ಐಸಿಸಿ ಟಿ20 ವಿಶ್ವಕಪ್ ಆಯೋಜನೆ: ಜೂನ್‌ 28ರವರೆಗೆ ಗಡುವು ಪಡೆದ ಬಿಸಿಸಿಐ

By Suvarna NewsFirst Published Jun 2, 2021, 1:17 PM IST
Highlights

* ಐಸಿಸಿ ಟಿ20 ವಿಶ್ವಕಪ್‌; ಬಿಸಿಸಿಐ ಮನವಿಗೆ ಸ್ಪಂದಿಸಿದ ಐಸಿಸಿ

* 2021ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯದ ಹಕ್ಕು ಪಡೆದಿದೆ

* ಭಾರತದಲ್ಲಿ ಟೂರ್ನಿ ಆಯೋಜಿಸುವ ಕುರಿತಂತೆ ಇನ್ನೊಂದು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲು ಸೂಚಿಸಿದ ಐಸಿಸಿ

ದುಬೈ(ಜೂ.02): ಭಾರತದಲ್ಲೇ ಟಿ20 ವಿಶ್ವಕಪ್ ಆಯೋಜಿಸುವ ಕುರಿತಂತೆ ಐಸಿಸಿಯಿಂದ ಒಂದು ತಿಂಗಳು ಕಾಲಾವಕಾಶ ಪಡೆಯುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಬಿಸಿಸಿಐಗೆ ಜೂನ್‌ 28ರೊಳಗಾಗಿ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯದ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಜೂನ್‌ 02ರಂದು ನಡೆದ ಸಭೆಯಲ್ಲಿ ಐಸಿಸಿ ಸೂಚಿಸಿದೆ.

ಐಸಿಸಿ ಸಭೆ ಸೇರುವ ಮುನ್ನವೇ ಬಿಸಿಸಿಐ ಮೇ 29ರಂದು ವಿಶೇಷ ಸಾಮಾನ್ಯ ಸಭೆ ಸೇರಿತ್ತು. ಈ ಸಂದರ್ಭದಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ತೀರ್ಮಾನ ತೆಗೆದುಕೊಂಡಿತ್ತು. ಇದೇ ವೇಳೆ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೂರ್ನಿ ಆಯೋಜನೆ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲು ಇನ್ನೊಂದು ತಿಂಗಳು ಕಾಲಾವಕಾಶ ಬೇಕು ಎಂದು ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬಳಿ ಮನವಿ ಮಾಡಿಕೊಂಡಿತ್ತು.

ಗುಡ್ ನ್ಯೂಸ್‌: ಐಪಿಎಲ್‌ 2021 ಭಾಗ-2 ಆತಿಥ್ಯ ಎಲ್ಲಿ? ಗೊಂದಲಗಳಿಗೆ ಬಿಸಿಸಿಐ ತೆರೆ

2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಇದೀಗ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಯೋಜಿಸಲು ಐಸಿಸಿ ಲೆಕ್ಕಾಚಾರ ಹಾಕುತ್ತಿದೆ. ಆತಿಥ್ಯದ ಹಕ್ಕು ಪಡೆದಿರುವ ಬಿಸಿಸಿಐ ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಯನ್ನು ಶತಾಯಗತಾಯ ಭಾರತದಲ್ಲಿ ಆಯೋಜಿಸಲು ಪಣ ತೊಟ್ಟಿದೆ.

ಒಂದು ವೇಳೆ ಬಿಸಿಸಿಐ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಸಾಧ್ಯವಾಗದಿದ್ದರೆ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಬಹುತೇಕ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಾಗಿದೆ. 

ಇನ್ನು ಐಸಿಸಿ ಮುಂದಿನ 8 ವರ್ಷಗಳ ಕಾಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ. ಚೊಚ್ಚಲ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ ಟೂರ್ನಿಗೆ ಕೋವಿಡ್ 19 ಸಾಕಷ್ಟು ಅಡ್ಡಿ ಪಡೆಸಿದೆ. ಹೀಗಿದ್ದೂ 2023ರಿಂದ 2031ರ ಅವಧಿಯಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಯಥಾ ಪ್ರಕಾರ ನಡೆಯಲಿದೆ ಎಂದು ಐಸಿಸಿ ಮುಖ್ಯಸ್ಥ ಗ್ರೆಗ್ ಬಾರ್ಕ್ಲೆ ತಿಳಿಸಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಡ್ರಾ/ ಟೈ ಆದ್ರೆ ಏನಾಗುತ್ತೆ? ಕುತೂಹಲಕ್ಕೆ ತೆರೆ ಎಳೆದ ಐಸಿಸಿ

ಸದ್ಯ ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 18ರಂದು ಸೌಥಾಂಪ್ಟನ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿಸಲ್ಪಟ್ಟಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಒಂದು ವೇಳೆ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡು ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಲಿಸಲಾಗುವುದೆಂದು ಐಸಿಸಿ ತಿಳಿಸಿದೆ.

click me!