ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್‌ ನೀಡಲು ಕಾರಣವೇನು? ಮಾಸ್ಟರ್‌ ಪ್ಲಾನ್‌ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ

Published : Jun 29, 2022, 01:19 PM IST
ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್‌ ನೀಡಲು ಕಾರಣವೇನು? ಮಾಸ್ಟರ್‌ ಪ್ಲಾನ್‌ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ

ಸಾರಾಂಶ

* ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ * ಕೊನೆಯ ಓವರ್‌ ಬೌಲಿಂಗ್‌ ಮಾಡಿ ಭಾರತವನ್ನು ಗೆಲ್ಲಿಸಿದ ಉಮ್ರಾನ್ ಮಲಿಕ್ * ಕೊನೆಯ ಓವರ್ ಉಮ್ರಾನ್‌ಗೆ ನೀಡಿದ್ದರ ಸೀಕ್ರೇಟ್ ಬಿಚ್ಚಿಟ್ಟ ನಾಯಕ ಹಾರ್ದಿಕ್ ಪಾಂಡ್ಯ

ಡಬ್ಲಿನ್(ಜೂ.29): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 4 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ಭಾರತ ಕ್ರಿಕೆಟ್ ತಂಡವು ಕ್ಲೀನ್‌ಸ್ವೀಪ್ ಮಾಡಿದೆ. ಎರಡನೇ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ, ಕೊನೆಯ ಓವರ್‌ ಬೌಲಿಂಗ್‌ ಮಾಡಲು ಅನನುಭವಿ ಉಮ್ರಾನ್‌ ಮಲಿಕ್‌ಗೆ ಅವಕಾಶ ನೀಡಿದ್ದೇಕೆ ಎನ್ನುವ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.

ಭಾರತ ಹಾಗೂ ಐರ್ಲೆಂಡ್ (India vs Ireland) ತಂಡಗಳ ನಡುವಿನ ಎರಡನೇ ಟಿ20 ಪಂದ್ಯವು ಹೈಸ್ಕೋರ್ ಮ್ಯಾಚ್‌ಗೆ ಸಾಕ್ಷಿಯಾಯಿತು. ಉಭಯ ತಂಡಗಳು 200+ ರನ್‌ ಬಾರಿಸುವ ಮೂಲಕ ಅಕ್ಷರಶಃ ರನ್ ಮಳೆಯನ್ನೇ ಹರಿಸಿದವು. ಐರ್ಲೆಂಡ್ ತಂಡವು ಎರಡನೇ ಟಿ20 ಪಂದ್ಯ ಗೆಲ್ಲಲು ಕೊನೆಯ ಓವರ್‌ನಲ್ಲಿ 17 ರನ್ ಬಾರಿಸಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ (Hardik Pandya), ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಜಮ್ಮು ಮೂಲದ ಯುವ ವೇಗಿ ಉಮ್ರಾನ್ ಮಲಿಕ್‌ಗೆ (Umran Malik) ನೀಡಿದರು. ಅಕ್ಷರಶಃ ರೋಚಕತೆಯಿಂದ ಕೂಡಿದ್ದ ಕೊನೆಯ ಓವರ್‌ನಲ್ಲಿ ಉಮ್ರಾನ್ ಮಲಿಕ್ ಕೇವಲ 12 ರನ್ ನೀಡುವ ಮೂಲಕ ಭಾರತಕ್ಕೆ 4 ರನ್‌ಗಳ ಗೆಲುವು ದಾಖಲಿಸುವಂತೆ ಮಾಡುವಲ್ಲಿ ನೆರವಾದರು. ಇದೀಗ ಕೊನೆಯ ಓವರ್‌ ಉಮ್ರಾನ್‌ ಮಲಿಕ್‌ಗೆ ನೀಡಲು ಕಾರಣವೇನು? ಅದರ ಹಿಂದಿನ ತಂತ್ರಗಾರಿಕೆ ಏನಿತ್ತು ಎನ್ನುವುದನ್ನು ನಾಯಕ ಹಾರ್ದಿಕ್ ಪಾಂಡ್ಯ ಬಹಿರಂಗ ಪಡಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೇ, ಕೊನೆಯ ಓವರ್‌ ಬಗ್ಗೆ ನಾನಂತೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ(ಆತಂಕಕ್ಕೊಳಗಾಗಿರಲಿಲ್ಲ). ನಾನು ಯಾವಾಗಲೂ ಒತ್ತಡದಿಂದ ಹೊರಗೆನಿಂತು ಲೆಕ್ಕಾಚಾರ ಹಾಕಲು ಬಯಸುತ್ತೇನೆ. ಆ ಕ್ಷಣದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇನೆ. ಉಮ್ರಾನ್ ಮಲಿಕ್ ವೇಗದ ಬೌಲಿಂಗ್‌ ಮಾಡುವುದರಿಂದಾಗಿ ಆತನಿಗೆ ಕೊನೆಯ ಓವರ್ ನೀಡಲು ತೀರ್ಮಾನಿಸಿದೆ. ಉಮ್ರಾನ್ ಅತಿ ವೇಗದಲ್ಲಿ ಚೆಂಡನ್ನು ಎಸೆಯುವುದರಿಂದ, ಎದುರಾಳಿ ಬ್ಯಾಟರ್‌ಗಳು ಚೆಂಡನ್ನು ಬಾರಿಸುವುದು ಸುಲಭವಲ್ಲ. ನಾವು ಒಂದು ತಂಡವಾಗಿ ಆಡಿದೆವು. ಇದೇ ವೇಳೆ ಐರ್ಲೆಂಡ್ ಕೂಡಾ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಪಂದ್ಯ ಮುಕ್ತಾಯದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. 

ಅವರಿಗೂ ಪ್ರಶಂಸೆ ಸಲ್ಲಬೇಕು. ಅವರೂ ಅಮೋಘವಾದ ಆಟವನ್ನು ಪ್ರದರ್ಶಿಸಿದರು. ಇದೇ ವೇಳೆ ನಮ್ಮ ಬೌಲರ್‌ಗಳು ಕೂಡಾ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

Ind vs Ire: ರನ್ ಮಳೆಯಲ್ಲಿ ಗೆದ್ದ ಭಾರತ, ಟಿ20 ಸರಣಿ ಟೀಂ ಇಂಡಿಯಾ ಪಾಲು..!

ಇನ್ನು ಐರ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ದೀಪಕ್ ಹೂಡಾ (Deepak Hooda) ಹಾಗೂ ಸಮಯೋಚಿತ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್ (Sanju Samson) ಬ್ಯಾಟಿಂಗ್ ಪ್ರದರ್ಶನದ ಬಗ್ಗೆಯೂ ಹಾರ್ದಿಕ್ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಕ್ ಹೂಡಾ ಕೇವಲ 55 ಎಸೆತಗಳಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ನಾಲ್ಕನೇ ಬ್ಯಾಟರ್ ಎನ್ನುವ ಹಿರಿಮೆಗೆ ಹೂಡಾ ಪಾತ್ರರಾದರು. ಇದಷ್ಟೇ ಅಲ್ಲದೇ ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಜತೆಗೂಡಿ ದೀಪಕ್ ಹೂಡಾ 176 ರನ್‌ಗಳ ಜತೆಯಾಟವಾಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳ ಜತೆಯಾಟವಾಡಿದ ಭಾರತದ ಜೋಡಿ ಎನ್ನುವ ಕೀರ್ತಿಗೂ ಪಾತ್ರರಾದರು. ಈ ಮೊದಲು ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ 2017ರಲ್ಲಿ ಶ್ರೀಲಂಕಾ ವಿರುದ್ದ 165 ರನ್‌ಗಳ ಜತೆಯಾಟ ನಿಭಾಯಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌