
ಇಂದೋರ್: ಸಿಕ್ಕಿಂ ವಿರುದ್ಧ ಮುಸ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಗುರುವಾರ ಬರೋಡಾ ರನ್ ಮಳೆ ಸುರಿಸಿದೆ. ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು ಕೊಂಡು ಬರೋಬ್ಬರಿ 349 ರನ್ ಕಲೆಹಾಕಿತು. ಇದು ಟಿ20 ಕ್ರಿಕೆಟ್‌ನಲ್ಲೇ ತಂಡವೊಂದರ ಗರಿಷ್ಠ, ಇತ್ತೀಚೆಗಷ್ಟೇ ಗಾಂಬಿಯಾ ವಿರುದ್ಧ ಜಿಂಬಾಬ್ವೆ 344 ರನ್ ಕಲೆಹಾಕಿತ್ತು. ಅಲ್ಲದೆ, ಭಾರತದಲ್ಲಿ ಮತ್ತು ಭಾರತದ ತಂಡವೊಂದರಿಂದ ದಾಖಲಾದ ಮೊದಲ 300+ ಸೋರ್.
ಮೊದಲು ಬ್ಯಾಟ್ ಮಾಡಿದ ಬರೋಡಾ ಪರ ಭಾನು ಪನಿಯಾ ಅಬ್ಬರದ ಬ್ಯಾಟಿಂಗ್ ನಡೆಸಿದರು. 3ನೇ ಕ್ರಮಾಂಕದಲ್ಲಿ ಆಡಿದ ಅವರು 51 ಎಸೆತಗಳಲ್ಲಿ 5 ಬೌಂಡರಿ, 15 ಸಿಕ್ಸರ್‌ಗಳೊಂದಿಗೆ ಔಟಾಗದೆ 134 ರನ್ ಸಿಡಿಸಿದರು. ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 50, ಅಭಿಮನ್ಯು ಸಿಂಗ್ 17 ಎಸೆತಗಳಲ್ಲಿ 53, ಶಾಶ್ವತ್ ರಾವತ್ 16 ಎಸೆತಗಳಲ್ಲಿ 43 ರನ್ ಚಚ್ಚಿದರು. ಇನ್ನಿಂಗ್ಸ್‌ನಲ್ಲಿ ಒಟ್ಟು 37 ಸಿಕ್ಸರ್‌ಗಳಿದ್ದವು. ಇದು ಟಿ20ಯಲ್ಲೇ ಗರಿಷ್ಠ. ಗಾಂಬಿಯಾ ವಿರುದ್ಧ ಜಿಂಬಾಬ್ಬೆ 27 ಸಿಕ್ಸರ್ ಬಾರಿಸಿದ್ದು ಈ ವರೆಗಿನ ದಾಖಲೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; 3 ಮೇಜರ್ ಚೇಂಜ್!
ಬೃಹತ್ ಗುರಿ ಬೆನ್ನತ್ತಿದ ಸಿಕ್ಕಿಂ 20 ಓವರಲ್ಲಿ 7 ವಿಕೆಟ್‌ಗೆ 86 ರನ್ ಗಳಿಸಿ, 263 ರನ್‌ಗಳಿಂದ ಹೀನಾಯ ಸೋಲು ಕಂಡಿತು. ಇದು ಟಿ20ಯಲ್ಲಿ 4ನೇ ದೊಡ್ಡ ಗೆಲುವು. ಗಾಂಬಿಯಾ ವಿರುದ್ಧ ಜಿಂಬಾಬೈ 290 ರನ್‌ಗಳಿಂದ ಗೆದ್ದಿದ್ದು ದಾಖಲೆ.
28 ಎಸೆತಗಳಲ್ಲೇ ಸೆಂಚುರಿ: ಅಭಿಷೇಕ್ ಶರ್ಮಾ ದಾಖಲೆ
ಇಂದೋರ್: ಮೇಘಾಲಯ ವಿರುದ್ಧ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ 28 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ್ದಾರೆ.
ಇದು ಟಿ20ಯಲ್ಲಿ ಭಾರತೀಯ ಬ್ಯಾಟರ್‌ನ ಜಂಟಿ ಅತಿ ವೇಗದ ಶತಕ. ಕಳೆದ ವಾರ ಗುಜರಾತ್‌ನ ಊರ್ವಿಲ್ ಪಟೇಲ್ ಕೂಡಾ 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. 2018ರಲ್ಲಿ ರಿಷಭ್ ಪಂತ್ ಹಿಮಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ 32 ಎಸೆತಗಳಲ್ಲಿ ಶತಕ ಬಾರಿಸಿದ್ದು ಇತ್ತೀಚಿನ ವರೆಗೂ ದಾಖಲೆಯಾಗಿತ್ತು.
ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗೆ ನನ್ನ ಹೆಸರೂ ಇಡಿ: ಕೆ ಎಲ್ ರಾಹುಲ್ ಇಂಗಿತ
28 ಎಸೆತಗಳಲ್ಲೇ ಸೆಂಚುರಿ: ಅಭಿಷೇಕ್ ಶರ್ಮಾ ದಾಖಲೆ
ಅಭಿಷೇಕ್ ಸಿಡಿಸಿದ್ದು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಜಂಟಿ 2ನೇ ಅತಿ ವೇಗದ ಶತಕ. ಕಳೆದ ಜೂನ್‌ನಲ್ಲಿ ಸಿಪ್ರಸ್ ವಿರುದ್ಧ ಪಂದ್ಯದಲ್ಲಿ ಎಸ್ಟೋನಿಯಾದ ಸಾಹಿಲ್ ಚೌಹಾಣ್ 27 ಎಸೆತದಲ್ಲಿ ಸೆಂಚುರಿ ಬಾರಿಸಿದ್ದು ದಾಖಲೆಯಾಗಿಯೇ ಉಳಿದಿದೆ.
ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೇಘಾಲಯ 20 ಓವರಲ್ಲಿ 7 ವಿಕೆಟ್‌ಗೆ 142 ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಪಂಜಾಬ್‌ಗೆ ಅಭಿಷೇಕ್ ನೆರವಾದರು. ಅವರು ಒಟ್ಟು 29 ಎಸೆತಗಳಲ್ಲಿ 8 ಬೌಂಡರಿ, 11 ಸಿಕ್ಸರ್‌ಗಳೊಂದಿಗೆ 106 ರನ್ ಸಿಡಿಸಿ ಔಟಾಗದೆ ಉಳಿದರು. ತಂಡ 9.3 ಓವರ್‌ಗಳಲ್ಲೇ ಗೆಲುವು ಸಾಧಿಸಿತು.
ಟಿ20: ಗುಜರಾತ್ ವಿರುದ್ಧ ರಾಜ್ಯಕ್ಕೆ 48 ರನ್ ಸೋಲು
ಇಂದೋರ್: ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೆಲ ದಿನಗಳ ಹಿಂದೆಯೇ ನಾಕೌಟ್ ರೇಸ್‌ನಿಂದ ಹೊರಬಿದ್ದಿದ್ದ ರಾಜ್ಯ ತಂಡ ಗುಂಪು ಹಂತದ ಕೊನೆ ಪಂದ್ಯದಲ್ಲಿ ಗುರುವಾರ ಗುಜರಾತ್ ವಿರುದ್ಧ 48 ರನ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತಂಡ ಒಟ್ಟು 7 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದರೆ, 4ರಲ್ಲಿ ಸೋಲನುಭವಿಸಿದೆ. ಈ ಗೆಲುವಿನ ಹೊರತಾಗಿಯೂ ಗುಜರಾತ್ ನಾಕೌಟ್ ಪ್ರವೇಶಿಸಲಿಲ್ಲ. ತಂಡ 3ನೇ ಸ್ಥಾನಿಯಾಯಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ 5 ವಿಕೆಟ್‌ಗೆ 251 ರನ್ ಕಲೆಹಾಕಿತು. ಆರ್ಯ ದೇಸಾಯಿ 73, ನಾಯಕ ಅಕ್ಷರ್ ಪಟೇಲ್ ಔಟಾಗದೆ 56(20 ಎಸೆತ), ಅಭಿಷೇಕ್ ದೇಸಾಯಿ 47 ರನ್ ಸಿಡಿಸಿದರು. ರಾಜ್ಯದ ಪರ ಮನೋಜ್, ಕೌಶಿಕ್ ತಲಾ 2 ವಿಕೆಟ್ ಕಿತ್ತರು.
ಬೃಹತ್ ಗುರಿ ಬೆನ್ನತ್ತಿದ ರಾಜ್ಯ ತಂಡ 19.1 ಓವರಲ್ಲಿ 203 ರನ್‌ಗೆ ಆಲೌಟಾಯಿತು. ನಾಯಕ ಮಯಾಂಕ್ 20 ಎಸೆತಕ್ಕೆ 45, ಸ್ಮರಣ್ 21 ಎಸೆತಕ್ಕೆ 49 ರನ್ ಸಿಡಿಸಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.