IPL 2025: ಆರ್‌ಸಿಬಿಗೆ ಟಿಮ್ ಡೇವಿಡ್, ಫಿಲ್ ಸಾಲ್ಟ್, ಶೆಫರ್ಡ್ ಬಲ, ಬೆಂಗಳೂರು ಈಗ ಮತ್ತಷ್ಟು ಬಲಿಷ್ಠ!

Published : May 16, 2025, 09:08 AM IST
IPL 2025: ಆರ್‌ಸಿಬಿಗೆ ಟಿಮ್ ಡೇವಿಡ್, ಫಿಲ್ ಸಾಲ್ಟ್, ಶೆಫರ್ಡ್ ಬಲ, ಬೆಂಗಳೂರು ಈಗ ಮತ್ತಷ್ಟು ಬಲಿಷ್ಠ!

ಸಾರಾಂಶ

ಭಾರತ-ಪಾಕಿಸ್ತಾನ ಯುದ್ಧದಿಂದ ಸ್ಥಗಿತಗೊಂಡಿದ್ದ ಐಪಿಎಲ್, ಆರ್‌ಸಿಬಿ-ಕೆಕೆಆರ್ ಪಂದ್ಯದ ಮೂಲಕ ಪುನರಾರಂಭಗೊಳ್ಳಲಿದೆ. ವಿದೇಶಿ ಆಟಗಾರರು ವಾಪಸಾಗಿದ್ದು, ಆರ್‌ಸಿಬಿ ಪ್ಲೇ-ಆಫ್‌ಗೆ ಸಜ್ಜಾಗಿದೆ. ಎರಡು ಗೆಲುವುಗಳು ಟಾಪ್ ೨ ಸ್ಥಾನ ಖಚಿತಪಡಿಸುತ್ತವೆ. ರಜತ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಆಡುವ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.

ಬೆಂಗಳೂರು: ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್‌, ಶನಿವಾರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್‌ ಪಂದ್ಯದೊಂದಿಗೆ ಪುನಾರಂಭಗೊಳ್ಳಲಿದೆ. ಭಯದ ವಾತಾವರಣ ಸೃಷ್ಟಿಯಾಗಿದ್ದ ಕಾರಣ ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿದ್ದ ವಿದೇಶಿ ಆಟಗಾರರ ಪೈಕಿ ಬಹುತೇಕರು ಭಾರತಕ್ಕೆ ವಾಪಸಾಗಿದ್ದಾರೆ. ಅದರಲ್ಲೂ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ಮರಳಿದ್ದು, ಪ್ಲೇ-ಆಫ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ತಂಡಕ್ಕೆ ಯಾವುದೇ ಆಟಗಾರನ ಅನುಪಸ್ಥಿತಿ ಎದುರಾಗುವ ಸಾಧ್ಯತೆ ಕಂಡುಬರುತ್ತಿಲ್ಲ.

ಇಂಗ್ಲೆಂಡ್‌ ಆಟಗಾರರಾದ ಫಿಲ್‌ ಸಾಲ್ಟ್‌, ಜೇಕಬ್‌ ಬೆತೆಲ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಆಸ್ಟ್ರೇಲಿಯಾದ ಟಿಮ್‌ ಡೇವಿಡ್‌, ವೆಸ್ಟ್‌ಇಂಡೀಸ್‌ನ ರೊಮಾರಿಯೋ ಶೆಫರ್ಡ್‌, ದ.ಆಫ್ರಿಕಾದ ಲುಂಗಿ ಎನ್‌ಗಿಡಿ ಬೆಂಗಳೂರಿಗೆ ಬಂದಿಳಿದಿದ್ದು, ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ತಂಡ ಸದ್ಯ 8 ಗೆಲುವುಗಳೊಂದಿಗೆ 16 ಅಂಕ ಗಳಿಸಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೇರಿಸಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡು ಮ್ಯಾಚ್ ಗೆದ್ದರೇ ಆರ್‌ಸಿಬಿ ಬಹುತೇಕ ಟಾಪ್ 2 ಪಟ್ಟಿಯೊಳಗೆ ಸ್ಥಾನ ಪಡೆಯಲಿದೆ.

ಫಿಲ್ ಸಾಲ್ಟ್‌, ಟಿಮ್ ಡೇವಿಡ್‌ , ಲಿಯಾಮದ ಲಿವಿಂಗ್‌ಸ್ಟೋನ್‌, ರೊಮ್ಯಾರಿಯೋ ಶೆಫರ್ಡ್‌ ಟೂರ್ನಿಯಲ್ಲಿ ಆರ್‌ಸಿಬಿ ಆಡುವ ವರೆಗೂ ಇರಲಿದ್ದಾರೆ.ಜೆಕೊಬ್ ಬೆತೆಲ್‌ ಮಾತ್ರ 2 ಪಂದ್ಯಗಳನ್ನು ಆಡಿ ಇಂಗ್ಲೆಂಡ್‌ಗೆ ವಾಪಸಾಗಲಿದ್ದಾರೆ. ಮೇ 29ರಿಂದ ವಿಂಡೀಸ್‌ ವಿರುದ್ಧ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಬೆತೆಲ್‌ ಆಯ್ಕೆಯಾಗಿದ್ದಾರೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಆಯ್ಕೆಯಾಗಿರುವ ಎನ್‌ಗಿಡಿ ಕೂಡ ಮೇ 26ರ ವೇಳೆಗೆ ತಂಡ ತೊರೆಯಲಿದ್ದಾರೆ.

ಇನ್ನು, ಅನಾರೋಗ್ಯ ಕಾರಣ ಕೆಲ ಪಂದ್ಯಗಳಿಗೆ ಗೈರಾಗಿದ್ದ ಫಿಲ್‌ ಸಾಲ್ಟ್‌ ಸಂಪೂರ್ಣವಾಗಿ ಗುಣಮುಖರಾಗಿದ್ದು, ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೆಟ್ಸ್‌ ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿ ಜೊತೆ ಬ್ಯಾಟ್‌ ಮಾಡಿದರು. ಅತ್ಯುತ್ತಮ ಲಯದಲ್ಲಿರುವ ಟಿಮ್ ಡೇವಿಡ್‌, ನೆಟ್ಸ್‌ನಲ್ಲಿ ಬ್ಯಾಟ್‌ ಬೀಸುತ್ತಿದ್ದ ರೀತಿ ಮೈದಾನದ ಮತ್ತೊಂದು ಭಾಗದಲ್ಲಿ ಅಭ್ಯಾಸ ನಡೆಸುತ್ತಿದ್ದ ಕೆಕೆಆರ್‌ ಆಟಗಾರರಲ್ಲಿ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

ಜೋಶ್‌ ಬರುವ ನಿರೀಕ್ಷೆ: ಆಸ್ಟ್ರೇಲಿಯಾದ ವೇಗಿ ಜೋಶ್‌ ಹೇಜಲ್‌ವುಡ್‌ ಕೂಡ ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಣ್ಣ ಪ್ರಮಾಣದ ಗಾಯದ ಕಾರಣ ಒಂದು ಪಂದ್ಯವನ್ನು ತಪ್ಪಿಸಿಕೊಂಡಿದ್ದ ಹೇಜಲ್‌ವುಡ್‌ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ಜೋಶ್ ಹೇಜಲ್‌ವುಡ್ ತಂಡ ಕೂಡಿಕೊಂಡರೇ ಆರ್‌ಸಿಬಿಗೆ ಮತ್ತಷ್ಟು ಬಲ ಬಂದಂತೆ ಆಗಲಿದೆ. ಆರ್‌ಸಿಬಿ ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳನ್ನಾಡುವುದು ಬಾಕಿಯಿದೆ. ಫೈನಲ್ ಪಂದ್ಯ ಜೂನ್ 3ರಂದು ನಡೆಯಲಿದೆ.

ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಆರ್‌ಸಿಬಿ ತಂಡವು ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನ ನೀಡುತ್ತಾ ಬಂದಿರುವ ಆರ್‌ಸಿಬಿ ಈ ಸಲ ಐಪಿಎಲ್ ಟ್ರೋಫಿ ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಅಭ್ಯಾಸ ಆರಂಭಿಸಿದ ನಾಯಕ ರಜತ್ ಪಾಟೀದಾರ್‌

ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್‌ ಪಾಟೀದಾರ್‌ ಕನಿಷ್ಠ 3 ಪಂದ್ಯಗಳಿಂದ ಹೊರಬೀಳುವ ಆತಂಕದಲ್ಲಿದ್ದರು. ಆದರೆ ಐಪಿಎಲ್‌ ಸ್ಥಗಿತಗೊಂಡ ಕಾರಣ ಅವರಿಗೆ ಚೇತರಿಸಿಕೊಳ್ಳಲು ಸಮಯ ದೊರೆಯಿತು. ಗುರುವಾರ ರಜತ್‌ ಪಾಟೀದಾರ್ ನೆಟ್ಸ್‌ನಲ್ಲಿ ಬಹಳ ಹೊತ್ತು ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಆದರೂ, ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಬಗ್ಗೆ ತಂಡದ ವೈದ್ಯರು ಶನಿವಾರ ಬೆಳಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರಜತ್‌ ಹೊರಗುಳಿದರೆ, ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ