
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಮತ್ತೊಮ್ಮೆ ಬೌಲಿಂಗ್‌ನಲ್ಲಿ ತಮ್ಮ ಖದರ್ ತೋರಿಸಿದ್ದಾರೆ. ಆರ್‌ಸಿಬಿ ತಂಡವು ಸತತ ಎರಡು ಬಾರಿ ಐಪಿಎಲ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭುವಿ, ಇದೀಗ 2026ರ ಯುಪಿ ಟಿ20 ಲೀಗ್ ಟೂರ್ನಿಯಲ್ಲಿ ಲಖನೌ ಫಾಲ್ಕನ್ಸ್ ತಂಡವು ಫೈನಲ್‌ಗೇರುವಲ್ಲಿ ಪ್ರಮುಖ ರೂವಾರಿ ಎನಿಸಿದ್ದಾರೆ. ಸ್ವಿಂಗ್ ಕಿಂಗ್ ಭುವಿ, ಕ್ವಾಲಿಫೈಯರ್-1 ಪಂದ್ಯದಲ್ಲಿ ರಿಂಕು ಸಿಂಗ್ ನೇತೃತ್ವದ ಮೀರತ್ ಮೆವರಿಕ್ಸ್ ಎದುರು ಕೇವಲ 145 ರನ್‌ಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಲಖನೌ ಫಾಲ್ಕನ್ಸ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.
ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಲಖನೌ ಫಾಲ್ಕನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 145 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಸಾಧಾರಣ ಗುರಿ ಬೆನ್ನತ್ತಿದ ಟೇಬಲ್ ಟಾಪರ್ ಮೀರತ್ ಮೆವರಿಕ್ಸ್ ತಂಡವು ತಂಡವು ಬರೋಬ್ಬರಿ 47 ರನ್‌ಗಳ ಹೀನಾಯ ಸೋಲು ಅನುಭವಿಸಿತು. ನಾಲ್ಕು ಸೀಸನ್‌ನಲ್ಲಿ ಇದೇ ಮೊದಲ ಬಾರಿಗೆ ಲಖನೌ ಫಾಲ್ಕನ್ಸ್ ತಂಡವು ಫೈನಲ್‌ಗೇರಿದ್ದು, ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಮಳೆಯ ಕಾರಣದಿಂದ ಕೊಂಚ ತಡವಾಗಿ ಆರಂಭವಾದ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಗೆದ್ದ ರಿಂಕು ಸಿಂಗ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಲಖನೌ ಫಾಲ್ಕನ್ಸ್ ಪರ ಹಿಮಾಂಶು ಸಿಂಗ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 61 ರನ್ ಸಿಡಿಸಿದರು. ಇನ್ನು ಮೀರತ್ ಸ್ಪಿನ್ನರ್ ಜೀಶನ್ ಅನ್ಸಾರಿ 4 ಓವರ್‌ನಲ್ಲಿ 14 ರನ್ ನೀಡಿ 3 ವಿಕೆಟ್ ಕಬಳಿಸಿದರು. ಅಂತಿಮವಾಗಿ ಲಖನೌ ಫಾಲ್ಕನ್ಸ್ ತಂಡವು 19.4 ಓವರ್‌ಗಳಲ್ಲಿ 145 ರನ್‌ಗಳಿಗೆ ಸರ್ವಪತನ ಕಂಡಿತು.
ಸಾಧಾರಣ ಮೊತ್ತ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೈದಾನಕ್ಕಿಳಿದ ಲಖನೌ ಫಾಲ್ಕನ್ ತಂಡಕ್ಕೆ ನಾಯಕ ಭುವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್ ಆರಂಭ ಒದಗಿಸಿಕೊಟ್ಟರು. ನಾಲ್ಕು ಓವರ್ ಬೌಲಿಂಗ್ ಮಾಡಿದ ಭುವಿ 18 ಚುಕ್ಕೆ ಎಸೆತ ಸೇರಿದಂತೆ ಕೇವಲ 10 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಲಖನೌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
BHUVNESHWAR KUMAR’S ICONIC SPELL OF 4-0-10-4. pic.twitter.com/3rEJts0bqR
— Mufaddal Vohra (@mufaddal_vohra) September 3, 2026
ಭುವಿಯ ಮಾರಕ ಸ್ಪೆಲ್‌ನಿಂದಾಗಿ ಮೀರತ್ ತಂಡವು 10.3 ಓವರ್‌ಗಳಲ್ಲಿ ಕೇವಲ 36 ರನ್‌ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನ ಹಾದಿ ಹಿಡಿಯಿತು. ಅಂತಿಮವಾಗಿ ಮೀರತ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 98 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನು ಭುವನೇಶ್ವರ್ ಕುಮಾರ್ ಸದ್ಯ ಐಪಿಎಲ್ ಹಾಗೂ ಯುಪಿ ಟಿ20 ಲೀಗ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ಬಾಗಿಲು ಬಡಿಯಲಾರಂಭಿಸಿದ್ದಾರೆ. ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಭುವಿಗೆ ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಭುವಿ ಇದೀಗ ಮಾರಕ ದಾಳಿ ನಡೆಸಿ ಗಮನ ಸೆಳೆದಿರುವುದು, ಮುಂಬರುವ ದಿನಗಳಿಗೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಸಿಗುವ ಆಸೆ ಬಲ ಬಂದಂತೆ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.