'ಭಯ್ಯಾ ಅಲ್ಲ, ಬ್ರದರ್'; ರಿಂಕು ಸಿಂಗ್ ತಮ್ಮ ಫ್ಯಾಮಿಲಿಗೆ ಸುನಿಲ್‌ ನರೈನ್ ಪರಿಚಯಿಸಿದ ವಿಡಿಯೋ ವೈರಲ್!

Published : Apr 27, 2026, 03:36 PM IST
Rinku Singh Video Call

ಸಾರಾಂಶ

ಲಖನೌ ವಿರುದ್ಧ ಸೂಪರ್ ಓವರ್‌ನಲ್ಲಿ ಕೆಕೆಆರ್ ರೋಚಕ ಗೆಲುವು ಸಾಧಿಸಿದ್ದು, ಸುನಿಲ್ ನರೈನ್ ಮತ್ತು ರಿಂಕು ಸಿಂಗ್ ಹೀರೋಗಳಾದರು. ಪಂದ್ಯದ ನಂತರ, ರಿಂಕು ಸಿಂಗ್ ತಮ್ಮ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿ ನರೈನ್ ಅವರನ್ನು ಪರಿಚಯಿಸಿದಾಗ ನಡೆದ ತಮಾಷೆಯ ಘಟನೆಯ ವಿಡಿಯೋ ವೈರಲ್ ಆಗಿದೆ.

ಲಖನೌ: ಐಪಿಎಲ್‌ನಲ್ಲಿ ಲಖನೌ ವಿರುದ್ಧ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿದ ನಂತರ, ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಸ್ಟಾರ್ ಆಟಗಾರ ರಿಂಕು ಸಿಂಗ್ ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ ತಂಡದ ಮತ್ತೊಬ್ಬ ಹೀರೋ ಸುನಿಲ್ ನರೈನ್ ಜೊತೆಗೂ ಮಾತನಾಡಿಸಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಕೋಲ್ಕತಾ ಪರ ಸುನಿಲ್ ನರೈನ್ ನಿರ್ಣಾಯಕ ಸೂಪರ್ ಓವರ್ ಬೌಲ್ ಮಾಡಿದ್ದರು. ಮೊದಲ ಎಸೆತದಲ್ಲೇ ನಿಕೋಲಸ್ ಪೂರನ್ ಅವರನ್ನು ಬೌಲ್ಡ್ ಮಾಡಿದ ನರೈನ್, ಮೂರನೇ ಎಸೆತದಲ್ಲಿ ಏಡನ್ ಮಾರ್ಕ್ರಮ್ ವಿಕೆಟ್ ಪಡೆದರು. ಇದರಿಂದ ಲಖನೌ ತಂಡವು ಕೇವಲ ಎರಡು ರನ್‌ಗಳ ಗುರಿ ನೀಡಲು ಸಾಧ್ಯವಾಯಿತು. ನಂತರ ಬ್ಯಾಟಿಂಗ್‌ಗೆ ಇಳಿದ ಕೋಲ್ಕತಾ ಪರ, ಲಖನೌ ತಂಡದ ಪ್ರಿನ್ಸ್ ಯಾದವ್ ಎಸೆದ ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ರಿಂಕು ಸಿಂಗ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ನಂತರ ಡ್ರೆಸ್ಸಿಂಗ್ ರೂಮ್‌ಗೆ ಬಂದ ರಿಂಕು, ತಮ್ಮ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿದರು.

'ಭಯ್ಯಾ ನಹಿ, ಬ್ರದರ್' ಎಂದು ತಿದ್ದಿದ ರಿಂಕು ಸಿಂಗ್

ಟವೆಲ್ ಸುತ್ತಿಕೊಂಡು ಅಮ್ಮ ಮತ್ತು ಸಹೋದರಿ ಜೊತೆ ಮಾತನಾಡುತ್ತಾ ಬಂದ ರಿಂಕು, ಅಲ್ಲೇ ಕುಳಿತಿದ್ದ ಸುನಿಲ್ ನರೈನ್ ಅವರನ್ನು ತಮ್ಮ ಕುಟುಂಬಕ್ಕೆ ಪರಿಚಯಿಸಿದರು. ಈ ಸಮಯದಲ್ಲಿ ಒಂದು ತಮಾಷೆಯ ಘಟನೆ ನಡೆಯಿತು. ರಿಂಕು ಅವರ ಸಹೋದರಿ ನರೈನ್ ಅವರಿಗೆ 'ಹಲೋ ಭಯ್ಯಾ' ಎಂದು ಹೇಳಿದರು. ತಕ್ಷಣವೇ ರಿಂಕು, 'ಭಯ್ಯಾ ನಹಿ, ಬ್ರದರ್' (ಭಯ್ಯಾ ಅಲ್ಲ, ಬ್ರದರ್) ಎಂದು ತಿದ್ದಿದರು. ಈ ವಿಡಿಯೋವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವೇ ತನ್ನ ಅಧಿಕೃತ ಪೇಜ್‌ನಲ್ಲಿ ಹಂಚಿಕೊಂಡಿದೆ.

ವಿಡಿಯೋ ವೈರಲ್
 

 

ಈ ಪಂದ್ಯದಲ್ಲಿ ನರೈನ್ ಮತ್ತು ರಿಂಕು ಇಬ್ಬರೂ ಕೋಲ್ಕತಾ ಗೆಲುವಿನ ಹೀರೋಗಳಾಗಿದ್ದರು. ಮೊದಲು ಬ್ಯಾಟ್ ಮಾಡಿ ಬ್ಯಾಟಿಂಗ್ ಕುಸಿತ ಕಂಡಿದ್ದ ಕೋಲ್ಕತಾ ತಂಡಕ್ಕೆ ರಿಂಕು ಆಸರೆಯಾದರು. ಅವರು 51 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿ ತಂಡಕ್ಕೆ ಹೋರಾಟದ ಮೊತ್ತ ತಂದುಕೊಟ್ಟರು. ದಿಗ್ವೇಷ್ ರಾಥಿ ಎಸೆದ ಕೊನೆಯ ಓವರ್‌ನಲ್ಲಿ ರಿಂಕು ಬಾರಿಸಿದ ನಾಲ್ಕು ಸಿಕ್ಸರ್‌ಗಳು ಪಂದ್ಯದಲ್ಲಿ ನಿರ್ಣಾಯಕವಾದವು. ಇದು ಐಪಿಎಲ್ ಕೆರಿಯರ್‌ನಲ್ಲಿ ರಿಂಕು ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಅಷ್ಟೇ ಅಲ್ಲ, ಪಂದ್ಯದಲ್ಲಿ 5 ಕ್ಯಾಚ್‌ಗಳನ್ನು ಕೂಡ ಅವರು ಪಡೆದಿದ್ದರು. ಅಂತಿಮವಾಗಿ ಸೂಪರ್ ಓವರ್‌ನಲ್ಲೂ ಅವರೇ ಗೆಲುವಿನ ರನ್ ಬಾರಿಸಿದರು. ಕೊನೆಯ ಓವರ್‌ವರೆಗೂ ನಾಟಕೀಯವಾಗಿ ಸಾಗಿದ ಈ ಪಂದ್ಯ, ಸೂಪರ್ ಓವರ್‌ನಲ್ಲಿ ಕೋಲ್ಕತಾಗೆ ಗೆಲುವು ತಂದುಕೊಟ್ಟಿತು.

ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದ ಕೋಲ್ಕತಾ ನೈಟ್ ರೈಡರ್ಸ್:

19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೊದಲ ಆರು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಕಾಣದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿತ್ತು. ಆದರೆ ಇದೀಗ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡವು ಇದೀಗ ಎಂಟನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದು, ಪ್ಲೇ ಆಫ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನೊಂದೆಡೆ ರಿಷಭ್ ಪಂತ್ ನೇತೃತ್ವದ ಲಖನೌ ತಂಡವು ಆಡಿದ ಎಂಟು ಪಂದ್ಯಗಳ ಪೈಕಿ ಕೇವಲ ಎರಡು ಗೆಲುವು ಹಾಗೂ ಆರು ಸೋಲುಗಳೊಂದಿಗೆ ಕೇವಲ 4 ಅಂಕ ಹೊಂದಿದ್ದು, ಕೆಕೆಆರ್ ಎದುರಿನ ಸೋಲು ಲಖನೌದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾದಂತೆ ಆಗಿದೆ. ಇದೀಗ ಲಖನೌ ತಂಡವು ಲೀಗ್ ಹಂತದಲ್ಲಿ ಇನ್ನುಳಿದ ಆರಕ್ಕೆ ಆರೂ ಪಂದ್ಯ ಜಯಿಸಿದರಷ್ಟೇ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಓವರ್‌ನಲ್ಲಿ 2 'ಬೀಮರ್', ಆದ್ರೂ ಬೌಲಿಂಗ್‌ಗೆ ಬ್ರೇಕ್ ಹಾಕದ ಅಂಪೈರ್! ಆ ಅಚ್ಚರಿಯ ನಿರ್ಧಾರದ ಹಿಂದಿನ ಕಾರಣವೇನು?
ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್‌ ಗೆಲ್ಲುತ್ತಾ ಆರ್‌ಸಿಬಿ? ರಾಷ್ಟ್ರ ರಾಜಧಾನಿಯಲ್ಲಿಂದು ಸೇಡಿನ ಕದನ