* ಬಿಸಿಸಿಐ ವಿರುದ್ದ ಅಸಮಾಧಾನ ಹೊರಹಾಕಿದ್ದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ
* ವಿರಾಟ್ ಕೊಹ್ಲಿ ಬಗ್ಗೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿರಲು ಬಿಸಿಸಿಐ ನಿರ್ಧಾರ
* ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಮುಕ್ತಾಯದ ಬಗ್ಗೆ ಆಲೋಚಿಸಲು ತೀರ್ಮಾನ
ನವದೆಹಲಿ(ಡಿ.18): ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹಾಗೂ ಆಯ್ಕೆ ಸಮಿತಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ವಿರುದ್ಧ ಬಿಸಿಸಿಐ ತಕ್ಷಣಕ್ಕೆ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಏಕದಿನ ನಾಯಕತ್ವ ಬದಲಾವಣೆ ಬಗ್ಗೆ ಗಂಗೂಲಿ ತಮ್ಮೊಂದಿಗೆ ಚರ್ಚಿಸಿಲ್ಲ, ಟಿ20 ನಾಯಕದಂತೆ ಬಿಡದಂತೆ ಮನವಿ ಮಾಡಿರಲಿಲ್ಲ ಎಂದು ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಸ್ಫೋಟಕ ಹೇಳಿಕೆಗಳನ್ನು ನೀಡಿದ ಬಳಿಕ, ಕೆಲ ಮಾಧ್ಯಮಗಳು ಕೊಹ್ಲಿಗೆ ಬಿಸಿಸಿಐ ಶೋಕಾಸ್ ನೋಟಿಸ್ ನೀಡಲಿದೆ ಎಂದು ವರದಿ ಮಾಡಿದ್ದವು.
ಆದರೆ ಮೂಲಗಳ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಈ ಸಂದರ್ಭದಲ್ಲಿ ನಾಯಕ ಕೊಹ್ಲಿ ವಿರುದ್ಧ ಕ್ರಮಕ್ಕೆ ಮುಂದಾದರೆ, ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಬಿಸಿಸಿಐಗಿದೆ ಎನ್ನಲಾಗುತ್ತಿದೆ. ಅಲ್ಲದೇ ಈ ವಿಚಾರವನ್ನು ಕೆದಕಿದಷ್ಟೂ ಅಪಾಯ ಜಾಸ್ತಿ ಎನ್ನುವ ಭೀತಿಯೂ ಬಿಸಿಸಿಐ ಬಿಗ್‌ಬಾಸ್‌ಗಳಿಗಿದೆ ಎಂದು ಹೇಳಲಾಗಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ವಿರುದ್ಧ ತಕ್ಷಣಕ್ಕೆ ಯಾವುದೇ ಕ್ರಮಕ್ಕೆ ಬಿಸಿಸಿಐ ಮುಂದಾಗುವುದಿಲ್ಲ ಎಂದು ತಿಳಿದುಬಂದಿದೆ.
ಇನ್ನು ಗುರುವಾರವೂ ಈ ಬೆಳವಣಿಗೆ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ. ಬಿಸಿಸಿಐ ಈ ಸಮಸ್ಯೆಯನ್ನು ಬಗೆಹರಿಸಲಿದೆ’ ಎಂದಿದ್ದಾರೆ. ಮೂಲಗಳ ಪ್ರಕಾರ, ದಕ್ಷಿಣ ಆಫ್ರಿಕಾ ಸರಣಿಯಿಂದ ತಂಡ ವಾಪಸಾದ ಬಳಿಕ, ಕೊಹ್ಲಿ ಜೊತೆ ಗಂಗೂಲಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ತಂಡದೊಂದಿಗೆ ಫ್ಲೈಟ್‌ನಲ್ಲಿ ಕೊಹ್ಲಿ ಮೋಜು, ಮಸ್ತಿ!
ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ಮಾಜಿ ಕ್ರಿಕೆಟಿಗರು ಹಾಗೂ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಾಯಕ ವಿರಾಟ್ ಕೊಹ್ಲಿ, ಬುಧವಾರ ತಂಡದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವ ವೇಳೆ ಲವಲವಿಕೆಯಿಂದಿದ್ದರು ಎನ್ನುವುದು ಅವರು ಸಾಮಾಜಿಕ ತಾಣಗಳಲ್ಲಿ ಹಾಕಿಕೊಂಡಿರುವ ವಿಡಿಯೋ, ಫೋಟೋಗಳಿಂದ ಸ್ಪಷ್ಟವಾಗಿದೆ. ವಿಮಾನದಲ್ಲಿ ತಮ್ಮ ಸಹ ಆಟಗಾರರಾದ ಇಶಾಂತ್ ಶರ್ಮಾ ಹಾಗೂ ಇತರರೊಂದಿಗೆ ಹಾಸ್ಯ ಮಾಡುತ್ತಾ, ಮೋಜು, ಮಸ್ತಿಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
Kohli vs BCCI: ವಿರಾಟ್ ಕೊಹ್ಲಿ ಹೇಳಿಕೆ ಕುರಿತು ಮೌನ ಮುರಿದ ಸೌರವ್ ಗಂಗೂಲಿ..!
ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮೊದಲಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಡಿಸೆಂಬರ್ 26ರಿಂದ ಟೆಸ್ಟ್ ಸರಣಿಯನ್ನಾಡಲಿದೆ. ಇದಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ಶೀಘ್ರ ಭಾರತೀಯ ಕ್ರಿಕೆಟ್ ಆಡಳಿತಕ್ಕೆ ತೆಂಡುಲ್ಕರ್ ?
ನವದೆಹಲಿ: ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ (Sachin Tendulkar) ಮತ್ತೊಮ್ಮೆ ಭಾರತೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಸಚಿನ್ ಎಲ್ಲರಿಗಿಂತ ಸ್ವಲ್ಪ ಭಿನ್ನ. ಅವರು ಇಂತಹ ವಿಚಾರಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಆದರೆ ಸಮಯ ಬಂದಾಗ ಸಚಿನ್ ಭಾರತೀಯ ಕ್ರಿಕೆಟ್‌ನಲ್ಲಿ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.
ಗಂಗೂಲಿ ಸೇರಿದಂತೆ ಭಾರತದ ಹಲವು ಮಾಜಿ ಆಟಗಾರರು ಈಗಾಗಲೇ ಭಾರತೀಯ ಕ್ರಿಕೆಟ್‌ನ ಪ್ರಮುಖ ಹುದ್ದೆಗಳಲ್ಲಿದ್ದಾರೆ. ರಾಹುಲ್ ದ್ರಾವಿಡ್ (Rahul Dravid) ಟೀಂ ಇಂಡಿಯಾ ಪ್ರಧಾನ ಕೋಚ್ ಅಗಿದ್ದು, ವಿವಿಎಸ್ ಲಕ್ಷ್ಮಣ್ (VVS Laxman) ಇತ್ತೀಚೆಗಷ್ಟೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.