'ಶಾಶ್ವತವಾಗಿ ಆಡಳಿತಾಧಿಕಾರಿಯಾಗಿರಲು ಸಾಧ್ಯವಿಲ್ಲ': ಸೌರವ್ ಗಂಗೂಲಿ ಹೀಗಂದಿದ್ದೇಕೆ..?

By Naveen KodaseFirst Published Oct 13, 2022, 5:09 PM IST
Highlights

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರವಧಿ ಅಂತ್ಯ
ಶಾಶ್ವತವಾಗಿ ಆಡಳಿತಾಧಿಕಾರಿಯಾಗಿರಲು ಸಾಧ್ಯವಿ ಎಂದ ದಾದಾ
ರೋಜರ್ ಬಿನ್ನಿ ನೂತನ ಬಿಸಿಸಿಐ ಅಧ್ಯಕ್ಷರಾಗುವುದು ಬಹುತೇಕ ಖಚಿತ

ನವದೆಹಲಿ(ಅ.13): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರವಧಿ ಮುಗಿಯುತ್ತಾ ಬಂದಿದೆ. ಇದರ ಬೆನ್ನಲ್ಲೇ ದಾದಾ, ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸದಿರಲು ತೀರ್ಮಾನಿಸಿದ್ದು, ಕರ್ನಾಟಕ ಮೂಲದ ರೋಜರ್ ಬಿನ್ನಿ, ಬಿಸಿಸಿಐ ಅಧ್ಯಕ್ಷರಾಗಿ ನೇಮಕವಾಗುವುದು ಬಹುತೇಕ ಖಚಿತ ಎನಿಸಿದೆ.

ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಲು ಇಷ್ಟವಿತ್ತು, ಆದರೆ ಬಿಸಿಸಿಐನ ಇತರೆ ಸದಸ್ಯರಿಂದ ಅವರಿಗೆ ಸೂಕ್ತ ಬೆಂಬಲ ದೊರೆಯಲಿಲ್ಲ ಎನ್ನುವ ಬಗ್ಗೆಯೂ ವರದಿಗಳಾಗಿವೆ. ಇದೀಗ ಈ ವಿಚಾರದ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊದಲ ಬಾರಿಗೆ ತುಟಿಬಿಚ್ಚಿದ್ದು, ತಾವು ಬೇರೆಯ ವಿಚಾರಗಳತ್ತ ಗಮನಹರಿಸುವುದಾಗಿ ತಿಳಿಸಿದ್ದಾರೆ.  

ಬಂಧನ್ ಬ್ಯಾಂಕ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೌರವ್ ಗಂಗೂಲಿ, ಮಾಧ್ಯಮದವರ ಪ್ರಶ್ನೆಗೆ, ತಾವು ಸಾಕಷ್ಟು ವರ್ಷಗಳಿಂದ ಕ್ರಿಕೆಟ್‌ ಆಡಳಿತದಲ್ಲಿ ಭಾಗಿಯಾಗಿದ್ದು, ಈಗ ಬೇರೆ ವಿಚಾರಗಳ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಭಾರತ ಪರ ಆಡಿದ್ದು ನನ್ನ ಪಾಲಿನ ಅತ್ಯುತ್ತಮ ದಿನಗಳು. ನಾನು ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ನಾನು ಅದಕ್ಕಿಂತ ದೊಡ್ಡ ಕೆಲಸ ಮಾಡಬೇಕೆಂದಿದ್ದೇನೆ. ನೀವು ಎಂದೆಂದಿಗೂ ಆಟಗಾರನಾಗಿರಲು ಸಾಧ್ಯವಿಲ್ಲ, ಅದೇ ರೀತಿ ಶಾಶ್ವತವಾಗಿ ಆಡಳಿತಾಧಿಕಾರಿಯಾಗಿರಲು ಸಾಧ್ಯವಿಲ್ಲ. ಈ ಎರಡು ಕಾರ್ಯ ನಿರ್ವಹಿಸಿದ್ದು ಒಳ್ಳೆಯ ಅನುಭವ ಎಂದು ದಾದಾ ಹೇಳಿದ್ದಾರೆ.

ಇನ್ನು ಇದೇ ವೇಳೆ ಟೀಂ ಇಂಡಿಯಾ ನಾಯಕರಾಗಿದ್ದಾಗಿನ ತಮ್ಮ ಅನುಭವದ ಬಗ್ಗೆಯೂ ಸೌರವ್ ಗಂಗೂಲಿ ಮುಕ್ತವಾಗಿ ಮಾತನಾಡಿದ್ದಾರೆ. ಆರು ನಾಯಕರು ತಂಡವನ್ನು ಮುನ್ನಡೆಸಿದ್ದರು. ಏಕದಿನ ತಂಡದಿಂದ ರಾಹುಲ್ ದ್ರಾವಿಡ್ ಬಹುತೇಕ ಹೊರಬಿದ್ದರು ಎನ್ನುವ ಸಂದರ್ಭದಲ್ಲಿ ನಾನು ದ್ರಾವಿಡ್ ಬೆನ್ನಿಗೆ ನಿಂತಿದ್ದೆ. ನಾನು ಅವರ ಸಲಹೆಯನ್ನು ತೆಗೆದುಕೊಂಡು ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆದರೆ ತಂಡದ ವಾತಾವರಣದಲ್ಲಿ ಇದೆಲ್ಲ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸೌರವ್ ಗಂಗೂಲಿ ಬಿಸಿಸಿಐನಿಂದ ಕಡೆಗಣನೆಗೆ ಕಾರಣವೇನು..?

ನಾನು ರನ್‌ ಬಾರಿಸಿದ್ದನ್ನಷ್ಟೇ ಮುಖ್ಯವಲ್ಲ, ಜನರು ಅದಕ್ಕಿಂತ ಬೇರೆಯಾದುದ್ದನ್ನು ಜನರು ಗಮನಿಸಿದ್ದಾರೆ. ನಾಯಕನಾದವರು ಈ ರೀತಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ, ಮಂಗಳವಾರವಷ್ಟೇ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಬಹುತೇಕ ರೋಜರ್ ಬಿನ್ನಿ ಅವಿರೋಧವಾಗಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿವೆ.  ಇನ್ನು ಜಯ್ ಶಾ ಕೂಡಾ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ನಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ನೇಮಕವಾಗುವುದು ಬಹುತೇಕ ಖಚಿತ ಎನಿಸಿದೆ. ಒಂದು ವೇಳೆ ಬೇರೆ ಯಾವ ಅಭ್ಯರ್ಥಿಯು ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸದೇ ಹೋದರೆ, ಜಯ್ ಶಾ ಕೂಡಾ ಅವಿರೋಧವಾಗಿ ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. 

click me!