ಮೈಸೂರಿನ ಮಡಿಲಿಗೆ ಮಹಾರಾಜ ಟ್ರೋಫಿ ಕಿರೀಟ; ಬೆಂಗಳೂರು ಬ್ಲಾಸ್ಟರ್ಸ್‌ಗೆ ಮತ್ತೊಮ್ಮೆ ನಿರಾಸೆ

By Kannadaprabha News  |  First Published Sep 2, 2024, 7:09 AM IST

ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಮಣಿಸಿದ ಮೈಸೂರು ವಾರಿಯರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ


ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಕರುಣ್‌ ನಾಯರ್‌ ನಾಯಕತ್ವದ ಮೈಸೂರಿಗೆ 45 ರನ್‌ ಗೆಲುವು ಲಭಿಸಿತು. ಇದರೊಂದಿಗೆ ಕಳೆದ ಬಾರಿ ಫೈನಲ್‌ ಸೋಲಿನ ಕಹಿಯನ್ನು ಮರೆತು ಮೈಸೂರು ತಂಡ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಮೈಸೂರು ತಂಡ ಎಸ್‌.ಯು.ಕಾರ್ತಿಕ್‌, ಕರುಣ್‌ ನಾಯರ್‌ ಹಾಗೂ ಮನೋಜ್‌ ಭಾಂಡಗೆ ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್‌ ಕಲೆಹಾಕಿತು. ದೊಡ್ಡ ಗುರಿ ನೋಡಿಗೆ ಕಂಗಾಲಾದ ಬೆಂಗಳೂರು 8 ವಿಕೆಟ್‌ಗೆ 162 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

Tap to resize

Latest Videos

undefined

ಈ 3 ದಿಗ್ಗಜ ಕ್ರಿಕೆಟಿಗರಿಗೆ ಟೀಂ ಇಂಡಿಯಾ ಬಾಗಿಲು ಬಂದ್..! ಟೆಸ್ಟ್‌ನಲ್ಲೂ ಸ್ಥಾನ ಸಿಗೋದು ಡೌಟ್..!

ನಾಯಕ ಮಯಾಂಕ್‌ ಅಗರ್‌ವಾಲ್‌(06) ಮೊದಲ ಓವರ್‌ನಲ್ಲೇ ಔಟಾಗಿದ್ದು ತಂಡಕ್ಕೆ ಮುಳುವಾಯಿತು. ಬಳಿಕ ಬ್ಯಾಟರ್‌ಗಳ ಪೆವಿಲಿಯನ್‌ ಪರೇಡ್‌ ನಡೆಯಿತು. ಭುವನ್‌ ರಾಜು 1, ಶಿವಕುಮಾರ್‌ ರಕ್ಷಿತ್‌ 5, ಶುಭಾಂಗ್‌ ಹೆಗ್ಡೆ 5, ಸೂರಜ್‌ ಅಹುಜಾ 8 ರನ್‌ ಗಳಿಸಿ ಔಟಾದರು. ಈ ನಡುವೆ ಕ್ರೀಸ್‌ನಲ್ಲಿ ಏಕಾಂಗಿಯಾಗಿ ಅಬ್ಬರಿಸುತ್ತಿದ್ದ ಎಲ್‌.ಆರ್‌.ಕಾರ್ತಿಕ್‌ 10ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ತಂಡದ ಗೆಲುವಿನ ಕನಸು ಭಗ್ನಗೊಂಡಿತು. ಅವರು 32 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ನೊಂದಿಗೆ 51 ರನ್‌ ಸಿಡಿಸಿದರು. ವಿದ್ಯಾಧರ್‌ ಪಾಟೀಲ್‌ ಹಾಗೂ ಕೆ.ಗೌತಮ್‌ ತಲಾ 2 ವಿಕೆಟ್‌ ಪಡೆದರು.

ಇದು ಮೈಸೂರು ವಾರಿಯರ್ಸ್‌ಗೆ ಮರೆಯಲಾಗದ ಅದ್ಭುತ ಕ್ಷಣ! 🏆🥳

2024ರ ಮಹಾರಾಜ ಟ್ರೋಫಿಯ ಚಾಂಪಿಯನ್ಸ್‌ಗೆ ಮತ್ತೊಮ್ಮೆ ಅಭಿನಂದನೆಗಳು 💐 pic.twitter.com/mdV3Mragtj

— Star Sports Kannada (@StarSportsKan)

ಸ್ಫೋಟಕ ಆಟ: ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮೈಸೂರು ಉತ್ತಮ ಆರಂಭ ಪಡೆಯಿತು. ಎಸ್‌.ಯು.ಕಾರ್ತಿಕ್‌ ತಂಡಕ್ಕೆ ಅಬ್ಬರದ ಆರಂಭ ಒದಗಿಸಿಕೊಟ್ಟರು. 2ನೇ ವಿಕೆಟ್‌ಗೆ ಅವರು ಕರುಣ್‌ ಜೊತೆಗೂಡಿ 81 ರನ್‌ ಸೇರಿಸಿದರು. 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನೊಂದಿಗೆ 71 ರನ್‌ ಸಿಡಿಸಿದ ಕಾರ್ತಿಕ್‌ 14ನೇ ಓವರ್‌ನಲ್ಲಿ ನಿರ್ಗಮಿಸಿದರು. 

ಬಾಂಗ್ಲಾದೇಶ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್; ಸ್ಟಾರ್ ಕ್ರಿಕೆಟಿಗನಿಗೆ ಗಾಯ..!

ನಿಧಾನವಾಗಿ ರನ್‌ ಗಳಿಸುತ್ತಿದ್ದ ಕರುಣ್‌ ಕೊನೆಗೆ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರು 4ನೇ ವಿಕೆಟ್‌ಗೆ ಮನೋಜ್ ಭಾಂಡಗೆ ಜೊತೆಗೂಡಿ ಕೇವಲ 15 ಎಸೆತಗಳಲ್ಲಿ 48 ರನ್‌ ಚಚ್ಚಿದರು. 18ನೇ ಓವರ್‌ನಲ್ಲಿ ಕರುಣ್‌(45 ಎಸೆತಗಳಲ್ಲಿ 66) ಔಟಾದರು. ಆದರೆ ಕೊನೆ 3 ಓವರ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಮನೋಜ್‌ ಕೇವಲ 13 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್‌ನೊಂದಿಗೆ 44 ರನ್‌ ಸಿಡಿಸಿ ತಂಡವನ್ನು 200ರ ಗಡಿ ದಾಟಿಸಿದರು. ನವೀನ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌: ಮೈಸೂರು 20 ಓವರಲ್ಲಿ 207/4 (ಕಾರ್ತಿಕ್‌ 71, ಕರುಣ್‌ 66, ಮನೋಜ್‌ 44*, ನವೀನ್‌ 2/44), ಬೆಂಗಳೂರು 20 ಓವರಲ್ಲಿ 162/8 (ಚೇತನ್‌ 51, ಜೋಶಿ 18, ವಿದ್ಯಾಧರ್‌ 3/18)

ಬೆಂಗಳೂರಿಗೆ ಈ ಸಲವೂ ಕಪ್‌ ಇಲ್ಲ

ಬೆಂಗಳೂರು ತಂಡ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ 2ನೇ ಬಾರಿ ಫೈನಲ್‌ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತು. 2022ರ ಚೊಚ್ಚಲ ಆವೃತ್ತಿಯಲ್ಲಿ ಫೈನಲ್‌ಗೇರಿದ್ದ ತಂಡ ಗುಲ್ಬರ್ಗಾ ಮಿಸ್ಟಿಕ್ಸ್‌ ವಿರುದ್ಧ ಸೋತು ರನ್ನರ್‌-ಅಪ್‌ ಆಗಿತ್ತು.

03ನೇ ಬಾರಿ: ಮಹಾರಾಜ ಟ್ರೋಫಿಯ 3 ಆವೃತ್ತಿಯ ಫೈನಲ್‌ನಲ್ಲೂ ಮೊದಲು ಬ್ಯಾಟ್‌ ಮಾಡಿದ ತಂಡ ಜಯಗಳಿಸಿದೆ.

01ನೇ ಗೆಲುವು: ಈ ಬಾರಿ ಬೆಂಗಳೂರು ವಿರುದ್ಧ ಮೈಸೂರಿಗೆ ಇದು ಮೊದಲ ಜಯ. ಲೀಗ್‌ ಹಂತದ 2 ಪಂದ್ಯದಲ್ಲೂ ಸೋತಿತ್ತು.

ಕಳೆದ ಸಲ ರನ್ನರ್‌-ಅಪ್‌: ಈ ಬಾರಿ ಚಾಂಪಿಯನ್‌

ಮೈಸೂರು ತಂಡ ಕಳೆದ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದರೂ, ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 8 ರನ್‌ಗಳಿಂದ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. ಈ ಬಾರಿ ತಂಡ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿದೆ.

click me!