
ನವದೆಹಲಿ(ಏ.17): 2023-24ರ ದೇಸಿ ಋತು ಆರಂಭಕ್ಕೂ ಮುನ್ನ ಬಿಸಿಸಿಐ ದೇಸಿ ಟೂರ್ನಿಗಳ ಬಹುಮಾನದ ಮೊತ್ತ ಭಾರೀ ಏರಿಕೆ ಮಾಡಿದ್ದು, ರಣಜಿ ಟ್ರೋಫಿ ವಿಜೇತರು ಇನ್ನು ಮುಂದೆ 2 ಕೋಟಿ ರು. ಬದಲು 5 ಕೋಟಿ ರುಪಾಯಿ ಪಡೆಯಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾನುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಇನ್ಮುಂದೆ ರಣಜಿ ಟ್ರೋಫಿ ರನ್ನರ್-ಅಪ್ ತಂಡ 1 ಕೋಟಿ ಬದಲು 3 ಕೋಟಿ ರುಪಾಯಿ ಪಡೆಯಲಿದೆ ಎಂದಿದ್ದಾರೆ.
ಇರಾನಿ ಕಪ್ ವಿಜೇತರು 25 ಲಕ್ಷ ಬದಲು 50 ಲಕ್ಷ ರುಪಾಯಿ, ದುಲೀಪ್ ಟ್ರೋಫಿ ವಿಜೇತರು 40 ಲಕ್ಷ ರುಪಾಯಿ ಬದಲು 1 ಕೋಟಿ ರುಪಾಯಿ, ವಿಜಯ್ ಹಜಾರೆ ಟ್ರೋಫಿ ವಿಜೇತ ತಂಡ 30 ಲಕ್ಷ ರುಪಾಯಿ ಬದಲು 1 ಕೋಟಿ ರು. ಪಡೆಯಲಿದೆ ಎಂದು ತಿಳಿಸಿದ್ದಾರೆ. ದೇವಧಾರ್ ಟ್ರೋಫಿಯ ಬಹುಮಾನ ಮೊತ್ತ 25 ಲಕ್ಷದಿಂದ 40 ಲಕ್ಷ ರುಪಾಯಿಗೆ ಹೆಚ್ಚಾಗಿದ್ದರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೊತ್ತ 25 ಲಕ್ಷದಿಂದ 80 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯ ಬಹುಮಾನ ಮೊತ್ತ 6 ಲಕ್ಷದಿಂದ 50 ಲಕ್ಷಕ್ಕೆ, ಟಿ20 ಟೂರ್ನಿಯ ಮೊತ್ತ 5 ಲಕ್ಷದಿಂದ 40 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಐಸಿಸಿಯಿಂದ ಬಿಸಿಸಿಐಗೆ 10,000 ಕೋಟಿ ಪಾವತಿ?
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆದಾಯ ಹಂಚಿಕೆಯಲ್ಲಿ ಬಿಸಿಸಿಐ ಪಾಲು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 2016-23ರ ಅವಧಿಯಲ್ಲಿ ಐಸಿಸಿಯ ಒಟ್ಟು ಆದಾಯದಲ್ಲಿ ಶೇ.22ರಷ್ಟುಅಂದರೆ ಅಂದಾಜು 3,300 ಕೋಟಿ ರು. ಬಿಸಿಸಿಐ ಖಜಾನೆ ಸೇರಿತ್ತು. ಈಗ 2024-27ರ ಅವಧಿಯಲ್ಲಿ ಬಿಸಿಸಿಐ ಪಾಲು ಶೇ.37ಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ. ಅಂದರೆ ಐಸಿಸಿಯಿಂದ ಬಿಸಿಸಿಐಗೆ 10,000 ಕೋಟಿ ರು. ಹರಿದುಬರುವ ನಿರೀಕ್ಷೆ ಇದೆ.
IPL 2023: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು - ಚೆನ್ನೈ ಸೂಪರ್ ಕಿಂಗ್ಸ್ ಮೆಗಾ ಫೈಟ್
ಮುಂದಿನ ವಾರ ಶ್ರೇಯಸ್‌ಗೆ ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆ
ನವದೆಹಲಿ: ಬೆನ್ನು ನೋವಿನಿಂದ ಬಳಲುತ್ತಿರುವ ಭಾರತದ ತಾರಾ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂದಿನ ವಾರ ಶಸ್ತ್ರಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಈಗಾಗಲೇ ಖಚಿತಪಡಿಸಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅಯ್ಯರ್ ಸುಮಾರು 4-5 ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲಿದ್ದು, ಸೆಪ್ಟೆಂಬರ್ನಲ್ಲಿ ನಡೆಯಲಿರುಗ ಏಷ್ಯಾಕಪ್ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಅಕ್ಟೋಬರ್ ವೇಳೆಗೆ ಗುಣಮುಖರಾಗುವ ನಿರೀಕ್ಷೆ ಇದ್ದರೂ ಐಸಿಸಿ ಏಕದಿನ ವಿಶ್ವಕಪ್ಗೆ ಅಲಭ್ಯರಾಗಬಹುದು ಎಂದು ಹೇಳಲಾಗುತ್ತಿದೆ.
ಬಾಬರ್ ಶತಕ: ಪಾಕ್‌ಗೆ ಕಿವೀಸ್ ವಿರುದ್ಧ ಗೆಲುವು
ಲಾಹೋರ್: ನಾಯಕ ಬಾಬರ್ ಆಜಂ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 38 ರನ್ ಜಯಗಳಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಪಾಕ್ 4 ವಿಕೆಟ್ಗೆ 192 ರನ್ ಕಲೆಹಾಕಿತು. ರಿಜ್ವಾನ್ 50 ರನ್ ಸಿಡಿಸಿದರೆ, ಆಜಂ 58 ಎಸೆತಗಳಲ್ಲಿ ಔಟಾಗದೆ 101 ರನ್ ಬಾರಿಸಿ ಅಂ.ರಾ. ಟಿ20ಯಲ್ಲಿ 3 ಶತಕ ಸಿಡಿಸಿದ ಮೊದಲ ನಾಯಕ ಎನಿಸಿಕೊಂಡರು. ಗುರಿ ಬೆನ್ನತ್ತಿದ ಕಿವೀಸ್ 7 ವಿಕೆಟ್ಗೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಮಾರ್ಕ್ ಚಾಪ್ಮನ್(40 ಎಸೆತಗಳಲ್ಲಿ 65) ಹೋರಾಟ ವ್ಯರ್ಥವಾಯಿತು. ರೌಫ್ ಮತ್ತೆ 4 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.