
ನಾಗ್ಪುರ(ಫೆ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿದೆ. ಮೊದಲು ಬ್ಯಾಟಿಂಗ್ ಮಾಡಲಿಳಿದ ಪ್ರವಾಸಿ ಆಸೀಸ್ ತಂಡಕ್ಕೆ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. 2 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮೂರನೇ ವಿಕೆಟ್‌ಗೆ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ ಆಸರೆಯಾಗಿದ್ದಾರೆ. ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ತಂಡವು 2 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ.
ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಮರು ಯೋಚನೆ ಮಾಡದೇ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆಸೀಸ್‌ಗೆ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾದರು. ಇನಿಂಗ್ಸ್ ಆರಂಭವಾಗಿ 15 ನಿಮಿಷಗಳೊಳಗಾಗಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ವೇಗಿ ಮೊಹಮ್ಮದ್ ಸಿರಾಜ್, ತಾವೆಸೆದ ಮೊದಲ ಚೆಂಡಿನಲ್ಲೇ ಉಸ್ಮಾನ್ ಖವಾಜ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇದಾದ ಮರು ಓವರ್‌ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ, ಎಡಗೈ ದಾಂಡಿಗ ಡೇವಿಡ್ ವಾರ್ನರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆಸೀಸ್‌ಗೆ ಡಬಲ್ ಶಾಕ್ ನೀಡಿದರು. ಆಸೀಸ್ ಆರಂಭಿಕರಿಬ್ಬರು ತಲಾ ಒಂದೊಂದು ಬಾರಿಸಿ ಪೆವಿಲಿಯನ್ ಸೇರಿದರು.
Border Gavaskar Trophy: ಭಾರತ ಎದುರು ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ; ಭಾರತದ ಪರ ಇಬ್ಬರು ಪಾದಾರ್ಪಣೆ..!
ಕುಸಿದ ಆಸೀಸ್‌ಗೆ ಸ್ಮಿತ್-ಲಬುಶೇನ್ ಆಸರೆ: ಕೇವಲ 2 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮೂರನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಹಾಗೂ ಸ್ಟೀವ್ ಸ್ಮಿತ್ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಆ ಬಳಿಕ ಅನಾಯಾಸವಾಗಿ ರನ್ ಗಳಿಸಲಾರಂಭಿಸಿರು. ಟೀಂ ಇಂಡಿಯಾದ ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸುವಲ್ಲಿ ಈ ಜೋಡಿ ಯಶಸ್ವಿಯಾಗಿದೆ. ಒಟ್ಟು 179 ಎಸೆತಗಳನ್ನು ಎದುರಿಸಿದ ಈ ಜೋಡಿ ಮುರಿಯದ 74 ರನ್‌ಗಳ ಜತೆಯಾಟವಾಡುವ ಮೂಲಕ ಪ್ರತಿಹೋರಾಟ ಆರಂಭಿಸಿದೆ. ಮಾರ್ನಸ್ ಲಬುಶೇನ್ 110 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 47 ರನ್ ಬಾರಿಸಿದರೆ, ಸ್ಟೀವ್ ಸ್ಮಿತ್ 74 ಎಸೆತಗಳನ್ನು ಎದುರಿಸಿ 19 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.