ಇಂದು ಆಸೀಸ್ ಎದುರು ಗೆದ್ದರೂ, ಸೋತರೂ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕಿದೆ ಸೆಮೀಸ್‌ಗೇರಲು ಒಳ್ಳೆ ಚಾನ್ಸ್!

By Naveen KodaseFirst Published Oct 13, 2024, 4:05 PM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಫಲಿತಾಂಶ ಹರ್ಮನ್‌ಪ್ರೀತ್ ಕೌರ್ ಪಡೆಯ ಸೆಮೀಸ್ ಲೆಕ್ಕಾಚಾರ ನಿರ್ಧರಿಸಲಿದೆ

ಶಾರ್ಜಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್ ಹಂತದಲ್ಲಿ ಉಭಯ ತಂಡಗಳ ಪಾಲಿಗೆ ಇದು ಕೊನೆಯ ಪಂದ್ಯ ಎನಿಸಿಕೊಂಡಿದೆ.

ಈಗಾಗಲೇ ಮೊದಲ ಪಂದ್ಯ ಸೋತು ಆ ಬಳಿಕ ಸತತ ಎರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಇದೀಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ, ಸೆಮೀಸ್ ಹಾದಿಯನ್ನು ಮತ್ತಷ್ಟು ಸುಗಮವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿ ಮುನ್ನುಗ್ಗುತ್ತಿರುವ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಅಜೇಯವಾಗಿಯೇ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಇನ್ನು ಇದೆಲ್ಲದರ ನಡುವೆ ಭಾರತ ತಂಡವು ಸೆಮೀಸ್ ಪ್ರವೇಶಿಸಬೇಕಿದ್ದರೇ ಆಸ್ಟ್ರೇಲಿಯಾ ಎದುರು ಎಷ್ಟು ರನ್ ಅಂತರದಲ್ಲಿ ಜಯ ಗಳಿಸಬೇಕು. ಒಂದು ವೇಳೆ ಟೀಂ ಇಂಡಿಯಾ, ಆಸೀಸ್ ಎದುರು ಸೋಲು ಕಂಡರೂ ಸೆಮೀಸ್‌ಗೇರಲು ಅವಕಾಶ ಇದೆಯೇ ಎನ್ನುವ ನಿಮ್ಮ ಎಲ್ಲಾ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Latest Videos

ಇಂದು ಭಾರತ vs ಆಸೀಸ್ ಹೈವೋಲ್ಟೇಜ್ ಕದನ; ಹರ್ಮನ್‌ಪ್ರೀತ್ ಕೌರ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ!

ಹೌದು, 'ಎ' ಗುಂಪಿನಲ್ಲಿ ಸದ್ಯ ಆಸ್ಟ್ರೇಲಿಯಾ ತಂಡವು ಮೊದಲ 3 ಪಂದ್ಯ ಗೆದ್ದು 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಇನ್ನೊಂದೆಡೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು 3 ಪಂದ್ಯಗಳ ಪೈಕಿ ಎರಡು ಗೆಲುವು ಹಾಗೂ 1 ಸೋಲಿನಿಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್ ತಂಡ ಕೂಡಾ ಆಡಿದ 3 ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳನ್ನು ಗಳಿಸಿದೆಯಾದರೂ, ಟೀಂ ಇಂಡಿಯಾಗಿಂತ ನೆಟ್‌ ರನ್‌ರೇಟ್ ವಿಚಾರದಲ್ಲಿ ಕೊಂಚ ಹಿನ್ನಡೆ ಸಾಧಿಸಿರುವುದರಿಂದ ಮೂರನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ 3 ಪಂದ್ಯಗಳಲ್ಲಿ ಎರಡು ಸೋಲು ಹಾಗೂ 1 ಗೆಲುವಿನೊಂದಿಗೆ 2 ಅಂಕ ಗಳಿಸಿದೆಯಾದರೂ, ಇನ್ನೂ ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ.

ಸೆಮೀಸ್ ಲೆಕ್ಕಾಚಾರ ಹೇಗಿದೆ?

ಒಂದು ವೇಳೆ ಇಂದು ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಕೇವಲ ಒಂದು ರನ್ ಅಂತರದಲ್ಲಿ ಜಯಿಸಿದರೆ, ಸೆಮೀಸ್‌ಗೆ ಮತ್ತಷ್ಟು ಹತ್ತಿರವಾಗಿದೆ. ಅಂದರೆ ಹರ್ಮನ್‌ ಪಡೆ ಒಂದು ಅಂತರದಲ್ಲಿ ಆಸೀಸ್ ಎದುರು ಗೆದ್ದರೇ, ನ್ಯೂಜಿಲೆಂಡ್ ತಂಡವು ಭಾರತದ ನೆಟ್‌ ರನ್‌ರೇಟ್ ಹಿಂದಿಕ್ಕಬೇಕಿದ್ದರೇ ಪಾಕ್ ಎದುರು ಕನಿಷ್ಠ 18 ರನ್ ಅಂತರದಲ್ಲಿ ಜಯಿಸಬೇಕು. ಇಲ್ಲವೇ ರನ್ ಚೇಸ್ ಮಾಡಿದರೆ, ಪಾಕ್ ಎದುರು ಕಿವೀಸ್ ಕನಿಷ್ಠ 16 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಬೇಕಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌: ಟೀಂ ಇಂಡಿಯಾ ಪರ ಎರಡನೇ ಅತಿವೇಗದ ಶತಕ ಸಿಡಿಸಿದ ಸಂಜು ಸ್ಯಾಮ್ಸನ್!

ಇನ್ನು ಒಂದು ವೇಳೆ ಭಾರತ ತಂಡವು ಇಂದು ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿದರೂ ಸೆಮೀಸ್‌ ರೇಸ್‌ನಿಂದ ಹೊರಬೀಳುವುದಿಲ್ಲ. ಅದೃಷ್ಟ ಕೈ ಹಿಡಿದರೆ, ಭಾರತ ಸೋತರೂ ಸೆಮೀಸ್‌ಗೇರಬಹುದಾಗಿದೆ. ಹೀಗಾಗಬೇಕು ಅಂದರೆ ಭಾರತ ತಂಡವು ಆಸೀಸ್ ಎದುರು ಕನಿಷ್ಠ 18 ರನ್ ಅಂತರದೊಳಗಿನ ಸೋಲು ಕಾಣಬೇಕು. ಇದೇ ವೇಳೆ ಪಾಕಿಸ್ತಾನ ತಂಡವು ಕಿವೀಸ್ ಎದುರು ಗೆಲುವು ಸಾಧಿಸಿದರೆ, ಭಾರತ ಸೆಮೀಸ್‌ಗೇರಲಿದೆ. ಇನ್ನು ಭಾರತದ ನೆಟ್‌ ರನ್‌ರೇಟ್ ಹಿಂದಿಕ್ಕಿ ಪಾಕಿಸ್ತಾನ ಸೆಮೀಸ್‌ಗೇರಬೇಕಿದ್ದರೇ, ಕಿವೀಸ್ ಎದುರು ಕನಿಷ್ಠ 58 ರನ್ ಅಂತರದ ಗೆಲುವು ಸಾಧಿಸಬೇಕಾಗುತ್ತದೆ.

click me!