ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಭಾರತಕ್ಕೆ ಆಘಾತ, ಮೂವರು ಆಟಗಾರರು ಔಟ್‌!

By Santosh NaikFirst Published Sep 26, 2022, 9:15 PM IST
Highlights

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಮೂವರು ಪ್ರಮುಖ ಆಟಗಾರರು ಈ ಸರಣಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ವರದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದರೆ, ಮತ್ತೊಂದೆಡೆ, ಮೊಹಮ್ಮದ್ ಶಮಿ ಮತ್ತು ದೀಪಕ್ ಹೂಡಾ ಗಾಯದಿಂದಾಗಿ ಭಾಗವಹಿಸಲು ಸಾಧ್ಯವಿಲ್ಲ. ಸೆಪ್ಟೆಂಬರ್ 28 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ನಡೆಯಲಿದೆ.
 

ಮುಂಬೈ (ಸೆ. 26): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಪಿಟಿಐ ವರದಿಯ ಪ್ರಕಾರ,  ತಂಡದ ಇಬ್ಬರು ಸ್ಟಾರ್ ಆಟಗಾರರಾದ ದೀಪಕ್ ಹೂಡಾ ಮತ್ತು ಮೊಹಮ್ಮದ್ ಶಮಿ ಗಾಯದ ಕಾರಣ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಹಾರ್ದಿಕ್ ಪಾಂಡ್ಯಗೆ ಮೂರು ಪಂದ್ಯಗಳ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಈ ಆಟಗಾರರ ಅನುಪಸ್ಥಿತಿಯಲ್ಲಿ ಭಾರತಕ್ಕೆ ಸರಣಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಪಿಟಿಐ ಪ್ರಕಾರ, ಹಾರ್ದಿಕ್ ಪಾಂಡ್ಯ ಬದಲಿಗೆ ಸ್ಪಿನ್ ಆಲ್ ರೌಂಡರ್ ಶಹಬಾಜ್ ಅಹ್ಮದ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ, ದೀಪಕ್ ಹೂಡಾ ಬದಲಿಗೆ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಸೇರ್ಪಡೆಗೊಂಡಿದ್ದಾರೆ. ಉಮೇಶ್ ಯಾದವ್ ಟೀಂ ಇಂಡಿಯಾ ಜೊತೆ ತಿರುವನಂತಪುರಂ ತಲುಪಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಬದಲಿಗೆ ಉಮೇಶ್ ಯಾದವ್ಗೆ ಅವಕಾಶ ಸಿಕ್ಕಿತ್ತು. ದಕ್ಷಿಣ ಆಫ್ರಿಕಾ ತಂಡ ಭಾನುವಾರ ಕೇರಳದ ರಾಜಧಾನಿಗೆ ಆಗಮಿಸಿದೆ. ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. 

ಟಿ20 ಸರಣಿಯ ಮೊದಲ ಪಂದ್ಯ ಸೆ. 28 ರಂದು ತಿರುವನಂತಪುರದಲ್ಲಿ ನಡೆಯಲಿದ್ದರೆ, ನಂತರದ ಪಂದ್ಯಗಳು ಕ್ರಮವಾಗಿ ಅಕ್ಟೋಬರ್‌ 2 ರಂದು ಗುವಾಹಟಿ ಹಾಗೂ  4 ರಂದು ಇಂದೋರ್‌ನಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ 6 ರಂದು ಲಕ್ನೋ, 9 ರಂದು ರಾಂಚಿ ಹಾಗೂ 11 ರಂದು ದೆಹಲಿಯಲ್ಲಿ ನಡೆಯಲಿದೆ.

ದೀಪಕ್ ಹೂಡಾ (Deepak Hooda) ಬೆನ್ನುನೋವಿಗೆ ಒಳಗಾಗಿದ್ದು, ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಹೇಳಿಕೆ ನೀಡಿದೆ. ಬೆನ್ನುನೋವಿನಿಂದಾಗಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಟಿ20ಯಲ್ಲಿ ದೀಪಕ್ ಹೂಡಾ ಆಯ್ಕೆಗೆ ಲಭ್ಯರಿರಲಿಲ್ಲ' ಎಂದು ಬಿಸಿಸಿಐ ಹೇಳಿತ್ತು. ಈಗ ಎನ್ ಸಿಎಯಲ್ಲಿ ದೀಪಕ್ ಹೂಡಾ ರಿಹ್ಯಾಬ್ ಮಾಡಬೇಕಾಗಬಹುದು ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ತಂಡ ಪ್ರಕಟವಾಗಿದ್ದರೆ, ಏಕದಿನ ಸರಣಿಗೆ (ODI Series) ಇನ್ನಷ್ಟೇ ತಂಡ ಪ್ರಕಟವಾಗಬೇಕಿದೆ.

Ind vs Aus ಟಿ20 ಸರಣಿ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿಕೊಂಡ ರೋಹಿತ್ ಶರ್ಮಾ..!

ಮೊಹಮ್ಮದ್ ಶಮಿ ಅವರು ವಿಶ್ವಕಪ್‌ಗಾಗಿ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ (Australia) ತೆರಳಬಹುದೇ ಎಂಬುದರ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ವಿಶ್ವಕಪ್‌ಗೆ (T20 World Cup) ಬಿಸಿಸಿಐ (BCCI)ಆಯ್ಕೆ ಮಾಡಿರುವ ನಾಲ್ವರು ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಮೊಹಮ್ಮದ್ ಶಮಿ ಕೂಡ ಒಬ್ಬರು. ಯುಎಇಯಲ್ಲಿ ನಡೆದ ಕಳೆದ ವಿಶ್ವಕಪ್ ಬಳಿಕ ಶಮಿ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ.

'ಇದು ನಮ್ಮ ಪ್ಲಾನ್ ಆಗಿತ್ತು': ಚಾರ್ಲಿ ಡೀನ್ ರನೌಟ್‌ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ದೀಪ್ತಿ ಶರ್ಮಾ..!

ಕೋವಿಡ್‌-19 ನಿಂದ ಶಮಿ (mohammed shami) ಈವರೆಗೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಅವರಿಗೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಉಮೇಶ್‌ ಯಾದವ್‌ ಅವರ ಬದಲು ಆಟಗಾರನಾಗಿರಲಿದ್ದಾರೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಹಾರ್ದಿಕ್‌ ಪಾಂಡ್ಯ, ಬದಲಿಗೆ ಶಹಬಾಜ್‌ ಅಹ್ಮದ್‌ ಅವರನ್ನು ಆಯ್ಕೆ ಮಾಡಿರುವ  ಬಗ್ಗೆ ಮಾತನಾಡಿದ ಅವರು, 'ಟೀಂ ಇಂಡಿಯಾದಲ್ಲಿ (Team India) ಮತ್ಯಾರಾದರೂ ವೇಗದ ಬೌಲಿಂಗ್‌ ಆಲ್ರೌಂಡರ್‌ ಇದ್ದಾರೆಯೇ, ಹಾರ್ದಿಕ್‌ ಪಾಂಡ್ಯ (Hardik Pandya) ಸ್ಥಾನದಲ್ಲಿ ಆಡುವಂಥವರು? ರಾಜ್‌ ಬಾವಾಗೆ ಇನ್ನಷ್ಟು ಅಭ್ಯಾಸ ಬೇಕಿದೆ. ಹಾಗಾಗಿ ಅವರನ್ನು ಭಾರತ ಎ ತಂಡದ ಪಂದ್ಯಗಳಲ್ಲಿ ಆಡಿಸಲಾಗುತ್ತಿದೆ. ಅವರ ಹೊರತಾಗಿ ಮತ್ಯಾರಾದರೂ ಇದ್ದಾರೆಯೇ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಹೂಡಾ ಕೂಡ ಸರಣಿಯಿಂದ ಹೊರಗುಳಿದಿರುವುದರಿಂದ, ಬ್ಯಾಟಿಂಗ್ ಆಲ್‌ರೌಂಡರ್ ಉದ್ದೇಶವನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಆಯ್ಕೆದಾರರು ಭಾವಿಸಿದ್ದಾರೆ.

click me!