ವಿರಾಟ್ ಕೊಹ್ಲಿ ಕುರಿತಾಗಿ ರಾಗ ಬದಲಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ
ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದೇಕೆ ಎನ್ನುವುದು ನನಗಂತೂ ಗೊತ್ತಿಲ್ಲ
ಕೊಹ್ಲಿ ನಾಯಕತ್ವದಡಿ ಟೀಂ ಇಂಡಿಯಾ ಒಳ್ಳೆಯ ಪ್ರದರ್ಶನ ತೋರಿದೆ ಎಂದ ದಾದ
ನವದೆಹಲಿ(ಜೂ.13): ಭಾರತ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಪದಚ್ಯುತಿ ಮಾಡಿದ ಬಳಿಕ 2021ರ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿದ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದರು. ಮಹೇಂದ್ರ ಸಿಂಗ್ ಧೋನಿಯವರಿಂದ ಟೀಂ ಇಂಡಿಯಾ ನಾಯಕತ್ವ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ಮೂರು ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇನ್ನು 2021ರ ಐಸಿಸಿ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ಭಾರತ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇನ್ನು ಇದಾದ ಬಳಿಕ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ಮಾಡುವ ಮುನ್ನ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ, ಸೀಮಿತ ಓವರ್‌ಗಳ ತಂಡದ ನಾಯಕರಾಗಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಗಿತ್ತು. ಆಗ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿರಾಟ್ ಕೊಹ್ಲಿ ಏಕದಿನ ನಾಯಕತ್ವ ಪದಚುತಿಯ ಹಿಂದೆ ಸೌರವ್ ಗಂಗೂಲಿ ಕೈವಾಡವಿದೆ. ದಾದಾ ಹಾಗೂ ಕೊಹ್ಲಿ ನಡುವೆ ಸಂಬಂಧ ಸರಿಯಾಗಿಲ್ಲ ಎನ್ನುವಂತಹ ಚರ್ಚೆಗಳು ಸಾಕಷ್ಟು ನಡೆದಿದ್ದವು.
ಇದೀಗ ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರ ಕುರಿತಂತೆ ಮೌನ ಮುರಿದಿದ್ದಾರೆ. ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಯುವಂತೆ ಬಿಸಿಸಿಐ ಯಾವುದೇ ರೀತಿಯಲ್ಲೂ ಒತ್ತಡ ಹೇರಿರಲಿಲ್ಲ. ಈ ಸುದ್ದಿ ಮೊದಲ ಬಾರಿ ಕೇಳಿದಾಗ ನನಗೆ ಅಚ್ಚರಿಯಾಯಿತು. ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವಂತೆಯೂ ಬಿಸಿಸಿಐ ಕೇಳಿರಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
undefined
ವಿಶ್ವಕಪ್ ಗೆಲ್ಲುವುದಕ್ಕಿಂತ IPL ಟ್ರೋಫಿ ಗೆಲ್ಲೋದು ಕಷ್ಟ: ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ..!
"ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಬಿಸಿಸಿಐ, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಯುವಂತೆ ಹೇಳಿರಲಿಲ್ಲ. ಅವರು ಅದ್ಯಾಕೆ ಹಾಗೆ ಮಾಡಿದರೋ ನನಗಂತೂ ಗೊತ್ತಿಲ್ಲ. ಈ ಕುರಿತಂತೆ ಅವರೇ ಹೇಳಬೇಕು. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ ಆ ಸಂದರ್ಭದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ವ್ಯಕ್ತಿಯಾಗಿದ್ದರು" ಎಂದು ಆಜ್‌ತಕ್ ವಾಹಿನಿಯ ಜತೆಗಿನ ವಿಶೇಷ ಸಂದರ್ಶನದಲ್ಲಿ ದಾದಾ ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಅತ್ಯುತ್ತಮ ನಾಯಕರಾಗಿದ್ದರು. ಕೊಹ್ಲಿ ಮತ್ತು ಶಾಸ್ತ್ರಿ ಜೋಡಿಯ ಅಡಿ ಟೀಂ ಇಂಡಿಯಾ ನಿಜಕ್ಕೂ ಒಳ್ಳೆಯ ಪ್ರದರ್ಶನವನ್ನು ತೋರಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಿರ್ಭೀತ ಪ್ರದರ್ಶನ ತೋರಿತ್ತು. ಒಂದು ವೇಳೆ ಅದೇ ಸಂದರ್ಭದಲ್ಲಿ ಇಂಗ್ಲೆಂಡ್ ಎದುರು ಮ್ಯಾಂಚೆಸ್ಟರ್ ಟೆಸ್ಟ್ ಸರಣಿಯನ್ನು ಆಡಿದ್ದರೇ, ಖಂಡಿತವಾಗಿಯೂ ಟೀಂ ಇಂಡಿಯಾ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿತ್ತು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
2021ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ 4 ಪಂದ್ಯ ಅಂತ್ಯದ ವೇಳೆಗೆ 2-1 ಅಂತರದ ಮುನ್ನಡೆ ಸಾಧಿಸಿತ್ತು. 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಪಾಳಯದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಯಲ್ಲಿ ಸರಣಿಯ ಕೊನೆಯ ಪಂದ್ಯವನ್ನು ಮುಂದೂಡಲಾಗಿತ್ತು. 2022ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಮತ್ತೆ ಇಂಗ್ಲೆಂಡ್ ಪ್ರವಾಸ ಮಾಡಿತಾದರೂ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ಪಡೆ ಎದುರು ಮುಗ್ಗರಿಸಿ ಸರಣಿಯನ್ನು 2-2 ಅಂತರದಲ್ಲಿ ಸಮ ಮಾಡಿಕೊಂಡಿತ್ತು.