಕೆದಾರನಾಗಿದ್ದರೇ, ಯಾವುದೇ ಅನುಮಾನವಿಲ್ಲದೇ ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ" ಎಂದು ಸನ್ನಿ ಹೇಳಿದ್ದಾರೆ.

ಮುಂಬರುವ ಜೂನ್ 20ರಿಂದ 30ರ ವರೆಗೂ ತವರಿನಲ್ಲಿ ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಸೀಮಿತ ಓವರ್‌ ಕ್ರಿಕೆಟ್‌ ಸರಣಿಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡುವ ಬಹುತೇಕ ಆಟಗಾರರು ಈ ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. 3 ಪಂದ್ಯಗಳ ಏಕದಿನ ಅಥವಾ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ, ಐಪಿಎಲ್‌ ಮುಗಿದ ಮೇಲೆ ಘೋಷಿಸುವ ನಿರೀಕ್ಷೆ ಇದೆ.

click me!