ಒಲಿಂಪಿಕ್ಸ್ ಪದಕ ಗೆಲ್ಲುವ ಕನಸಿಗೆ ಕೈಜೋಡಿಸಿದ ಬಿಸಿಸಿಐ; 2-3 ಕ್ರೀಡೆಗಳನ್ನು ದತ್ತು ಪಡೆಯಲು ಸಿದ್ಧತೆ

Published : May 16, 2025, 12:22 PM IST
ಒಲಿಂಪಿಕ್ಸ್ ಪದಕ ಗೆಲ್ಲುವ ಕನಸಿಗೆ ಕೈಜೋಡಿಸಿದ ಬಿಸಿಸಿಐ;  2-3 ಕ್ರೀಡೆಗಳನ್ನು ದತ್ತು ಪಡೆಯಲು ಸಿದ್ಧತೆ

ಸಾರಾಂಶ

ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ವೃದ್ಧಿಗೆ ಕ್ರೀಡಾ ಸಚಿವಾಲಯದ ಮನವಿಗೆ ಸ್ಪಂದಿಸಿ ಬಿಸಿಸಿಐ 2-3 ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆಯಲಿದೆ. ಕ್ರೀಡಾಪಟುಗಳ ತರಬೇತಿ, ಫಿಟ್ನೆಸ್, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಬಿಸಿಸಿಐ ನೆರವು ನೀಡಲಿದೆ. ಕ್ರೀಡೆಗಳ ಆಯ್ಕೆಯನ್ನು ಸಚಿವಾಲಯಕ್ಕೆ ಬಿಡಲಾಗುವುದು. ಸಚಿವಾಲಯವು ಪ್ರತಿ ಕ್ರೀಡೆಗೆ ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಿ ಪದಕ ವಿಜೇತರನ್ನು ಸಜ್ಜುಗೊಳಿಸುವ ಯೋಜನೆ ಹೊಂದಿದೆ.

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ ಗುಣಮಟ್ಟ ವೃದ್ಧಿಸಬೇಕಿದ್ದರೆ ಕಾರ್ಪೋರೇಟ್ ಸಂಸ್ಥೆಗಳು ಕ್ರೀಡಾಪಟುಗಳಿಗೆ ನೆರವಾಗಬೇಕು ಎಂಬ ಕೇಂದ್ರ ಕ್ರೀಡಾ ಸಚಿವಾಲಯದ ಮನವಿಗೆ ಸ್ಪಂದಿಸಿರುವ ಬಿಸಿಸಿಐ, 2-3 ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆಯಲು ನಿರ್ಧರಿಸಿದೆ.

ಗುರುವಾರ ಇಲ್ಲಿ ಕೇಂದ್ರ ಕ್ರೀಡಾ ಸಚಿವ ಮನಸುಖ್ ಮಾಂಡವೀಯ ಅವರ ಜೊತೆ ನಡೆದ ಸಭೆಯಲ್ಲಿ ಬಿಸಿಸಿಐ ತಾನು ಆಸಕ್ತಿ ಹೊಂದಿರುವುದಾಗಿ ತಿಳಿಸಿದೆ. ಸಭೆಯಲ್ಲಿ ಒಟ್ಟು 58 ಕಾರ್ಪೋರೇಟ್ ಸಂಸ್ಥೆಗಳು ಪಾಲ್ಗೊಂಡಿದ್ದವು ಎಂದು ತಿಳಿದುಬಂದಿದೆ.

ಬಿಸಿಸಿಐ ಪರವಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕ್ರಿಕೆಟ್ ಮಂಡಳಿಯು 2-3 ಒಲಿಂಪಿಕ್ ಕ್ರೀಡೆಗಳನ್ನು ದತ್ತು ಪಡೆದು, ಆ ಕ್ರೀಡೆಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ತರಬೇತಿ, ಫಿಟೈಸ್, ಅಂ.ರಾ. ಕೂಟಗಳಲ್ಲಿ ಸ್ಪರ್ಧೆಗೆ ಬೇಕಿರುವ ಎಲ್ಲಾ ವ್ಯವಸ್ಥೆ ಮಾಡಲಿದೆ. ಯಾವ ಕ್ರೀಡೆಗಳನ್ನು ನಾವು ದತ್ತು ಪಡೆ ಯಬೇಕು ಎನ್ನುವ ನಿರ್ಧಾರವನ್ನು ಸಚಿವಾಲಯಕ್ಕೆ ಬಿಡಲಿದ್ದೇವೆ ಎಂದು ತಿಳಿಸಿದರು ಎಂದು ಗೊತ್ತಾಗಿದೆ.

ಕ್ರೀಡಾ ಸಚಿವಾಲಯವು ಪ್ರತಿ ಒಲಿಂಪಿಕ್ ಕ್ರೀಡೆಗೆ ಪ್ರತ್ಯೇಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, 100ರಿಂದ 200 ಪ್ರತಿಭಾನ್ವಿತ, ಪದಕ ಗೆಲ್ಲುವ ಸಾಮರ್ಥ್ಯವಿರುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರನ್ನು ಸಿದ್ಧಗೊಳಿಸುವ ಯೋಜನೆ ಹೊಂದಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಸದ್ಯ 23 ರಾಷ್ಟ್ರೀಯ ಸೆಂಟರ್‌ಆಫ್‌ ಎಕ್ಸ್‌ಲೆನ್ಸ್‌ ಕೇಂದ್ರಗಳನ್ನು ನಡೆಸುತ್ತಿದ್ದು, ಇವುಗಳಲ್ಲಿ ಬಾಕ್ಸಿಂಗ್ ಈಜು, ಹಾಗೂ ಶೂಟಿಂಗ್ ಕ್ರೀಡೆಗಳಿಗೆ ಮಾತ್ರ ಪ್ರತ್ಯೇಕ ತರಬೇತಿ ಕೇಂದ್ರಗಳಿವೆ.

ಟೆಸ್ಟ್‌ ವಿಶ್ವಕಪ್‌ ಗೆಲ್ಲುವ ತಂಡಕ್ಕೆ ₹30.78 ಕೋಟಿ!

ದುಬೈ: ಈ ವರ್ಷ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲುವ ತಂಡಕ್ಕೆ ಬರೋಬ್ಬರಿ 3.6 ಮಿಲಿಯರ್‌ ಡಾಲರ್‌ (ಅಂದಾಜು 30.78 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ಗುರುವಾರ ಐಸಿಸಿ ಅಧ್ಯಕ್ಷ ಜಯ್‌ ಶಾ, ಬಹುಮಾನ ಮೊತ್ತವನ್ನು ಹೆಚ್ಚಳ ಮಾಡಿರುವ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, ಪ್ರಶಸ್ತಿ ಮೊತ್ತ 17 ಕೋಟಿ ರು. ಏರಿಕೆಯಾಗಿದೆ. 2023ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಆದಾಗ ತಂಡಕ್ಕೆ 1.6 ಮಿಲಿಯನ್‌ ಡಾಲರ್‌ (ಅಂದಾಜು 13.68 ಕೋಟಿ ರು.) ಬಹುಮಾನ ಸಿಕ್ಕಿತ್ತು.

ಇದೇ ವೇಳೆ ರನ್ನರ್‌-ಅಪ್‌ ಆಗುವ ತಂಡಕ್ಕೆ 2.16 ಮಿಲಿಯನ್‌ ಡಾಲರ್‌ (ಅಂದಾಜು 18.47 ಕೋಟಿ ರು.) ಸಿಗಲಿದೆ. ಜೂ.11ರಿಂದ ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್‌ ವಿಶ್ವಕಪ್‌ಗಾಗಿ ಸೆಣಸಲಿವೆ.

ಇನ್ನು, 2023ರಿಂದ 2025ರ ಐಸಿಸಿ ಟೆಸ್ಟ್‌ ವಿಶ್ಚ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಭಾರತಕ್ಕೆ 12.31 ಕೋಟಿ ರು., 4ನೇ ಸ್ಥಾನಿಯಾದ ನ್ಯೂಜಿಲೆಂಡ್‌ಗೆ 10.26 ಕೋಟಿ, 5ನೇ ಸ್ಥಾನ ಪಡೆದ ಇಂಗ್ಲೆಂಡ್‌ಗೆ 8.2 ಕೋಟಿ ರು. ಸಿಗಲಿದೆ. ನಂತರದ ಸ್ಥಾನ ಪಡೆದ ಶ್ರೀಲಂಕಾ, ಬಾಂಗ್ಲಾ, ವಿಂಡೀಸ್‌ ಹಾಗೂ ಪಾಕಿಸ್ತಾನಕ್ಕೆ ಕ್ರಮವಾಗಿ 7.18 ಕೋಟಿ ರು., 6.15 ಕೋಟಿ ರು., 5.13 ಕೋಟಿ ರು., ಹಾಗೂ 4.10 ಕೋಟಿ ರು. ಸಿಗಲಿದೆ.

ಭಾರತ ಟಿ20 ತಂಡಕ್ಕೆ ವಾಪಸಾದ ಶಫಾಲಿ

ನವದೆಹಲಿ: 7 ತಿಂಗಳ ಬಳಿಕ ಭಾರತ ಮಹಿಳಾ ಟಿ20 ತಂಡಕ್ಕೆ ಆಕ್ರಮಣಕಾರಿ ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ವಾಪಸಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಜೂ.28ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಅವರನ್ನು ತಂಡಕ್ಕೆ ಮರಳಿ ಕರೆತರಲಾಗಿದೆ. ಟಿ20 ತಂಡಕ್ಕೆ 15, ಏಕದಿನ ತಂಡಕ್ಕೆ 16 ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ. ಎರಡೂ ತಂಡಗಳನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದಾರೆ. ಜೂ.15ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ