ಹಾರ್ದಿಕ್ ಪಾಂಡ್ಯಗೆ ಹೊಸ ಟಾಸ್ಕ್: ಟಿ20 ವಿಶ್ವಕಪ್‌ ತಂಡದ ರೇಸ್‌ನಲ್ಲಿ ಶಿವಂ ದುಬೆ, ಚಹಲ್

By Kannadaprabha NewsFirst Published Apr 17, 2024, 10:44 AM IST
Highlights

ಕಳೆದ ವಾರ ಭಾರತದ ನಾಯಕ ರೋಹಿತ್‌ ಶರ್ಮಾ, ಕೋಚ್‌ ದ್ರಾವಿಡ್‌ ಹಾಗೂ ಆಯ್ಕೆ ಸಮಿತಿ ಸದಸ್ಯರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾರ್ದಿಕ್‌ ಬಗ್ಗೆಯೂ ಚರ್ಚೆಯಾಗಿದ್ದು, ಅವರು ಐಪಿಎಲ್‌ನಲ್ಲಿ ಉತ್ತಮವಾಗಿ ಬೌಲ್‌ ಮಾಡಿದರಷ್ಟೇ ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಎದುರು ನೋಡುತ್ತಿದ್ದಾರೆ. ಆದರೆ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಬೌಲಿಂಗ್‌ ಪ್ರದರ್ಶನದ ಮೇಲೆ ಅವರ ವಿಶ್ವಕಪ್‌ ಭವಿಷ್ಯ ಅಡಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ಶಿವಂ ದುಬೆ, ತಾರಾ ಸ್ಪಿನ್ನರ್‌ ಯಜುವೇಂದ್ರ ಚಹಲ್‌ರನ್ನು ಆಯ್ಕೆ ಸಮಿತಿ ವಿಶ್ವಕಪ್‌ಗೆ ಪರಿಗಣಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕಳೆದ ವಾರ ಭಾರತದ ನಾಯಕ ರೋಹಿತ್‌ ಶರ್ಮಾ, ಕೋಚ್‌ ದ್ರಾವಿಡ್‌ ಹಾಗೂ ಆಯ್ಕೆ ಸಮಿತಿ ಸದಸ್ಯರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾರ್ದಿಕ್‌ ಬಗ್ಗೆಯೂ ಚರ್ಚೆಯಾಗಿದ್ದು, ಅವರು ಐಪಿಎಲ್‌ನಲ್ಲಿ ಉತ್ತಮವಾಗಿ ಬೌಲ್‌ ಮಾಡಿದರಷ್ಟೇ ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಹಾರ್ದಿಕ್‌ 11 ಓವರ್‌ ಬೌಲ್‌ ಮಾಡಿದ್ದಾರೆ. ಆದರೆ 12ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಕೇವಲ 3 ವಿಕೆಟ್‌ ಪಡೆದಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಬೌಲ್‌ ಮಾಡಿದರೆ ಅವರು ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.

IPL 2024 ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಗೆಲ್ಲಲು ಟೈಟಾನ್ಸ್‌ ಸಜ್ಜು

ಇನ್ನೊಂದೆಡೆ ಶಿವಂ ದುಬೆ ಆಲ್ರೌಂಡರ್ ಆಗಿದ್ದರೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರ ಕೇವಲ ಇಂಪ್ಯಾಕ್ಟ್ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಶಿವಂ ದುಬೆ, ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದು, ಬೌಲಿಂಗ್‌ ಮಾಡುತ್ತಿಲ್ಲ. 

ಐಪಿಎಲ್‌ನಿಂದ ಬ್ರೇಕ್ ಪಡೆದ ಆರ್‌ಸಿಬಿ ಸ್ಟಾರ್ ಮ್ಯಾಕ್ಸ್‌ವೆಲ್

ಬೆಂಗಳೂರು: 17ನೇ ಆವೃತ್ತಿ ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಕುಗ್ಗಿ ಹೋಗಿರುವ ಆರ್‌ಸಿಬಿಗೆ ಮತ್ತೊಂದು ಆಘಾತ ಎದುರಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಾರಣ ನೀಡಿ ತಂಡದ ತಾರಾ ಆಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್‌ನಿಂದ ಅನಿರ್ದಿಷ್ಟಾವಧಿಗೆ ವಿರಾಮ ಪಡೆದುಕೊಂಡಿದ್ದಾರೆ.

ಸೋಮವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯಕ್ಕೆ ಮ್ಯಾಕ್ಸ್‌ವೆಲ್‌ ಅಲಭ್ಯರಾಗಿದ್ದರು. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಮ್ಯಾಕ್ಸ್ ವೆಲ್, ತಾವಾಗಿಯೇ ತಂಡದಿಂದ ಹೊರ ಗುಳಿಯಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. 'ನಾಯಕ ಡು ಪ್ಲೆಸಿ, ಕೋಚ್ ಜೊತೆ ಮಾತನಾಡಿ ಸ್ವತಃ ನಾನೇ ಪಂದ್ಯಕ್ಕೆ ಗೈರಾಗಿದ್ದೇನೆ. ಇತರರಿಗೆ ಅವಕಾಶ ಮಾಡಿಕೊಡಲು ಇದು ಸೂಕ್ತ ಸಮಯ. ಮಾನಸಿಕ, ದೈಹಿಕ ಆರೋಗ್ಯದ ಕಾರಣಕ್ಕೆ ವಿರಾಮ ಪಡೆಯುತ್ತಿದ್ದೇನೆ. ಶೀಘ್ರದಲ್ಲೇ ಮರಳಿ ಮರಳಿ ತಂಡವನ್ನು ಕೂಡಿಕೊಳ್ಳಲಿದ್ದೇನೆ' ಎಂದು ತಿಳಿಸಿದ್ದಾರೆ. 

549 ರನ್, 81 ಬೌಂಡ್ರಿ: ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ನುಚ್ಚುನೂರು..!

ಮ್ಯಾಕ್ಸ್‌ವೆಲ್ ಮಾನಸಿಕ ಆರೋಗ್ಯ ಕಾರಣದಿಂದಾಗಿ 2019ರಲ್ಲೂ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಈ ಬಾರಿ ಐಪಿಎಲ್‌ನಲ್ಲಿ 6 ಪಂದ್ಯಗಳನ್ನಾಡಿದ್ದು, 5.33 ಸರಾಸರಿಯಲ್ಲಿ 32 ರನ್ ಕಲೆಹಾಕಿದ್ದಾರೆ.

ಆಶಾ, ಸಜನಾ ಭಾರತ ಮಹಿಳಾ ತಂಡಕ್ಕೆ ಆಯ್ಕೆ

ನವದೆಹಲಿ: ಡಬ್ಲ್ಯುಪಿಎಲ್‌ನಲ್ಲಿ ಕ್ರಮವಾಗಿ ಆರ್‌ಸಿಬಿ ಹಾಗೂ ಮುಂಬೈ ತಂಡದ ಪರ ಮಿಂಚಿದ್ದ ಆಶಾ ಶೋಭನಾ ಹಾಗೂ ಸಜನಾ ಸಜೀವನ್‌ ಚೊಚ್ಚಲ ಬಾರಿ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಏ.28ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಸೋಮವಾರ ಭಾರತ ತಂಡ ಪ್ರಕಟಿಸಲಾಯಿತು. ಕರ್ನಾಟಕದ ಶ್ರೇಯಾಂಕ ಪಾಟೀಲ್‌ ಕೂಡಾ ತಂಡದಲ್ಲಿದ್ದಾರೆ.

ತಂಡ: ಹರ್ಮನ್‌ಪ್ರೀತ್‌(ನಾಯಕಿ), ಸ್ಮೃತಿ, ಶಫಾಲಿ, ಹೇಮಲತಾ, ಸಜನಾ, ರಿಚಾ, ಯಸ್ತಿಕಾ, ರಾಧಾ ಯಾದವ್‌, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್‌, ಅಮನ್‌ಜೋತ್‌, ಶ್ರೇಯಾಂಕ, ಸೈಕಾ ಇಶಾಕ್‌, ಆಶಾ, ರೇಣುಕಾ, ಟಿಟಾಸ್‌ ಸಧು.
 

click me!