Nagpur Test: ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿದ ಕಾಂಗರೂ ಪಡೆ, ಸಾಧಾರಣ ಮೊತ್ತಕ್ಕೆ ಆಲೌಟ್..!

By Naveen KodaseFirst Published Feb 9, 2023, 3:08 PM IST
Highlights

ನಾಗ್ಪುರ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 177 ರನ್‌ಗಳಿಗೆ ಆಲೌಟ್
ಬೌಲಿಂಗ್‌ನಲ್ಲಿ ಮಿಂಚಿದ ಜಡೇಜಾ-ಅಶ್ವಿನ್ ಜೋಡಿ
ಭರ್ಜರಿಯಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಜಡ್ಡು ಕಮ್‌ಬ್ಯಾಕ್

ನಾಗ್ಪುರ(ಫೆ.09): 5 ತಿಂಗಳ ಬಳಿಕ ಟೀಂ ಇಂಡಿಯಾ ಕೂಡಿಕೊಂಡ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ, ಮೊದಲ ಟೆಸ್ಟ್ ಪಂದ್ಯದಲ್ಲೇ ಮಾರಕ ದಾಳಿ ನಡೆಸುವ ಮೂಲಕ ಭರ್ಜರಿಯಾಗಿಯೇ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಜಡ್ಡುಗೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಉತ್ತಮ ಸಾಥ್ ನೀಡಿದರು. ಪರಿಣಾಮ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 177 ರನ್‌ಗಳಿಗೆ ಸರ್ವಪತನ ಕಂಡಿದೆ. ಜಡೇಜಾ 11ನೇ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದರೆ, ಅಶ್ವಿನ್ ತಮ್ಮ ಖಾತೆಗೆ 3 ವಿಕೆಟ್‌ ಸೇರಿಸಿಕೊಂಡರು.

ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಆರಂಭದಲ್ಲೇ ಶಾಕ್ ನೀಡಿದರು. ತಂಡ 2 ರನ್ ಗಳಿಸುವಷ್ಟರಲ್ಲಿ ಆರಂಬಿಕರಿಬ್ಬರು ತಲಾ ಒಂದೊಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು. ಟೀಂ ಇಂಡಿಯಾ ಆರಂಭದಲ್ಲೇ ಉತ್ತಮ ಯಶಸ್ಸು ಗಳಿಸಿತು.

ಸ್ಮಿತ್-ಲಬುಶೇನ್ ಆಸರೆ: ಇನಿಂಗ್ಸ್‌ ಆರಂಭವಾಗಿ ಕೇವಲ 15 ಮುಗಿಯುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮೂರನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಹಾಗೂ ಸ್ಟೀವ್ ಸ್ಮಿತ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಪರಿಣಾಮ ಲಂಚ್ ಬ್ರೇಕ್ ವೇಳೆಗೆ ಈ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ, ಭಾರತೀಯ ಬೌಲರ್‌ಗಳ ಸವಾಲನ್ನು ದಿಟ್ಟವಾಗಿಯೇ ಎದುರಿಸಿತು. ಆದರೆ ಲಂಚ್‌ ಬ್ರೇಕ್‌ ಬಳಿಕ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಟೀಂ ಇಂಡಿಯಾ ಸ್ಪಿನ್‌ದ್ವಯರು ಯಶಸ್ವಿಯಾದರು.

All out ☝️ | | 📝 https://t.co/rzMJy0hmPO pic.twitter.com/PZXiNzFgvL

— ICC (@ICC)

ಜಡ್ಡು-ಅಶ್ವಿನ್ ಸ್ಪಿನ್‌ ಸುಳಿಗೆ ಸಿಲುಕಿದ ಆಸೀಸ್: ಮೂರನೇ ವಿಕೆಟ್‌ಗೆ ಸ್ಮಿತ್ ಹಾಗೂ ಲಬುಶೇನ್ ಜೋಡಿ 82 ರನ್‌ಗಳ ಜತೆಯಾಟವಾಡುವ ಮೂಲಕ ಕೊಂಚ ಆಸರೆಯಾದರು. ಈ ವೇಳೆ 123 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 49 ರನ್ ಬಾರಿಸಿದ್ದ ಮಾರ್ನಸ್ ಲಬುಶೇನ್ ಅವರನ್ನು ಬಲಿ ಪಡೆಯುವ ಮೂಲಕ ರವೀಂದ್ರ ಜಡೇಜಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಮ್ಯಾಟ್ ರೆನ್‌ಶೋ, ಶೂನ್ಯ ಸುತ್ತಿ ಪೆವಿಲಿಯನ್‌ ಪೆರೇಡ್ ನಡೆಸಿದರು. ಇದರ ಬೆನ್ನಲ್ಲೇ ಸ್ಮಿತ್‌ ಕೂಡಾ ಜಡೇಜಾಗೆ ಮೂರನೇ ಬಲಿಯಾದರು.

ಬಾರ್ಡರ್-ಗವಾಸ್ಕರ್ ಟ್ರೋಫಿ: ಇಂಡೋ-ಆಸೀಸ್ ಟೆಸ್ಟ್‌ ಸರಣಿಗೆ ಯಾಕಿಷ್ಟು ಮಹತ್ವ ಗೊತ್ತಾ..? ಇಲ್ಲಿವೆ 6 ಕಾರಣ

ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು 109 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಈ ವೇಳೆ 6ನೇ ವಿಕೆಟ್‌ಗೆ ಪೀಟರ್ ಹ್ಯಾಂಡ್ಸ್‌ಕಂಬ್‌ (31) ಹಾಗೂ ಅಲೆಕ್ಸ್‌ ಕ್ಯಾರಿ(36) ಜೋಡಿ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಅಶ್ವಿನ್‌ ಬೇರ್ಪಡಿಸಿದರು. ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಆಸೀಸ್ ತಂಡವು ನಾಟಕೀಯ ಕುಸಿತ ಕಂಡಿತು. ಕೇವಲ 15 ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ತಂಡವು ಕೊನೆಯ 5 ವಿಕೆಟ್ ಕಳೆದುಕೊಂಡಿತು.

ಇನ್ನು ಟೀಂ ಇಂಡಿಯಾ ಪರ ಶಿಸ್ತಿನ ದಾಳಿ ನಡೆಸಿದ ರವೀಂದ್ರ ಜಡೇಜಾ ಕೇವಲ 47 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 42 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇನ್ನು ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

click me!