Kohli vs BCCI: ವಿರಾಟ್ ಕೊಹ್ಲಿ ನಡೆಗೆ ಕ್ರಿಕೆಟ್ ದಿಗ್ಗಜರ ತೀವ್ರ ಆಕ್ರೋಶ..!

By Suvarna NewsFirst Published Dec 17, 2021, 8:37 AM IST
Highlights

* ಬಿಸಿಸಿಐ ವಿರುದ್ದ ಕೆಲವು ಆರೋಪಗಳನ್ನು ಮಾಡಿದ್ದ ವಿರಾಟ್ ಕೊಹ್ಲಿ

* ಕೊಹ್ಲಿ ಹೇಳಿಕೆಗೆ ಅಸಮಾಧಾನ ಹೊರಹಾಕಿದ ಕ್ರಿಕೆಟ್ ದಿಗ್ಗಜರು

* ದಕ್ಷಿಣ ಆಫ್ರಿಕಾ ಸರಣಿಯ ಬಗ್ಗೆ ಗಮನ ಕೊಡಿ ಎಂದು ಕಿವಿ ಮಾತು ಹೇಳಿದ ಮಾಜಿ ಕ್ರಿಕೆಟಿಗರು

ನವದೆಹಲಿ(ಡಿ.17): ‘ತಮಗೆ ಮುಂಚಿತವಾಗಿ ತಿಳಿಸದೆ ಏಕದಿನ ನಾಯಕತ್ವದಿಂದ ಕಿತ್ತೊಗೆದರು, ಟಿ20 ನಾಯಕನಾಗಿ ಮುಂದುವರಿಯುವಂತೆ ಯಾರೂ ಹೇಳಲಿಲ್ಲ’ ಎಂಬಿತ್ಯಾದಿ ಗಂಭೀರ ಆರೋಪಗಳನ್ನು ಸುದ್ದಿಗೋಷ್ಠಿ ನಡೆಸಿ ಮಾಡಿದ ಟೀಂ ಇಂಡಿಯಾ (Team India) ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ (Virat Kohli) ನಡೆಯ ಬಗ್ಗೆ ಭಾರತದ ದಿಗ್ಗಜ ಕ್ರಿಕೆಟಿಗರು, ಮಾಜಿ ಆಯ್ಕೆ ಸಮಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಗ್ಗಜರಾದ ಕಪಿಲ್‌ ದೇವ್‌ (Kapil Dev), ಸುನಿಲ್‌ ಗವಾಸ್ಕರ್‌ (Sunil Gavaskar), ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಸದಸ್ಯ ಶರಣ್‌ದೀಪ್‌ ಸಿಂಗ್‌ ಸಿಂಗ್‌ ಹೇಳಿಕೆ ನೀಡಿದ್ದು, ದಕ್ಷಿಣ ಆಫ್ರಿಕಾದಂತಹ ಪ್ರಮುಖ ಸರಣಿಗೂ ಮುನ್ನ ಇಂತಹ ವಿವಾದಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಆಫ್ರಿಕಾ ಸರಣಿಗೆ ಗಮನಕೊಡಿ:

ಕೊಹ್ಲಿ ನಡೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌, ‘ಇಂತಹ ಸಮಯದಲ್ಲಿ ಯಾರ ಕಡೆಗೂ ಕೈ ತೋರಿಸುವುದು ಸರಿಯಲ್ಲ. ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯತ್ತ ಸಂಪೂರ್ಣ ಹರಿಸಬೇಕು. ಮಹತ್ವದ ಸರಣಿಗೂ ಮುನ್ನ ಈ ರೀತಿ ವಿವಾದ ಸೃಷ್ಟಿಸುವುದು ಸರಿಯಲ್ಲ. ಬಿಸಿಸಿಐ (BCCI) ಅಧ್ಯಕ್ಷ ಅಥವಾ ಟೀಂ ಇಂಡಿಯಾ ನಾಯಕ ಇಬ್ಬರೂ ದೊಡ್ಡ ಸ್ಥಾನದಲ್ಲಿರುವವರು. ಆದರೆ ಸಾರ್ವಜನಿಕವಾಗಿ ಪರಸ್ಪರ ಆರೋಪಗಳನ್ನು ಮಾಡುವುದು ಸೌರವ್‌ ಗಂಗೂಲಿ (Sourav Ganguly) ಅಥವಾ ವಿರಾಟ್‌ ಕೊಹ್ಲಿ ಇಬ್ಬರಿಗೂ ಒಳ್ಳೆಯದಲ್ಲ’ ಎಂದಿದ್ದಾರೆ. ‘ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಈಗ ದೇಶದ ಬಗ್ಗೆ ಯೋಚಿಸುವುದೇ ಸರಿಯಾದ ದಾರಿ’ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಭಿನ್ನಾಭಿಪ್ರಾಯ ಸರಿಯಲ್ಲ:

ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಲಿಟ್ಲ್‌ ಮಾಸ್ಟರ್‌ ಸುನಿಲ್‌ ಗವಾಸ್ಕರ್‌, ‘ಕೊಹ್ಲಿಯ ಹೇಳಿಕೆ ಬಿಸಿಸಿಐಗೆ ಉತ್ತಮ ಹೆಸರು ತರುವುದಿಲ್ಲ. ಕೊಹ್ಲಿ ಇಂತಹ ಹೇಳಿಕೆ ನೀಡಲು ಕಾರಣ ಏನು ಎಂಬುದನ್ನು ಅವರ ಜೊತೆ ಪ್ರಶ್ನಿಸಬೇಕು. ಈ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷರೇ ಕೊಹ್ಲಿ ಜೊತೆ ಮಾತನಾಡಬೇಕು ಮತ್ತು ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಹೇಗೆ ಬಂತು ಎಂಬುದನ್ನು ಅವರು ಪ್ರಶ್ನಿಸಬೇಕು. ಭಾರತೀಯ ನಾಯಕನ ಹೇಳಿಕೆ ಮತ್ತು ತಮ್ಮ ನಡುವಿನ ಹೇಳಿಕೆ ಬಗ್ಗೆ ಪ್ರಶ್ನಿಸಲು ಅವರೇ ಸೂಕ್ತ ವ್ಯಕ್ತಿ’ ಎಂದಿದ್ದಾರೆ.

Virat Kohli Press Conference: ಬಿಸಿಸಿಐ ಬಣ್ಣ ಬಯಲು ಮಾಡಿದ ಕಿಂಗ್ ಕೊಹ್ಲಿ..!

‘ಆಯ್ಕೆ ಸಮಿತಿ ಮುಖ್ಯಸ್ಥರು ಏಕದಿನ ನಾಯಕತ್ವದಿಂದ ತಮ್ಮನ್ನು ಕೆಳಗಿಳಿಸಲಾಗುತ್ತದೆ ಎಂದಾಗ ಕೊಹ್ಲಿ ಅದನ್ನು ಸ್ವೀಕರಿಸಬೇಕಿತ್ತು. ಆಯ್ಕೆ ಸಮಿತಿಗೆ ಅವರದ್ದೇ ಆದ ಹಕ್ಕುಗಳಿವೆ. ಕೊಹ್ಲಿ ಇದಕ್ಕೆ ಸಹಕರಿಸಬೇಕಿತ್ತು’ ಎಂದೂ ಗವಾಸ್ಕರ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಆಘಾತಕಾರಿ:

ಭಾರತದ ಮಾಜಿ ಆಯ್ಕೆ ಸಮಿತಿ ಸದಸ್ಯ ಶರಣ್‌ದೀಪ್‌ ಸಿಂಗ್‌ ಪ್ರತಿಕ್ರಿಯಿಸಿ, ‘ತಂಡಕ್ಕೆ ಆಟಗಾರರು ಮತ್ತು ನಾಯಕನನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಯ ಕೆಲಸ. ಆಯ್ಕೆ ಪ್ರಕ್ರಿಯೆಯಲ್ಲಿ ಬಿಸಿಸಿಐ ಪಾತ್ರ ಇರುವುದಿಲ್ಲ. ಕೊಹ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು ಆಘಾತ ಉಂಟುಮಾಡಿದೆ. ಈ ರೀತಿ ಆಗಬಾರದಿತ್ತು’ ಎಂದಿದ್ದಾರೆ.

ಸೀಮಿತ ಓವರ್‌ನಲ್ಲಿ ಎರಡೆರಡು ನಾಯಕರು ಇರಬಾರದು ಎಂಬುದು ನನ್ನ ಅಭಿಪ್ರಾಯ. ನಾಯಕತ್ವ ವಿಚಾರವನ್ನು ವೃತ್ತಿಪರವಾಗಿಯೇ ನಿರ್ವಹಿಸಬೇಕಿತ್ತು ಮತ್ತು ಕೊಹ್ಲಿ ಈ ಬಗ್ಗೆ ಮೊದಲೇ ಮಾಹಿತಿ ನೀಡಬೇಕಿತ್ತು. ಇಂತದ ವಿಚಾರಗಳು ಭಾರತೀಯ ಕ್ರಿಕೆಟ್‌ಗೆ ಹಾನಿ ಉಂಟು ಮಾಡುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ನಡುವಿನ ಮನಸ್ತಾಪ ವರದಿಗಳನ್ನು ಅವರು ಅಲ್ಲಗೆಳೆದಿದ್ದಾರೆ. ಅವರ ನಡುವೆ ಯಾವುದೇ ವೈಮನಸ್ಸು ಇರಲು ಸಾಧ್ಯವಿಲ್ಲ ಎಂದಿದ್ದಾರೆ.
 

click me!