ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸೋಲುಂಡ ಟೀಂ ಇಂಡಿಯಾ
ಸತತ ವೈಫಲ್ಯ: ಸಹಾಯಕ ಸಿಬ್ಬಂದಿ ಸ್ಥಾನಕ್ಕೂ ಕುತ್ತು ಸಾಧ್ಯತೆ
ಕಠಿಣ ನಿರ್ಧಾರ ಕೈಗೊಳ್ಳುತ್ತಾ ಬಿಸಿಸಿಐ?
ನವದೆಹಲಿ(ಜೂ.14): ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಲು ಭಾರತ ವಿಫಲವಾದ ಬೆನ್ನಲ್ಲೇ ಹಿರಿಯ ಆಟಗಾರರ ಬದಲಾವಣೆ ಕೂಗು ಎದ್ದಿದ್ದು, ಇದರ ನಡುವೆಯೇ ತಂಡದ ಕೋಚಿಂಗ್ ವಿಭಾಗಕ್ಕೂ ಸರ್ಜರಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜುಲೈನಲ್ಲೇ ಆರಂಭವಾಗಲಿದ್ದು, ಆ ಬಳಿಕ ತಂಡದ ಸಹಾಯಕ ಸಿಬ್ಬಂದಿಯನ್ನು ಬದಲಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಸದ್ಯ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪರಸ್ ಮ್ಹಾಂಬ್ರೆ ಬೌಲಿಂಗ್, ವಿಕ್ರಂ ರಾಥೋಡ್ ಬೌಲಿಂಗ್ ಕೋಚ್ ಆಗಿದ್ದಾರೆ. ಈ ಪೈಕಿ ವಿಕ್ರಂ 2019ರಿಂದಲೂ ತಂಡದ ಜೊತೆಗಿದ್ದು, 2021ರಲ್ಲಿ ಬ್ಯಾಟಿಂಗ್ ಕೋಚ್ ಆಗಿ ಮರು ಆಯ್ಕೆಯಾಗಿದ್ದರು. ದ್ರಾವಿಡ್ ಹಾಗೂ ಮ್ಹಾಂಬ್ರೆ 2021ರ ಟಿ20 ವಿಶ್ವಕಪ್ ಬಳಿಕ ತಂಡದ ಕೋಚ್ ಹುದ್ದೆ ಅಲಂಕರಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಭಾರತ ಐಸಿಸಿ ಟೂರ್ನಿ ಸೇರಿದಂತೆ ದೊಡ್ಡ ಮಟ್ಟಿನ ಸಾಧನೆಯೇನೂ ಮಾಡಿಲ್ಲ. ಹೀಗಾಗಿ ಸದ್ಯ ವಿಕ್ರಂ ಹಾಗೂ ಮ್ಹಾಂಬ್ರೆ ಅವರನ್ನು ಬಿಸಿಸಿಐ ಸೆಪ್ಟೆಂಬರ್ನಲ್ಲಿ ನಡೆಯಬೇಕಿರುವ ಏಷ್ಯಾಕಪ್ಗೂ ಮುನ್ನವೇ ಬದಲಾಯಿಸಬಹುದು ಎನ್ನಲಾಗುತ್ತಿದೆ. ಅಕ್ಟೋಬರ್-ನವೆಂಬರ್ನಲ್ಲಿ ಮಹತ್ವದ ಏಕದಿನ ವಿಶ್ವಕಪ್ ನಡೆಯಲಿದ್ದು, ಏಷ್ಯಾಕಪ್ಗೂ ಮುನ್ನವೇ ಸಹಾಯಕ ಸಿಬ್ಬಂದಿ ಬದಲಿಸಿದರೆ ವಿಶ್ವಕಪ್ ವೇಳೆಗೆ ಅವರು ಸಂಪೂರ್ಣ ಹೊಂದಿಕೊಳ್ಳಲಿದ್ದಾರೆ ಎಂಬುದು ಬಿಸಿಸಿಐ ಯೋಚನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
undefined
ಸ್ಕೂಲ್ ಕ್ರಶ್‌ಗೆ ಪ್ರೊಮೋಷನ್ ಕೊಟ್ಟ ಸಿಎಸ್‌ಕೆ ವೇಗಿ ತುಷಾರ್ ದೇಶಪಾಂಡೆ..! ಫೋಟೋ ವೈರಲ್
ದ್ರಾವಿಡ್ ಸ್ಥಾನ ಭದ್ರ?: ಇನ್ನು, ತಂಡದ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರೂ ಏಕದಿನ ವಿಶ್ವಕಪ್ವರೆಗೂ ದ್ರಾವಿಡ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅವರ ಅವಧಿ ವಿಶ್ವಕಪ್ ಮುಗಿಯುವವರೆಗೂ ಇದೆ. ಹೀಗಾಗಿ ಆ ಬಳಿಕವೇ ಅವರನ್ನು ಮುಂದುವರಿಸಬೇಕೇ ಬೇಡವೇ ಎಂಬುದನ್ನು ಬಿಸಿಸಿಐ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.
ಆಟಗಾರರಿಗೆ 1 ತಿಂಗಳ ವಿಶ್ರಾಂತಿ
ಐಪಿಎಲ್, ಟೆಸ್ಟ್ ವಿಶ್ವಕಪ್ನಿಂದಾಗಿ ಭಾರತೀಯ ಆಟಗಾರರು ಸಾಕಷ್ಟುದಣಿದಿದ್ದು, ಇನ್ನು ಒಂದು ತಿಂಗಳು ಅಗತ್ಯ ವಿಶ್ರಾಂತಿ ಪಡೆಯಲಿದ್ದಾರೆ. ಭಾರತಕ್ಕೆ ಮುಂದಿನ ಸರಣಿ ವಿಂಡೀಸ್ ವಿರುದ್ಧ ಜು.12ರಿಂದ ಆರಂಭವಾಗಲಿದೆ. ಆ ಬಳಿಕ ಏಷ್ಯಾಕಪ್, ಏಕದಿನ ವಿಶ್ವಕಪ್ಗೆ ಸಿದ್ಧಗೊಳ್ಳಬೇಕಿದೆ. ಹೀಗಾಗಿ ಸದ್ಯ ಆಟಗಾರರು ತಮ್ಮ ತಮ್ಮ ಮನೆಗೆ ಮರಳಿದ್ದು, ಒಂದು ತಿಂಗಳ ಬಳಿಕ ಮತ್ತೆ ಮೈದಾನಕ್ಕೆ ಆಗಮಿಸಲಿದ್ದಾರೆ.
ಗವಾಸ್ಕರ್, ಭಜ್ಜಿ ಕಿಡಿ
ಭಾರತದ ಟೆಸ್ಟ್ ವಿಶ್ವಕಪ್ ಸೋಲಿನ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ ಮುಂದುವರಿದಿದೆ. ತಂಡದ ಪ್ರದರ್ಶನ ಬಗ್ಗೆ ಕಿಡಿಕಾರಿರುವ ಸುನಿಲ್ ಗವಾಸ್ಕರ್, ‘ವಿಂಡೀಸ್‌ನಂತಹ ದುರ್ಬಲ ತಂಡಗಳ ವಿರುದ್ಧ 2-0, 3-0 ಅಂತರದಲ್ಲಿ ಗೆಲ್ಲುತ್ತೀರಿ. ಆದರೆ ಇದರಿಂದ ನಿಮಗೆ ಟ್ರೋಫಿ ಗೆಲ್ಲಲು ಸಾಧ್ಯವೇ. ಆಸ್ಪ್ರೇಲಿಯಾದಂತಹ ತಂಡಗಳ ವಿರುದ್ಧ ಗೆಲ್ಲಬೇಕಾದರೆ ನಿಮ್ಮ ಆಟ ಉತ್ತಮವಾಗಿರಬೇಕು’ ಎಂದಿದ್ದಾರೆ. ಹರ್ಭಜನ್ ಸಿಂಗ್ ಕೂಡಾ ಈ ಬಗ್ಗೆ ಮಾತನಾಡಿದ್ದು, ಮೊದಲ ಎಸೆತದಿಂದಲೇ ತಿರುವು ಕಾಣುವ ಕೆಟ್ಟಪಿಚ್ಗಳಲ್ಲಿ ಅತ್ಯುತ್ತಮವಾಗಿ ಆಡಿ ನಕಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬಾರದು. 5 ದಿನಕ್ಕೆ ಬೇಕಾದ ಕಠಿಣ ಅಭ್ಯಾಸ ನಡೆಸಿ ಮಹತ್ವದ ಟೂರ್ನಿಗಳಲ್ಲಿ ಆಡಬೇಕು’ ಎಂದು ಕುಟುಕಿದ್ದಾರೆ.