Eoin Morgan Retires ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್‌ ಗುಡ್‌ಬೈ

By Naveen KodaseFirst Published Jun 29, 2022, 9:15 AM IST
Highlights

* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್
* ವರ್ಷಗಳ ಕಾಲ ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರ
* 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ವಿಶ್ವಕಪ್ ಗೆದ್ದ ನಾಯಕ ಮಾರ್ಗನ್

ಲಂಡನ್‌(ಜೂ.29): ಇಂಗ್ಲೆಂಡ್‌ ಟಿ20, ಏಕದಿನ ತಂಡವನ್ನು 7 ವರ್ಷಗಳ ಕಾಲ ಮುನ್ನಡೆಸಿದ್ದ ಇಯಾನ್‌ ಮಾರ್ಗನ್‌ ಮಂಗಳವಾರ ನಿರೀಕ್ಷೆಯಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2019ರಲ್ಲಿ ಇಂಗ್ಲೆಂಡ್‌ನ ಚೊಚ್ಚಲ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಮೊರ್ಗನ್‌, ‘ನಿವೃತ್ತಿ ನಿರ್ಧಾರ ಅತ್ಯಂತ ಕಠಿಣ ಹಾಗೂ ಸವಾಲಿನಿಂದ ಕೂಡಿದೆ. ಆದರೆ ಸರಿಯಾದ ಸಮಯಕ್ಕೇ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದಿದ್ದಾರೆ.

2019ರ ಏಕದಿನ ವಿಶ್ವಕಪ್ (2019 World Cup) ಗೆಲುವಿನ ಬಳಿಕ ಇಯಾನ್ ಮಾರ್ಗನ್‌, ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಾ ಬಂದಿದ್ದರು. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಕ್ರಿಕೆಟ್ ಶಿಶು ಎನಿಸಿಕೊಂಡಿರುವ ನೆದರ್ಲೆಂಡ್ಸ್‌ ಎದುರಿನ ಮೊದಲೆರಡು ಪಂದ್ಯದಲ್ಲಿ ಇಯಾನ್ ಮಾರ್ಗನ್ (Eoin Morgan) ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಮೂರನೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಮಾರ್ಗನ್ ಕಣಕ್ಕಿಳಿದಿರಲಿಲ್ಲ. ಇಯಾನ್ ಮಾರ್ಗನ್, ಪದೇ ಪದೇ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆ ಎದುರಿಸುತ್ತಲೇ ಬಂದಿದ್ದರು. ಹೀಗಾಗಿ ಮಾರ್ಗನ್ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎಂದು ಈ ಮೊದಲೇ ದ ಗಾರ್ಡಿಯನ್ ಪತ್ರಿಕೆಯು ವರದಿ ಮಾಡಿತ್ತು.

2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು 2009ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಮುನ್ನ ಇಯಾನ್ ಮಾರ್ಗನ್ ಇದಕ್ಕೂ ಮೊದಲು ಐರ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಮಾರ್ಗನ್ ಈವರೆಗೆ 16 ಟೆಸ್ಟ್‌, 248 ಏಕದಿನ, 115 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡನ್ನು ಪ್ರತಿನಿಧಿಸಿದ್ದಾರೆ. ಅವರು ಟಿ20 ಹಾಗೂ ಏಕದಿನದ ಕ್ರಿಕೆಟ್ ಸೇರಿದಂತೆ 10 ಸಾವಿರಕ್ಕೂ ಅಧಿಕ ರನ್‌ ಕಲೆ ಹಾಕಿದ್ದು, ಇಂಗ್ಲೆಂಡ್‌ನ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿದ್ದಾರೆ. 2015ರಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಅವರು ಈವರೆಗೆ 125 ಏಕದಿನ, 72 ಟಿ20 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ. 2016ರಲ್ಲಿ ಇಂಗ್ಲೆಂಡನ್ನು ಟಿ20 ವಿಶ್ವಕಪ್‌ ಫೈನಲ್‌ಗೇರಿಸಿದ್ದರು. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಆಟಗಾರ ಎನ್ನುವ ಹಿರಿಮೆಗ ಮಾರ್ಗನ್ ಪಾತ್ರರಾಗಿದ್ದಾರೆ.

You’ve changed English cricket forever.

An innovator 🏏 A motivator 💪 A champion 🏆

Your legacy will live on... ❤️ pic.twitter.com/a32SSvCDXI

— England Cricket (@englandcricket)

ಎಡಗೈ ಸ್ಪೋಟಕ ಬ್ಯಾಟರ್ ಎನಿಸಿಕೊಂಡಿದ್ದ ಇಯಾನ್ ಮಾರ್ಗನ್‌ ಒಟ್ಟು 14 ಟೆಸ್ಟ್ ಪಂದ್ಯಗಳಿಂದ 700, 248 ಟೆಸ್ಟ್ ಪಂದ್ಯಗಳಿಂದ 7701 ಹಾಗೂ 115 ಟಿ20 ಪಂದ್ಯಗಳಿಂದ 2458 ರನ್ ಬಾರಿಸಿದ್ದಾರೆ. ಇಯಾನ್ ಮಾರ್ಗನ್‌ ಅವರ 7 ವರ್ಷಗಳ ನಾಯಕತ್ವದ ಅವಧಿಯಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ ತಂಡವು ನಂ.1 ಸ್ಥಾನ ಅಲಂಕರಿಸಿತ್ತು ಹಾಗೂ ಬಹುತೇಕ ಎಲ್ಲಾ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಜಯಿಸಿತ್ತು ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವಕಪ್ ಗೆದ್ದ ನಾಯಕ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ..?

2015ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆಯೇ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಆಲಿಸ್ಟರ್ ಕುಕ್ ಅವರಿಂದ ಇಯಾನ್ ಮಾರ್ಗನ್ ಇಂಗ್ಲೆಂಡ್ ಸೀಮಿತ ಓವರ್‌ಗಳ ನಾಯಕತ್ವವನ್ನು ಸ್ವೀಕರಿಸಿದ್ದರು. ಮರುವರ್ಷ ಅಂದರೆ 2016ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದರು. ಇದಾದ ಬಳಿಕ 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನು 2019ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಇಂಗ್ಲೆಂಡ್ ತಂಡವು, 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೆಮೀಸ್‌ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದರು.
 

click me!