IPL 2023 'ವರ್ಣಿಸಲು ಪದಗಳು ಸಾಲದು': ಶುಭ್‌ಮನ್ ಗಿಲ್ ಆಟ ಕೊಂಡಾಡಿದ ಕೊಹ್ಲಿ, ಎಬಿಡಿ..!

Published : May 27, 2023, 12:07 PM IST
IPL 2023 'ವರ್ಣಿಸಲು ಪದಗಳು ಸಾಲದು': ಶುಭ್‌ಮನ್ ಗಿಲ್ ಆಟ ಕೊಂಡಾಡಿದ ಕೊಹ್ಲಿ, ಎಬಿಡಿ..!

ಸಾರಾಂಶ

ಮುಂಬೈ ಇಂಡಿಯನ್ಸ್ ಎದುರು ಆಕರ್ಷಕ ಶತಕ ಚಚ್ಚಿದ ಶುಭ್‌ಮನ್ ಗಿಲ್‌ ಮುಂಬೈ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಗುಜರಾತ್ ಟೈಟಾನ್ಸ್ ಶುಭ್‌ಮನ್ ಗಿಲ್ ಆಟ ಕೊಂಡಾಡಿದ ಕ್ರಿಕೆಟ್ ದಿಗ್ಗಜರು

ಅಹಮದಾಬಾದ್‌(ಮೇ.27): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಮ್ಮೆ ಶುಭ್‌ಮನ್ ಗಿಲ್ ಅವರ ಪ್ರತಿಭೆ ಅನಾವರಣವಾಗಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಂದಹಾಗೆ ಇದು 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಮೂರನೇ ಶತಕವಾಗಿದೆ. ಶುಭ್‌ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಸೇರಿದಂತೆ ಹಲವು ಕ್ರೀಡಾದಿಗ್ಗಜರು ಸೋಷಿಯಲ್‌ ಮೀಡಿಯಾದಲ್ಲಿ ಅವರನ್ನು ಗುಣಗಾನ ಮಾಡಿದ್ದಾರೆ.

ಶುಭ್‌ಮನ್‌ ಗಿಲ್‌ ಈಗ ಮುಟ್ಟಿದ್ದೆಲ್ಲಾ ಚಿನ್ನ! ‘ರನ್ನಾಸುರ’ ಗಿಲ್‌ರ ಅತ್ಯಮೋಘ ಶತಕವು ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು 16ನೇ ಆವೃತ್ತಿಯ ಐಪಿಎಲ್‌ ಫೈನಲ್‌ಗೆ ಕರೆದೊಯ್ದಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧ ಶುಕ್ರವಾರ ನಡೆದ ಪ್ಲೇ-ಆಫ್‌ನ ಕ್ವಾಲಿಫೈಯರ್‌-2 ಪಂದ್ಯದಲ್ಲಿ 62 ರನ್‌ ಗೆಲುವು ಸಾಧಿಸಿದ ಗುಜರಾತ್‌, ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು.

ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಮಾಡುವ ಮುಂಬೈ ಇಂಡಿಯನ್ಸ್‌ ನಿರ್ಧಾರ ಕೈಹಿಡಿಯಲಿಲ್ಲ. ಗಿಲ್‌ ಅಬ್ಬರ ಮುಂಬೈ ಬೌಲರ್‌ಗಳನ್ನು ಮಂಕಾಗಿಸಿದರೆ, ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ 75000ಕ್ಕೂ ಹೆಚ್ಚಿನ ಅಭಿಮಾನಿಗಳನ್ನು ರಂಜಿಸಿತು.

IPL 2023: ಫೈನಲ್‌ಗೆ ಗುಜರಾತ್‌ ಟೈಟಾನ್ಸ್‌, ಮನೆಗೆ ನಡೆದ ಐದು ಬಾರಿಯ ಚಾಂಪಿಯನ್ಸ್‌!

20 ಓವರಲ್ಲಿ 3 ವಿಕೆಟ್‌ಗೆ 233 ರನ್‌ ಕಲೆಹಾಕಿ, ಈ ಆವೃತ್ತಿಯ 3ನೇ ಗರಿಷ್ಠ ಮೊತ್ತ ದಾಖಲಿಸಿದ ಗುಜರಾತ್‌ ತನ್ನ ಎದುರಾಳಿಯನ್ನು 18.2 ಓವರಲ್ಲಿ 171 ರನ್‌ಗೆ ಆಲೌಟ್‌ ಮಾಡಿ ಸಂಭ್ರಮಿಸಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಕೇವಲ 60 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 10 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ 129 ರನ್ ಸಿಡಿಸಿ ಮಿಂಚಿದರು. 

ಹಲವು ಕ್ರಿಕೆಟಿರಿಂದ ಗಿಲ್ ಗುಣಗಾನ:

ಪ್ರತಿಭಾನ್ವಿತ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಅವರ ಆಟವನ್ನು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಯುವರಾಜ್ ಸಿಂಗ್ ಸೇರಿದಂತೆ ಹಲವು ಹಿರಿಯ ಆಟಗಾರರು ಕೊಂಡಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶುಭ್‌ಮನ್ ಗಿಲ್ ಫೋಟೋ ಹಾಕಿ 'ಸ್ಟಾರ್' ಎಮೋಜಿ ಪೋಸ್ಟ್ ಮಾಡಿದ್ದಾರೆ. 

ಇನ್ನು ಮಿಸ್ಟರ್ 360 ಖ್ಯಾತಿಯ ಆರ್‌ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌, ಶುಭ್‌ಮ್ ಗಿಲ್! ವಾವ್ಹ್‌, ನನಗೆ ವರ್ಣಿಸಲು ಪದಗಳು ಸಿಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

ಭಾರತದ ಹೊಸ ಯುವರಾಜನಿಂದ ಮತ್ತೊಂದು ಗ್ರೇಟ್‌ ಇನಿಂಗ್ಸ್‌ ಮೂಡಿ ಬಂದಿದೆ ಎಂದು 2011ರ ಏಕದಿನ ವಿಶ್ವಕಪ್ ಹೀರೋ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌, ಗಿಲ್‌ ಆಟವನ್ನು ಕೊಂಡಾಡಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್, ಎಂತಹ ಆಟಗಾರ, ಕಳೆದ 4 ಪಂದ್ಯಗಳಲ್ಲಿ ಮೂರು ಶತಕ ಮತ್ತು ಉಸಿರುಬಿಗಿಹಿಡಿದು ನೋಡುವಂತಹ ಶಾಟ್‌ಗಳು. ಅದ್ಭುತವಾದ ಸ್ಥಿರಪ್ರದರ್ಶನ ಹಾಗೂ ರನ್‌ಗಳಿಸುವ ಹಸಿವು. ಈ ರೀತಿಯ ಪ್ರದರ್ಶನ ದೊಡ್ಡ ಆಟಗಾರರಿಂದ ಮಾತ್ರ ಸಾಧ್ಯ ಎಂದು ವೀರೂ ಟ್ವೀಟ್ ಮಾಡಿದ್ದಾರೆ.

ಶುಭ್‌ಮನ್ ಗಿಲ್ ಸದ್ಯ 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಒಡೆಯರಾಗಿ ಹೊರಹೊಮ್ಮಿದ್ದಾರೆ. ಇಲ್ಲಿಯವರೆಗೆ ಒಟ್ಟು 16 ಪಂದ್ಯಗಳನ್ನಾಡಿ 60.78ರ ಬ್ಯಾಟಿಂಗ್ ಸರಾಸರಿಯಲ್ಲಿ 4 ಅರ್ಧಶತಕ ಹಾಗೂ 3 ಶತಕ ಸಹಿತ 851 ರನ್ ಬಾರಿಸಿದ್ದಾರೆ. ಈ ಮೂಲಕ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?