* ತಿಂಗಳ ಬಿಡುವಿನ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ
* ವಿಂಡೀಸ್ ಪ್ರವಾಸದಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಆಡಲಿರುವ ಉಭಯ ತಂಡಗಳು
* ಟೆಸ್ಟ್ ಸರಣಿಯು ಜುಲೈ 12ರಿಂದ ಆರಂಭ
ನವದೆಹಲಿ(ಜೂ.13): ಭಾರತ ತಂಡ ಜಲೈ.12ರಿಂದ ಆಗಸ್ಟ್ 13ರ ವರೆಗೂ ವೆಸ್ಟ್ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಸೋಮವಾರ ಬಿಸಿಸಿಐ ಅಧಿಕೃತ ವೇಳಾಪಟ್ಟಿ ಪ್ರಕಟಿಸಿತು. ಟೀಂ ಇಂಡಿಯಾವು, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಎರಡನೇ ಆವತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ಟೀಂ ಇಂಡಿಯಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸುಮಾರು ಒಂದು ತಿಂಗಳ ಬಿಡುವಿನ ಬಳಿಕ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಮೂಲಕ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
undefined
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದ್ದು, ಜುಲೈ 20ರಿಂದ 2ನೇ ಟೆಸ್ಟ್ ಪಂದ್ಯ ಟ್ರಿನಿಡಾಡ್ನಲ್ಲಿ ನಡೆಯಲಿದೆ. ಬಳಿಕ ಜುಲೈ 27, 29ರಂದು ಮೊದಲೆರಡು ಏಕದಿನಕ್ಕೆ ಬಾರ್ಬಡಾಸ್, ಆಗಸ್ಟ್ 1ರಂದು 3ನೇ ಏಕದಿನಕ್ಕೆ ಟ್ರಿನಿಡಾಡ್ ಆತಿಥ್ಯ ವಹಿಸಲಿದೆ.
ಇನ್ನು ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ.
ನಿಧಾನಗತಿ ಬೌಲಿಂಗ್: ಭಾರತ, ಆಸೀಸ್‌ಗೆ ದಂಡ!
ದುಬೈ: ಸತತ 2ನೇ ಬಾರಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಸೋತ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಫೈನಲ್ ಪಂದ್ಯದ ನಿಧಾನಗತಿ ಬೌಲಿಂಗ್‌ಗಾಗಿ ಟೀಂ ಇಂಡಿಯಾದ ಎಲ್ಲಾ ಆಟಗಾರರಿಗೂ ಪಂದ್ಯದ ಸಂಭಾವನೆಯ ಶೇ.100ರಷ್ಟುದಂಡ ವಿಧಿಸಲಾಗಿದೆ. ಇದೇ ವೇಳೆ ಆಸ್ಪ್ರೇಲಿಯಾ ಆಟಗಾರರಿಗೆ ಶೇ.80 ದಂಡ ವಿಧಿಸಿ ಐಸಿಸಿ ಆದೇಶಿಸಿದೆ. ಭಾರತ ನಿಗದಿತ ಸಮಯದ ವೇಳೆ 5 ಓವರ್ ಕಡಿಮೆ ಎಸೆದ ಕಾರಣ ಪ್ರತಿ ಓವರ್ಗೆ ಶೇ.20ರಂತೆ ಸಂಪೂರ್ಣ ಸಂಭಾವನೆಯನ್ನು ಆಟಗಾರರು ದಂಡದ ರೂಪದಲ್ಲಿ ಕಟ್ಟಬೇಕಿದೆ. ಆಸೀಸ್ 4 ಓವರ್ ಕಡಿಮೆ ಎಸೆದಿತ್ತು. ಭಾರತದ ಆಟಗಾರರು ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ ರು. ಸಂಭಾವನೆ ಪಡೆಯಲಿದ್ದಾರೆ.
ಅಕ್ಟೋಬರ್ 15ಕ್ಕೆ ಭಾರತ vs ಪಾಕ್ ಏಕದಿನ ವಿಶ್ವಕಪ್ ಕದನ..! ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಗಿಲ್‌ಗೆ 115% ದಂಡ
ಇದೇ ವೇಳೆ ವಿವಾದಾತ್ಮಕ ಕ್ಯಾಚ್‌ಗೆ ಬಲಿಯಾಗಿದ್ದ ಶುಭ್ಮನ್ ಗಿಲ್, ಅಂಪೈರ್ ತೀರ್ಪು ಪ್ರಶ್ನಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದ್ದಕ್ಕೆ ಹೆಚ್ಚುವರಿ ಶೇ.15ರಷ್ಟುದಂಡ ವಿಧಿಸಲಾಗಿದೆ. ಗ್ರೀನ್ ತಮ್ಮ ಕ್ಯಾಚ್ ಹಿಡಿಯುತ್ತಿರುವ ಫೋಟೋವನ್ನು ಶೇರ್ ಮಾಡಿದ್ದ ಗಿಲ್, ದುರ್ಬೀನು ಚಿಹ್ನೆಯ ಮೂಲಕ ಅಂಪೈರ್ ನಿರ್ಧಾರವನ್ನು ಟೀಕಿಸಿದ್ದರು.
ಟೆಸ್ಟ್ ಫೈನಲ್ ಸಿದ್ಧತೆಗೆ 20-25 ದಿನ ಬೇಕು
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಟೂರ್ನಿಯ ಫೈನಲ್ಗೆ ಬೆಸ್ಟ್ ಆಫ್ ತ್ರೀ (3 ಪಂದ್ಯಗಳ ಸರಣಿ) ಆಡಿಸುವುದು ಉತ್ತಮ ಎಂದು ಭಾರತದ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದಕ್ಕೆ ಸಮಯ ಒದಗಿಸುವುದು ಸವಾಲಾಗಬಹುದು ಎಂಬುದನ್ನೂ ರೋಹಿತ್ ಒಪ್ಪಿಕೊಂಡಿದ್ದಾರೆ. ಭಾನುವಾರ ಆಸ್ಪ್ರೇಲಿಯಾ ವಿರುದ್ಧ ಫೈನಲ್ ಸೋತ ಬಳಿಕ ಪ್ರತಿಕ್ರಿಯಿಸಿದ ಅವರು, ‘2 ವರ್ಷ ಕಠಿಣ ಪರಿಶ್ರಮಪಟ್ಟು ಬಳಿಕ ಒಂದೇ ಫೈನಲ್ ಪಂದ್ಯ ಆಡುವುದಕ್ಕಿಂತ ಬೆಸ್ಟ್ ಆಫ್ ಥ್ರೀ ಉತ್ತಮ. ಮಹತ್ವದ ಟೂರ್ನಿಗೂ ಮುನ್ನ ಸಿದ್ಧತೆಗೆ 20-25 ದಿನ ಸಮಯ ಅಗತ್ಯ ಎಂದು ತಿಳಿಸಿದ್ದಾರೆ. ಅಲ್ಲದೇ, ನಾವು ಮುಂದೆ ಏಕದಿನ ವಿಶ್ವಕಪ್ ಆಡಬೇಕಿದೆ. ಅದಕ್ಕೆ ಹೊಸ ರೀತಿಯ ಯೋಜನೆಗಳನ್ನು ಮಾಡಲಿದ್ದೇವೆ’ ಎಂದಿದ್ದಾರೆ.