
ಮುಂಬೈ: ರೋಹಿತ್ ಶರ್ಮಾ ನಿವೃತ್ತಿ ಹಾಗೂ ವಿವಿಎಸ್ ಲಕ್ಷ್ಮಣ್‌ಗೆ ಬಿಸಿಸಿಐ ಡೈರೆಕ್ಟರ್ ಹುದ್ದೆ ಸೃಷ್ಟಿ ವದಂತಿಯನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಳ್ಳಿ ಹಾಕಿದ್ದಾರೆ.
ಗುರುವಾರ ಬಿಸಿಸಿಐ ಮಹತ್ವದ ಪರಾಮರ್ಶೆ ಸಭೆ ನಡೆಯಿತು. ಸೈಕಿಯಾ, ಕೋಚ್ ಗೌತಮ್ ಗಂಭೀರ್, ಭಾರತದ ನಾಯಕರಾದ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಜರಾದರು. ಸಭೆ ಬಳಿಕ ರೋಹಿತ್ ಏಕದಿನ ಕ್ರಿಕೆಟ್ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸೈಕಿಯಾ, ‘ರೋಹಿತ್ ಈಗ ಚೆನ್ನಾಗಿ ಆಡುತ್ತಿದ್ದಾರೆ. ಅದಕ್ಕಿಂತ ಜಾಸ್ತಿ ಇನ್ನೇನು ಬೇಕು. ಅವರು ಕೊನೆ ಪಂದ್ಯದಲ್ಲಿ 138 ರನ್ ಗಳಿಸಿದ್ದಾರೆ. ಹೀಗಾಗಿ ವದಂತಿ ಅನಗತ್ಯ. ಊಹಾಪೋಹಗಳಿಗೆ ನಾವು ಬೆಲೆ ಕೊಡಲ್ಲ’ ಎಂದರು.
ಇನ್ನು, ಬಿಸಿಸಿಐ ಹೊಸದಾಗಿ ಕ್ರಿಕೆಟ್ ಡೈರೆಕ್ಟರ್ ಹುದ್ದೆ ಸೃಷ್ಟಿಸಲಿದೆ ಮತ್ತು ಅದಕ್ಕೆ ಲಕ್ಷ್ಮಣ್‌ರನ್ನು ನೇಮಿಸಲಿದೆ ಎಂದು ವರದಿಯಾಗಿತ್ತು. ಇದನ್ನೂ ಸೈಕಿಯಾ ತಳ್ಳಿಹಾಕಿದ್ದಾರೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅಂತಹ ಉದ್ದೇಶ ಕೂಡಾ ನಮಗೆ ಇಲ್ಲ ಎಂದಿದ್ದಾರೆ.
ಗುರುವಾರದ ಸಭೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಗೈರಾಗಿದ್ದು, ಮಂಡಳಿ ಹಾಗೂ ಆಯ್ಕೆ ಸಮಿತಿ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಸಭೆಗೆ ಅಜಿಗ್ ಗೈರು ಬಗ್ಗೆ ಪ್ರತಿಕ್ರಿಯಿಸಿದ ಸೈಕಿಯಾ, ‘ಅಗರ್ಕರ್ ಬೇರೆಲ್ಲೋ ಇರುವುದರಿಂದಾಗಿ ಇಂದಿನ ಸಭೆಗೆ ಹಾಜರಾಗಿಲ್ಲ. ವರ್ಚುವಲ್ ಆಗಿಯೂ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಅವಧಿ ವಿಸ್ತರಣೆ ಬಗ್ಗೆ ಚರ್ಚೆ ನಡೆದಿಲ್ಲ’ ಎಂದರು. ಇತ್ತೀಚೆಗೆ ರೋಹಿತ್ ಶರ್ಮಾ ಆಯ್ಕೆ ವಿಚಾರದಲ್ಲಿ ಅಗರ್ಕರ್ ಹಾಗೂ ಬಿಸಿಸಿಐ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು ಎಂದು ವರದಿಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.