
ಚೆನ್ನೈ: ಶ್ರೀಲಂಕಾ ಎದುರಿನ ಸರಣಿಯ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರರು ಸದ್ಯ ಸದ್ಯ ಯಾವುದೇ ಅಂತರಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿಲ್ಲ. ಕೆಲವು ಸ್ಟಾರ್ ಆಟಗಾರರು ವಿಶ್ರಾಂತಿಗೆ ಜಾರಿದ್ದರೆ, ಇನ್ನೂ ಕೆಲವು ಆಟಗಾರರು ಬಿಡುವಿನ ಸಮಯವನ್ನು ಕುಟುಂಬದೊಟ್ಟಿಗೆ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಇದೆಲ್ಲದರ ನಡುವೆ ಕೆಲವು ಕ್ರಿಕೆಟಿಗರು ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಸದ್ಯ ಭಾರತ ಕ್ರಿಕೆಟ್ ತಂಡವು ಮುಂಬರುವ ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ಎದುರು ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ಮೊದಲ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಆತಿಥ್ಯ ವಹಿಸಲಿದೆ. ಟಿ20 ವಿಶ್ವಕಪ್ ಗೆದ್ದು ಸಂಭ್ರಮಾಚರಣೆಯಲ್ಲಿರುವ ಕೆಲವು ಕ್ರಿಕೆಟಿಗರು ತಿಂಗಳುಗಳ ಬಿಡುವಿನ ಬಳಿಕ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಟೀಂ ಇಂಡಿಯಾ ಆಟಗಾರರು, ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದರು. ಇದಾಗಿ ಬರೋಬ್ಬರಿ 6 ತಿಂಗಳುಗಳ ಬಳಿಕ ಭಾರತ ಮತ್ತೊಮ್ಮೆ ರೆಡ್ ಬಾಲ್ ಪಂದ್ಯವನ್ನಾಡಲು ರೆಡಿಯಾಗುತ್ತಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಅವರ ಕೈಗೆ ಗಾಯವಾಗಿದೆ.
ಮಹಾರಾಜ ಟ್ರೋಫಿ ಟಿ20: ಮೈಸೂರು ವಾರಿಯರ್ಸ್ ಫೈನಲ್‌ಗೆ ಲಗ್ಗೆ
ಭಾರತದ ಟಿ20 ಕ್ರಿಕೆಟ್‌ನ ನಂ.1 ಬ್ಯಾಟರ್ ಆಗಿರುವ ಸೂರ್ಯ, ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಸದ್ಯ ಮುಂಬೈ ತಂಡದ ಪರ ಬುಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಭಾರತ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದಷ್ಟೇ ಅಲ್ಲದೇ ಸೂರ್ಯಕುಮಾರ್ ಯಾದವ್, ದುಲೀಪ್ ಟ್ರೋಫಿಗೂ ಆಯ್ಕೆಯಾಗಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯು ಸೆಪ್ಟೆಂಬರ್ 05ರಿಂದ ಆರಂಭವಾಗಲಿದೆ.
ಆದರೆ ದುರಾದೃಷ್ಟವಶಾತ್ ಬುಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ಎದುರಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಅವರ ಕೈಗೆ ಗಾಯವಾಗಿದೆ ಎಂದು ಕ್ರಿಕೆಟ್ ವೆಬ್‌ಸೈಟ್ ESPN Cricinfo ವರದಿ ಮಾಡಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್, ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದರ ಕುರಿತಂತೆ ಅನುಮಾನ ಮನೆ ಮಾಡಿದೆ. ಇದಷ್ಟೇ ಅಲ್ಲದೇ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೆ ಸೂರ್ಯ ಆಯ್ಕೆಗೆ ಲಭ್ಯವಿರುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಕುರಿತಂತೆಯೂ ಸ್ಪಷ್ಟ ಚಿತ್ರಣ ಹೊರಬಿದ್ದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.