* ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಿಸಿಸಿಐ ಶಿಲಾನ್ಯಾಸ
* 40 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ
* ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ 99 ವರ್ಷಕ್ಕೆ ಭೂಮಿ ಲೀಸ್
ಬೆಂಗಳೂರು(ಫೆ.15): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕನಸಿನ ಯೋಜನೆಯಾದ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಗೆ (National Cricket Academy) ಸೋಮವಾರ ಶಿಲಾನ್ಯಾಸ ನೆರವೇರಿಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದೇವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ಅಕಾಡೆಮಿಗೆ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly), ಕಾರ‍್ಯದರ್ಶಿ ಜಯ್ ಶಾ (Jay Shah), ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಸೇರಿದಂತೆ ಇತರರು ಶಂಕು ಸ್ಥಾಪನೆ ಮಾಡಿದರು.
2000ರಲ್ಲಿ ಸ್ಥಾಪನೆಯಾಗಿದ್ದ ಎನ್‌ಸಿಎ ಇದುವರೆಗೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಕಾರಾರಯಚರಿಸುತ್ತಿತ್ತು. ಕ್ರೀಡಾಂಗಣವನ್ನು ಹೊಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) (KSCA), ಹೊರಾಂಗಣ ಹಾಗೂ ಒಳಾಂಗಣ ಅಭ್ಯಾಸಕ್ಕಾಗಿ ಪ್ರತ್ಯೇಕ ಸ್ಥಳವನ್ನು ಬಿಸಿಸಿಐಗೆ ಬಾಡಿಗೆಗೆ ನೀಡಿತ್ತು. ಅದರಲ್ಲೇ ಕ್ರಿಕೆಟಿಗರ ಅಭ್ಯಾಸ, ಪುನಶ್ಚೇತನ ಶಿಬಿರ ನಡೆಯುತ್ತಿತ್ತು. ಆದರೆ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಅಕಾಡೆಮಿ ನಿರ್ಮಾಣಕ್ಕೆ ಮುಂದಾಗಿದ್ದ ಬಿಸಿಸಿಐ, 2017ರಲ್ಲಿ ರಾಜ್ಯ ಸರ್ಕಾರದ ನೆರವಿನಿಂದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ 99 ವರ್ಷಕ್ಕೆ ಭೂಮಿ ಲೀಸ್‌ಗೆ ಪಡೆದಿತ್ತು. ಆಟಗಾರರ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಕಾಡೆಮಿಯನ್ನು ವಿಮಾನ ನಿಲ್ದಾಣದ ಸಮೀಪದಲ್ಲೇ ನಿರ್ಮಿಸಲು ಉದ್ದೇಶಿಸಿದ್ದ ಬಿಸಿಸಿಐ ದೇವನಹಳ್ಳಿಯಲ್ಲಿ 50 ಕೋಟಿ ರುಪಾಯಿ ನೀಡಿ 40 ಎಕರೆ ಭೂಮಿ ಖರೀದಿಸಿತ್ತು.
ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಶಿಲಾನ್ಯಾಸ ನೆರವೇರಿಸಿದ ಕುರಿತಂತೆ ಟ್ವೀಟ್ ಮಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇಂದಿನಿಂದ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಆರಂಭವಾಗಿದೆ. ಬೆಂಗಳೂರಿನಲ್ಲಿಂದು ನೂತನ ಎನ್‌ಸಿಎಗೆ ಅಡಿಗಲ್ಲು ಹಾಕಲಾಯಿತು ಎಂದು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ನೂತನ ಎನ್‌ಸಿಎ ಸ್ಟೇಡಿಯಂ ಬ್ಲೂ ಫ್ರಿಂಟ್‌ಗಳನ್ನು ಸಹ ದಾದಾ ಹಂಚಿಕೊಂಡಿದ್ದಾರೆ.
ವಿಶ್ವದರ್ಜೆಯ ಸೌಲಭ್ಯಗಳು:
ಹೊಸದಾಗಿ ನಿರ್ಮಾಣವಾಗಲಿರುವ ಅಕಾಡೆಮಿಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಸುಮಾರು 16,000 ಚದರ ಅಡಿ ವಿಸ್ತೀರ್ಣ ಜಿಮ್ ನಿರ್ಮಾಣವಾಗಲಿದೆ. ಆಟಗಾರರಿಗೆ ಪುನಶ್ಚೇತನ ಶಿಬಿರ ಕೇಂದ್ರ, 243 ಸುಸಜ್ಜಿತ ಕೋಣೆಗಳು, ಔತಣಕೂಟ ಕೊಠಡಿ, ವಸತಿ ಗೃಹಗಳೂ ಇರಲಿವೆ. ಮುಖ್ಯ ಮೈದಾನದಲ್ಲಿ 7,500 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಗ್ಯಾಲರಿ ಹಾಗೂ 40 ಪ್ರಾಕ್ಟಿಸ್ ಪಿಚ್‌ಗಳು ತಯಾರಾಗಲಿದ್ದು, 20 ಪಿಚ್‌ಗಳಿಗೆ ಫ್ಲಡ್‌ಲೈಟ್ ವ್ಯವಸ್ಥೆ ಮಾಡಲಾಗುತ್ತದೆ. ಟೆನಿಸ್, ಸ್ಕ್ವಾಶ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಒಳಾಂಗಣ ಕ್ರೀಡಾಂಗಣ, ಫಾರ್ಮಸಿ, ಆಸ್ಪತ್ರೆ, ಎಟಿಎಂ ವ್ಯವಸ್ಥೆ ಕೂಡಾ ಇರಲಿದೆ.
The new National cricket Academy starts from today ..laid the foundation stone of the new place today in bengaluru pic.twitter.com/VPHYxcC4yH
— Sourav Ganguly (@SGanguly99)The new National cricket Academy pic.twitter.com/fVWMOxev5g
— Sourav Ganguly (@SGanguly99)ಎನ್‌ಸಿಎಗೆ ಕೋಟಿ ಕೋಟಿ ಖರ್ಚು:
ಬೆಂಗಳೂರಿನಲ್ಲಿರುವ (Bengaluru) ಎನ್‌ಸಿಎಗೆ ಬಿಸಿಸಿಐ 2007-08ರಲ್ಲಿ ಒಟ್ಟು 6.59 ಕೋಟಿ ರು. ಖರ್ಚು ಮಾಡಿತ್ತು. ಆದರೆ 5 ವರ್ಷಗಳ ಬಳಿಕ 2011-12ರಲ್ಲಿ ಖರ್ಚು ದ್ವಿಗುಣಗೊಂಡು 15.42 ಕೋಟಿ ರುಪಾಯಿ ವ್ಯಯವಾಗಿತ್ತು. 2017-18ರಲ್ಲಿ ಅಕಾಡೆಮಿಗೆ ಬಿಸಿಸಿಐ 31.27 ಕೋಟಿ ರು. ಖರ್ಚು ಮಾಡಿತ್ತು. ಬಳಿಕ 2018-19ರಲ್ಲಿ ಖರ್ಚು 42.76 ಕೋಟಿ ರುಪಾಯಿಗೆ ತಲುಪಿತ್ತು ಎಂದು ವರದಿಯಾಗಿದೆ.
IPL Auction 2022: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಟಾಪ್ 10 ಸ್ಟಾರ್ ಕ್ರಿಕೆಟಿಗರಿವರು..!
ಪ್ರಧಾನ ಕಚೇರಿ ಸ್ಥಳಾಂತರ ?
ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ನೂತನ ಅಕಾಡೆಮಿಯ ಕೆಲಸಗಳ ಪೂರ್ಣಗೊಂಡ ಬಳಿಕ ಬಿಸಿಸಿಐ ಪ್ರಧಾನ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಸಿಸಿಐ ಪ್ರಧಾನ ಕಚೇರಿ ಮುಂಬೈನ ವಾಂಖೆಡೆ ಕ್ರೀಡಾಂಗಣದ ಆವರಣದಲ್ಲಿದೆ.