ಸಮಿತ್ ದ್ರಾವಿಡ್ ಇದೀಗ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಕನ್ನಡದಲ್ಲಿ ಮಾತು ಆರಂಭಿಸಿ ಖುಷಿ ಹಂಚಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಇದೀಗ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ವಲಯದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಂದೆಯ ಹೆಜ್ಜೆಗುರುತನ್ನೇ ಹಿಂಬಾಲಿಸುತ್ತಿರುವ ಸಮಿತ್ ದ್ರಾವಿಡ್ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಏಜ್ ಗ್ರೂಪ್ ಟೂರ್ನಿಗಳಲ್ಲಿ ಅಮೋಘ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದ ಸಮಿತ್ ದ್ರಾವಿಡ್, ಮುಂಬರುವ ಆಸ್ಟ್ರೇಲಿಯಾ ಅಂಡರ್-19 ತಂಡದ ಎದುರು ತಮ್ಮ ಪ್ರತಿಭೆ ಅನಾವರಣ ಮಾಡಲು ಸಜ್ಜಾಗಿದ್ದಾರೆ. ಇನ್ನು ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಸಮಿತ್ ದ್ರಾವಿಡ್, ಕನ್ನಡದಲ್ಲಿಯೇ ಮಾತು ಆರಂಭಿಸಿ ಗಮನ ಸೆಳೆಯುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯು ಮುಂಬರುವ ಸೆಪ್ಟೆಂಬರ್ 21, 23 ಹಾಗೂ 26ರಂದು ಪದುಚೆರಿಯಲ್ಲಿ ನಡೆಯಲಿದೆ. ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಮಾನ್ ನಾಯಕನಾಗಿ ಭಾರತ ಅಂಡರ್-19 ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ಸಮಿತ್ ದ್ರಾವಿಡ್, ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಆ ಖುಷಿಯನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತ ಅಂಡರ್ 19 ತಂಡಕ್ಕೆ ಎಂಟ್ರಿ ಕೊಟ್ಟ ದ್ರಾವಿಡ್ ಪುತ್ರ; ಪಾದಾರ್ಪಣೆ ಪಂದ್ಯದಲ್ಲೇ ಸಮಿತ್‌ಗೆ ಅಗ್ನಿ ಪರೀಕ್ಷೆ..!
"ಎಲ್ಲಾ ಕನ್ನಡಿಗರಿಗೂ ನಮಸ್ಕಾರ, ಮೊದಲನೆಯದಾಗಿ, ನಾನು ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗೆ ಧನ್ಯವಾದಗಳು. ನನಗೆ ತುಂಬಾ ಖುಷಿ ಎನಿಸುತ್ತಿದೆ, ಈ ಕ್ಷಣಕ್ಕಾಗಿ ನಾನು ತುಂಬಾ ಪರಿಶ್ರಮಪಟ್ಟಿದ್ದೇನೆ" ಎಂದು ಸಮಿತ್ ದ್ರಾವಿಡ್ ಹೇಳಿದ್ದಾರೆ.
ಹೀಗಿದೆ ನೋಡಿ ಸಮಿತ್ ದ್ರಾವಿಡ್ ಮಾತು:
ಭಾರತ U19 ತಂಡಕ್ಕೆ ಆಯ್ಕೆಯಾದ ಕ್ಷಣಗಳನ್ನು ಹಂಚಿಕೊಂಡ ನಮ್ಮ ಹೆಮ್ಮೆಯ ಕನ್ನಡಿಗ ಸಮಿತ್ ದ್ರಾವಿಡ್! ♥️💛
ಆಲ್ ದಿ ಬೆಸ್ಟ್. 🥳💐 pic.twitter.com/XnKB5sFZam
ಇನ್ನು ಮೂರು ಪಂದ್ಯಗಳ ಸರಣಿ ಮುಕ್ತಾಯದ ಬಳಿಕ ಭಾರತ ಅಂಡರ್-19 ತಂಡವು ಚೆನ್ನೈನತ್ತ ಮುಖ ಮಾಡಲಿದ್ದು, ಅಲ್ಲಿ 4 ದಿನಗಳ ಎರಡು ಪಂದ್ಯಗಳನ್ನಾಡಲಿದೆ. ಈ ಸರಣಿಯು ಸೆಪ್ಟೆಂಬರ್ 30ರಿಂದ ಅಕ್ಟೋಬರ್ 07ರ ವರೆಗೆ ನಡೆಯಲಿದ್ದು, ಭಾರತ ತಂಡವನ್ನು ಮಧ್ಯ ಪ್ರದೇಶ ಮೂಲದ ಸೋಹಮ್ ಪಟವರ್ಧನ್ ಮುನ್ನಡೆಸಲಿದ್ದಾರೆ.
ಮೈಸೂರಿನ ಮಡಿಲಿಗೆ ಮಹಾರಾಜ ಟ್ರೋಫಿ ಕಿರೀಟ; ಬೆಂಗಳೂರು ಬ್ಲಾಸ್ಟರ್ಸ್‌ಗೆ ಮತ್ತೊಮ್ಮೆ ನಿರಾಸೆ
ಭಾನುವಾರ(ಸೆ.01)ವಷ್ಟೇ ಮುಕ್ತಾಯವಾದ ಮೂರನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸಮಿತ್ ದ್ರಾವಿಡ್, ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಮೈಸೂರು ವಾರಿಯರ್ಸ್ ಪರ ಸಮಿತ್ ದ್ರಾವಿಡ್ 7 ಪಂದ್ಯಗಳನ್ನಾಡಿ 82 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಮೈಸೂರು ವಾರಿಯರ್ಸ್ ತಂಡವು ಇದೀಗ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಇದಕ್ಕೂ ಮೊದಲು ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಎನಿಸಿಕೊಳ್ಳಲು 18 ವರ್ಷದ ಸಮಿತ್ ಪ್ರಮುಖ ಕೊಡುಗೆ ನೀಡಿದ್ದರು. ಟೂರ್ನಿಯಲ್ಲಿ ಅವರು 8 ಪಂದ್ಯಗಳಲ್ಲಿ 362 ರನ್ ಸಿಡಿಸಿದ್ದರು. ಇದರ ಜತೆಗೆ ಮಧ್ಯಮ ವೇಗದ ಬೌಲರ್ ಆಗಿರುವ ಸಮಿತ್ ದ್ರಾವಿಡ್ 16 ವಿಕೆಟ್ ಪಡೆದಿದ್ದರು.