
ದುಬೈ: ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾನುವಾರ ಮತ್ತೆ ಪರಸ್ಪರ ಸೆಣಸಾಡಲಿವೆ. ಕಳೆದ ವಾರ ಭಾರೀ ಹೈಡ್ರಾಮಕ್ಕೆ ಕಾರಣವಾಗಿದ್ದ ದುಬೈ ಕ್ರೀಡಾಂಗಣದಲ್ಲೇ ಈ ಬಾರಿಯೂ ಮುಖಾಮುಖಿಯಾಗಲಿವೆ. ಇದು ಏಷ್ಯಾಕಪ್‌ನ ಸೂಪರ್-4 ಹಂತದ ಪಂದ್ಯವಾಗಿದ್ದು, ಫೈನಲ್ ದೃಷ್ಟಿಯಲ್ಲಿ ಉಭಯ ತಂಡಗಳಿಗೂ ಗೆಲುವು ಅನಿವಾರ್ಯ.
'ಎ' ಗುಂಪಿನಲ್ಲಿ ಭಾರತ, ಪಾಕ್ ಸೆ.14ರಂದು ಪರಸ್ಪರ ಸೆಣಸಾಡಿದ್ದವು. ಭಾರತ ಸುಲಭ ಗೆಲುವು ಸಾಧಿಸಿದ್ದರೂ, ಪಂದ್ಯ ಭಾರೀ ಹೈಡ್ರಾಮ ಸೃಷ್ಟಿಸಿತ್ತು. ಪಹಲ್ಗಾಂ ಉಗ್ರ ದಾಳಿ ಖಂಡಿಸಿ ಭಾರತೀಯ ಆಟಗಾರರು ಗುಂಪು ಹಂತದ ಪಂದ್ಯದ ವೇಳೆ ಪಾಕ್ ಆಟಗಾರರ ಕೈ ಕುಲುಕಲು ನಿರಾಕರಿಸಿದ್ದರು. ಅವರನ್ನು ಕಣ್ಣೆತ್ತಿ ನೋಡದೆ, ಮಾತನಾಡಿದೆ, ಗೆಲುವಿನ ಬಳಿಕ ಅಭಿನಂದನೆ ಸ್ವೀಕರಿಸದೆ ತಮ್ಮದೇ ರೀತಿಯಲ್ಲಿ ಪ್ರತಿಭಟಿಸಿದ್ದರು. ಭಾರತದ ಈ ನೀತಿ ಭಾನುವಾರವೂ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಟೂರ್ನಿಯ ಪ್ರದರ್ಶನ ಹಾಗೂ ತಂಡದ ಒಟ್ಟಾರೆ ಬಲಾಬಲ ಗಮನಿಸಿದರೆ ಸೂಪರ್-4 ಪಂದ್ಯದಲ್ಲೂ ಭಾರತವೇ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಗುಂಪು ಹಂತದಲ್ಲಿ ಬದ್ಧವೈರಿಯನ್ನು ಸುಲಭದಲ್ಲಿ ಬಗ್ಗುಬಡಿದಿದ್ದ ತಂಡ, ಮತ್ತೊಂದು ಸುಲಭ ಗೆಲುವಿನ ವಿಶ್ವಾಸದಲ್ಲಿದೆ. ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ಒದಗಿಸುತ್ತಿದ್ದು, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮನ್, ತಿಲಕ್ ವರ್ಮಾ ಕೂಡಾ ಉತ್ತಮ ಲಯದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಆಲ್ರೌಂಡರ್ ಆಟ ತಂಡಕ್ಕೆ ನಿರ್ಣಾಯಕ. ಆದರೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆಗುವುದು ಖಚಿತ. ಒಮಾನ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ವಿಶ್ವ ನಂ.1 ಸ್ಪಿನ್ನರ್ ವರುಣ್ ಚಕ್ರವರ್ತಿ ತಂಡಕ್ಕೆ ಮರಳಲಿದ್ದಾರೆ. ಅವರಿಗೆ ಅರ್ಶ್‌ದೀಪ್ ಹಾಗೂ ಹರ್ಷಿತ್ ರಾಣಾ ಜಾಗ ಬಿಟ್ಟುಕೊಡಬೇಕಾಗಬಹುದು. ದುಬೈ ಪಿಚ್ ನಿಧಾನವಾಗಿ ವರ್ತಿಸುವುದರಿಂದ ಮತ್ತೆ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಲಿದೆ.
ಗುಂಪು ಹಂತದಲ್ಲಿ ಹೀನಾಯ ಸೋಲಿನ ಜೊತೆಗೆ ಭಾರತ ತಂಡದ ಆಟಗಾರರ ನಡೆಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ, ಈಗ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಆದರೆ ತಂಡದ ಪ್ರದರ್ಶನ, ಆಟಗಾರರ ಆತ್ಮವಿಶ್ವಾಸ ಗಮನಿಸಿದರೆ ಇದು ಕಷ್ಟಸಾಧ್ಯ. ಟಿ20ಗೆ ಹೇಳಿ ಮಾಡಿಸಿದ ತಂಡದಂತಿದ್ದ ಪಾಕ್ ಈಗ ಆಟ ಮರೆತಂತಿದೆ. ಬ್ಯಾಟರ್‌ಗಳು ಸದ್ದು ಮಾಡುತ್ತಿಲ್ಲ. ಬೌಲಿಂಗ್ ವಿಭಾಗ ಕೂಡಾ ಸಪ್ಪೆಯಾಗಿದೆ. ಸೈಮ್ ಅಯೂಬ್ 3 ಪಂದ್ಯಗಳಲ್ಲೂ ಸೊನ್ನೆ ಸುತ್ತಿದ್ದು, ನಾಯಕ ಸಲ್ಮಾನ್ ಆಘಾ, ಹ್ಯಾರಿಸ್, ನವಾಜ್ ಕೂಡಾ ಅಬ್ಬರಿಸುತ್ತಿಲ್ಲ. ಫಖರ್ ಜಮಾನ್ ಲಯದಲ್ಲಿದ್ದರೂ, ಇತರರಿಂದ ಬೆಂಬಲ ಸಿಗಬೇಕಿದೆ. ಶಾಹೀನ್ ಅಫ್ರಿದಿ ಬೌಲಿಂಗ್‌ಗಿಂತ ಬ್ಯಾಟಿಂಗ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ಪಂದ್ಯಕ್ಕೆ ಮುನ್ನಾ ದಿನ ಉಭಯ ತಂಡಗಳು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಆದರೆ ಪಾಕ್ ತಂಡ ಶನಿವಾರ ಸುದ್ದಿಗೋಷ್ಠಿ ಬಹಿಷ್ಕರಿಸಿತು. ಯುಎಇ ವಿರುದ್ಧ ಗುಂಪು ಹಂತದ ಪಂದ್ಯಕ್ಕೂ ಮುನ್ನ ಕೂಡಾ ಪಾಕಿಸ್ತಾನ ಸುದ್ದಿಗೋಷ್ಠಿ ರದ್ದುಗೊಳಿಸಿತ್ತು.
ಭಾರತದ ಹಸ್ತಲಾಘವ ನಿರಾಕರಣೆಗೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಕಾರಣ ಎಂದು ಪಾಕ್ ದೂರಿತ್ತು. ರೆಫ್ರಿಯನ್ನು ವಜಾಗೊಳಿಸಲು ಐಸಿಸಿಗೆ ಎರಡೆರಡು ಬಾರಿ ಮಾಡಿತ್ತು. ಇದಕ್ಕೆ ಐಸಿಸಿ ಒಪ್ಪಿರಲಿಲ್ಲ. ಈ ನಡುವೆ ಭಾನುವಾರದ ಪಂದ್ಯಕ್ಕೂ ಪೈಕ್ರಾಫ್ಟ್ ಮ್ಯಾಚ್ ರೆಫ್ರಿ ಆಗಿರಲಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ತಂಡ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ ತಂಡ ಸೈಮ್ ಆಯೂಬ್, ಫರ್ಹಾನ್, ಹಾರಿಸ್, ಫಖರ್ ಜಮಾನ್, ಸಲ್ಮಾನ್ ಆಘಾ(ನಾಯಕ), ಖುಶ್ದಿಲ್, ಹಸನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್.
ದುಬೈ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿದೆ. ಈ ಬಾರಿ ಏಷ್ಯಾ ಕಪ್‌ನ 6 ಪಂದ್ಯಗಳಲ್ಲೂ ಯಾವುದೇ ತಂಡದ ಸ್ಕೋರ್ 160 ದಾಟಿಲ್ಲ. ರಾತ್ರಿ ವೇಳೆ ಮಂಜು ಬೀಳುವ ಕಾರಣ ಚೇಸಿಂಗ್ ತಂಡಕ್ಕೆ ಉಪಯೋಗವಾಗಲಿದೆ. ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಪಂದ್ಯ ಆರಂಭ: ರಾತ್ರಿ 8.00 ಗಂಟೆಗೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲೈವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.