Ind vs Aus ಟಿ20 ಸರಣಿ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿಕೊಂಡ ರೋಹಿತ್ ಶರ್ಮಾ..!

By Naveen KodaseFirst Published Sep 26, 2022, 5:20 PM IST
Highlights

* ಆಸ್ಟ್ರೇಲಿಯಾ ಮಣಿಸಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ
* 3 ಪಂದ್ಯಗಳ ಟಿ20 ಸರಣಿಯು 2-1 ಅಂತರದಲ್ಲಿ ಭಾರತದ ಪಾಲು
* ಗೆಲುವಿನ ಬೆನ್ನಲ್ಲೇ ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಂಭ್ರಮಿಸಿದ ಕೊಹ್ಲಿ-ರೋಹಿತ್

ಹೈದರಾಬಾದ್‌(ಸೆ.26): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ನೀಡಿದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕಿದೆ.

ಇಲ್ಲಿನ ರಾಜೀವ್ ಗಾಂಧಿ ಇಂಟರ್‌ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು 186 ರನ್‌ ಕಲೆಹಾಕಿತು. ಈ ಮೂಲಕ ಭಾರತಕ್ಕೆ ಗೆಲ್ಲಲು ಸವಾಲಿನ ಗುರಿ ನೀಡಿತು.  ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 104 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಹೀಗಿದ್ದೂ ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಡೇನಿಯಲ್ ಸ್ಯಾಮ್ಸ್‌ ಎಸೆದ ಮೊದಲ ಎಸೆತವನ್ನೇ ವಿರಾಟ್ ಕೊಹ್ಲಿ ಸಿಕ್ಸರ್‌ಗಟ್ಟುವ ಮೂಲಕ ಟೀಂ ಇಂಡಿಯಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆದರೆ ಮರು ಎಸೆತದಲ್ಲೇ ಕೊಹ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಕೊನೆಯ ಎರಡು ಎಸೆತಗಳಲ್ಲಿ ಭಾರತ ಗೆಲ್ಲಲು 4 ರನ್‌ಗಳ ಅಗತ್ಯವಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಬೌಂಡರಿ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.

Ind vs Aus 'ಯಾವ ಔಷಧಿಯನ್ನಾದರೂ ಕೊಡಿ, ನಾನು ಫೈನಲ್‌ ಆಡಬೇಕು ಅಷ್ಟೇ' ಎಂದಿದ್ದ ಸೂರ್ಯಕುಮಾರ್ ಯಾದವ್..!

ಟೀಂ ಇಂಡಿಯಾ ಗೆಲುವಿನ ನಗೆ ಬೀರುತ್ತಿದ್ದಂತೆಯೇ, ಪಂದ್ಯ ವೀಕ್ಷಿಸುತ್ತಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಹೋಗುವ ಮೆಟ್ಟಿಲುನಲ್ಲೇ ಒಬ್ಬರನ್ನೊಬ್ಬರು ಬಿಗಿದಪ್ಪಿಕೊಳ್ಳುವ ಮೂಲಕ ಸಂಭ್ರಮಾಚರಣೆ ಮಾಡಿದರು. ಈ ವೇಳೆ ವಿರಾಟ್ ಕೊಹ್ಲಿ ಪದೇ ಪದೇ ಖುಷಿಯಲ್ಲಿ ರೋಹಿತ್ ಶರ್ಮಾ ಅವರ ಬೆನ್ನು ತಟ್ಟುವ ಮೂಲಕ ಗೆಲುವಿನ ಸಂತಸವನ್ನು ಎಂಜಾಯ್ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.  

Virat Kohli and Rohit Sharma, divided by fans united by passion and love towards country and TEAM INDIA 🇮🇳 pic.twitter.com/JJEj2XF09N

— Anshul Talmale (@TalmaleAnshul)

ಕಳೆದ ಕೆಲ ವರ್ಷಗಳಿಂದಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ ಎಂಬಂತಹ ಗಾಳಿ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇದ್ದವು. ಈ ಗಾಳಿಸುದ್ದಿಗೆ ಈ ಇಬ್ಬರು ತೆರೆ ಎಳೆಯುವ ಪ್ರಯತ್ನವನ್ನು ಮಾಡಿ ಸುಮ್ಮನಾಗಿದ್ದರು. ಇದೀಗ ಅನ್ಸುಲ್‌ ತಾಲ್ಮಾಲೆ ಎನ್ನುವವರು 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಭಿಮಾನಿಗಳಿಂದ ಬೇರೆ-ಬೇರೆಯಾದವರು ಟೀಂ ಇಂಡಿಯಾ ದೇಶದ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಒಂದಾಗಿದ್ದಾರೆ ಎಂದು ಬರೆದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

click me!